| ಎಸ್.ಎಸ್.ಸಂದೀಪ ಸಾಗರ, ಕಾರವಾರ
ಮಾನ್ಯ ಮುಖ್ಯಮಂತ್ರಿಯವರೇ, ನಮ್ಮ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi-Specialty Hospital) ಕೊಡಿ, ನಮ್ಮ ತ್ಯಾಗಕ್ಕೊಂದು ಅರ್ಥ ಕಲ್ಪಿಸಿ. ದೇಶಕ್ಕಾಗಿ ಎಲ್ಲವನ್ನೂ ಕೊಟ್ಟ ನಮಗೆ ʼಆರೋಗ್ಯʼದ ಶ್ರೀರಕ್ಷೆ ನಿಮ್ಮಿಂದ ಸಿಗಲಿ.
WeNeedEmergencyHospitalInUttarakannada (#ಉತ್ತರಕನ್ನಡ ಜಿಲ್ಲೆಗೆ ಬೇಕು ತುರ್ತುನಿಗಾ ಆಸ್ಪತೆ). ಇದು ಉತ್ತರ ಕನ್ನಡ ಜಿಲ್ಲೆಯ ಒಕ್ಕೊರಲ ಕೂಗು. ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿ ಕೇಳಿ ಸುಸ್ತಾದ ಜಿಲ್ಲೆಯ ಜನ ಇದೀಗ ಮುಖ್ಯಮಂತ್ರಿಯವರಿಗೇ ಮೊರೆ ಇಡುತ್ತಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ನಿಟ್ಟಿನಲ್ಲಿ ಅಭಿಯಾನವನ್ನೇ ಮಾಡುತ್ತಿದ್ದಾರೆ.
ಅನೇಕ ವಿದ್ಯುತ್ ಯೋಜನೆಗಳನ್ನು ಕೊಟ್ಟು ರಾಜ್ಯದ ಪಾಲಿಗೆ ಬೆಳಕಾಗಿರುವ ವಿಭಿನ್ನ ಭೌಗೋಳಿಕ ಪ್ರದೇಶವನ್ನು ಹೊಂದಿರುವ ಈ ಜಿಲ್ಲೆ ಅಕ್ಷರಶಃ ಕತ್ತಲಲ್ಲಿಯೇ ಇದೆ. ಸ್ವಾತಂತ್ರ್ಯಬಂದು 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೆಡಿಕಲ್ ಕಾಲೇಜು ಇದ್ದರೂ ಇಲ್ಲ ಯಾಕೆ?
ಕಾರವಾರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿ 6 ವರ್ಷ ಕಳೆದಿದೆ. ಇಲ್ಲಿ ಒಂದು ಮಟ್ಟಿಗೆ ಚಿಕಿತ್ಸೆ ದೊರೆಯುತ್ತಿದೆಯಾದರೂ ಅತ್ಯುತ್ತಮ ಎಂದು ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯ ಇಲ್ಲ. ತಜ್ಞ ವೈದ್ಯರ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಉದಾಹರಣೆಗೆ ಹೇಳುವುದಾದರೆ ಕ್ಯಾನ್ಸರ್, ನ್ಯೂರೋ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ನುರಿತ ವೈದ್ಯರು ಇಲ್ಲಿ ಸಿಗುತ್ತಿಲ್ಲ.
ಅದೂ ಅಲ್ಲದೆ, ತುರ್ತು ಸೇವೆಯಡಿ ಪ್ರಥಮ ಚಿಕಿತ್ಸೆಗೆ ಒಂದೇ ಒಂದು ಟ್ರಾಮಾ ಸೆಂಟರ್ ಸಹ ಜಿಲ್ಲೆಯಲ್ಲಿ ಇಲ್ಲ. ಇನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ದೂರದ ಮಾತು ಎನ್ನುವಂತಾಗಿದೆ. ಇದ್ದ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರು ಇಲ್ಲ. ಅಪಘಾತಗಳು ಸಂಭವಿಸಿದರೆ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ನ್ಯೂರೋ ಸರ್ಜನ್‌ಗಳೂ ಇಲ್ಲಿ ಸಿಗುವುದಿಲ್ಲ. ಇದಕ್ಕಾಗಿ ಬೇರೆ ಜಿಲ್ಲೆಗಳನ್ನೇ ಅನುಸರಿಸಬೇಕು. ಹೀಗೆ ಹೋಗಬೇಕೆಂದರೆ ಕನಿಷ್ಠ ಮೂರು ತಾಸು ಪ್ರಯಾಣ ಮಾಡಲೇಬೇಕಿದೆ. ಇದರಿಂದಾಗಿ ತುರ್ತು ಚಿಕಿತ್ಸೆ ಸಿಗದೇ ಬಹಳಷ್ಟು ರೋಗಿಗಳು ಮೃತಪಡುತ್ತಿದ್ದಾರೆ.
ಆರೋಗ್ಯ ತೀವ್ರ ಹದಗೆಟ್ಟರೆ ಜೀವಕ್ಕಿಲ್ಲ ಖಾತ್ರಿ
ಉತ್ತರಕನ್ನಡ ಭೌಗೋಳಿಕ ಪ್ರದೇಶ ವಿಭಿನ್ನವಾಗಿದೆ. ಘಟ್ಟದ ಮೇಲೆ ಹಾಗೂ ಕರಾವಳಿ ತಾಲೂಕುಗಳು ಎಂದು ಕರೆಯಲಾಗುತ್ತವೆ. ಒಟ್ಟು 12 ತಾಲೂಕುಗಳಿದ್ದು, ಆರೋಗ್ಯ ಪರಿಸ್ಥಿತಿ ಹದಗೆಟ್ಟರೆ ಇಲ್ಲಿನ ಒಂದೊಂದು ಭಾಗದವರು ಒಂದೊಂದು ಜಿಲ್ಲೆಗಳಿಗೆ ಓಡುವ ಪರಿಸ್ಥಿತಿ ಇದೆ. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರೆ ಮಾತ್ರ ಯಾರ ಜೀವಕ್ಕೂ ಖಾತ್ರಿ ಇಲ್ಲ ಎನ್ನುವಂತಾಗಿದೆ.
ದಶಕಗಳ ಕೂಗಿಗೆ ಇಲ್ಲ ಸ್ಪಂದನೆ
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕು ಎನ್ನುವುದು ನಿನ್ನೆ ಮೊನ್ನೆಯ ಕೂಗಲ್ಲ. ಇದು ದಶಕಗಳ ಕೂಗಾಗಿದೆ. ಆದರೆ, ಇಲ್ಲಿಂದ ಅಧಿಕಾರ ಪಡೆದುಕೊಂಡ ಯಾವೊಬ್ಬ ಜನಪ್ರತಿನಿಧಿಗಳೂ ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ನೋವು, ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗುತ್ತಲೇ ಬಂದಿದೆ. ಈ ಬಗ್ಗೆ ಹಲವಾರು ಅಭಿಯಾನಗಳು, ಪ್ರತಿಭಟನೆಗಳು ನಡೆದಿವೆ. ಆದರೆ, ಸಮಸ್ಯೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.
ಆದರೆ, ಇದೇ ಜುಲೈ 20ರಂದು ಉತ್ತರಕನ್ನಡ ಜಿಲ್ಲೆಯ ಗಡಿ ಭಾಗದ ಉಡುಪಿಯ ಬೈಂದೂರು ತಾಲೂಕಿನ ಶಿರೂರು ಟೋಲ್‌ನಲ್ಲಿ ನಡೆದ ಭೀಕರ ಆಂಬ್ಯುಲೆನ್ಸ್ ಅಪಘಾತ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟ ವಿಷಯ ಹಾಗೂ ವಿಡಿಯೊ ಹೊರಬೀಳುತ್ತಿದ್ದಂತೆ ಜನತೆಯ ಆಕ್ರೋಶದ ಕಟ್ಟೆ ಒಡೆದಿದೆ. ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದೇ ಇರುವುದಕ್ಕೆ ಅಮಾಯಕ ಬಡಕುಟುಂಬದವರ ಜೀವಹಾನಿಯಾಗಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.
ಅಪಘಾತ, ಆರೋಗ್ಯ ಚಿಕಿತ್ಸೆಗೆ ಹೋಗಬೇಕೆಲ್ಲಿಗೆ?
ಕರಾವಳಿ ಭಾಗವಾದ ಭಟ್ಕಳ, ಹೊನ್ನಾವರ, ಕುಮಟಾದ ಜನತೆ ಯಾವುದೇ ಅಪಘಾತ ಅಥವಾ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಉಡುಪಿ, ಮಂಗಳೂರು ಭಾಗದ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹಾಗೆಯೇ ಅಂಕೋಲಾ, ಕಾರವಾರದ ಜನತೆ ಉಡುಪಿ, ಮಂಗಳೂರು, ಪಕ್ಕದ ಗೋವಾ ರಾಜ್ಯದ ಆಸ್ಪತ್ರೆಗೆ ತೆರಳುತ್ತಾರೆ. ಇನ್ನು ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ಹಾಗೂ ಹಳಿಯಾಳ ತಾಲೂಕುಗಳ ಜನ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗದ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.
ನೂರಾರು ಕಿ.ಮೀ., ಮೂರು ತಾಸು ಪ್ರಯಾಣ!
ಕಾರವಾರದಿಂದ ಪಕ್ಕದ ಗೋವಾ ರಾಜ್ಯದ ಬಾಂಬೋಲಿ ಆಸ್ಪತ್ರೆಗೆ 100 ಕಿಮೀ ದೂರವಿದ್ದು, ಉಡುಪಿ, ಮಂಗಳೂರಿಗೆ ಕನಿಷ್ಠ 200ರಿಂದ 300 ಕಿಮೀ ಪ್ರಯಾಣಿಸಬೇಕು. ಭಟ್ಕಳದಿಂದ ಮಣಿಪಾಲ ಆಸ್ಪತ್ರೆಗೆ ತೆರಳಬೇಕಾದರೂ ಕನಿಷ್ಠ 100 ಕಿ.ಮೀ. ಪ್ರಯಾಣಿಸಲೇಬೇಕು. ಇನ್ನು ಶಿರಸಿಯಿಂದ ಹುಬ್ಬಳ್ಳಿಗೆ 110 ಕಿಮೀ ದೂರವಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 140 ಕಿಮೀ ದೂರ ತೆರಳಬೇಕು. ಜಿಲ್ಲೆಯ ಬಹುತೇಕ ಯಾವುದೇ ತಾಲೂಕುಗಳಿಂದ ನೆರೆಯ ಜಿಲ್ಲೆ, ರಾಜ್ಯದ ಯಾವುದೇ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಬೇಕಿದ್ದಲ್ಲಿ ಕನಿಷ್ಠ 100 ಕಿಮೀ ದೂರವನ್ನು ಕ್ರಮಿಸಲೇಬೇಕಿದ್ದು, ಹಲವು ಬಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ರೋಗಿಗಳು ಕೊನೆಯುಸಿರೆಳೆದಿರುವ ಎಷ್ಟೋ ಪ್ರಕರಣಗಳು ನಡೆದಿವೆ.
ಹಲವು ವರ್ಷಗಳ ಅಭಿಯಾನ
ಕಳೆದ ಐದಾರು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡು, ಆಸ್ಪತ್ರೆಗೆ ಸೇರುವ ಮುನ್ನ ಮೃತಪಡುತ್ತಿರುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಗಳಿಂದಾಗಿಯೇ ಪ್ರತಿವರ್ಷ ಸಾವಿರಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಿದ್ದು, ಸರಾಸರಿ 200ಕ್ಕೂ ಅಧಿಕ ಸಾವುಗಳಾಗುತ್ತಿವೆ. ಇನ್ನು ಆರೋಗ್ಯದಿಂದ ಕ್ರಮಿಸಲಾಗದೆ ಮೃತಪಟ್ಟವರ ಸಂಖ್ಯೆ ಬಹಳಷ್ಟಿದೆ. ಹೀಗಾಗಿ 2019ರಲ್ಲಿ ಜಿಲ್ಲೆಯ ಕೆಲ ಯುವಕರು ಸೇರಿ We Need Emergency Hospital in Uttara kannada ಎನ್ನುವ ಹ್ಯಾಷ್‌ಟ್ಯಾಗ್‌ನಡಿ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದರು. ಇದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ಬಂದು, ಶೀಘ್ರವೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಸರ್ಕಾರಗಳು, ಮುಖ್ಯಮಂತ್ರಿಗಳು ಬದಲಾದರೂ ತುರ್ತು ಆಸ್ಪತ್ರೆ ಭರವಸೆ ಭರವಸೆಯಾಗಿಯೇ ಉಳಿದಿದೆ.
ಆಸ್ಪತ್ರೆಗಾಗಿ ಸೋಷಿಯಲ್ ಮೀಡಿಯಾ ಟ್ರೋಲ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲದೇ ಆಗುತ್ತಿರುವ ಸಮಸ್ಯೆ ತೀವ್ರತೆಯನ್ನು ಸರ್ಕಾರಕ್ಕೆ ಅರ್ಥ ಮಾಡಿಸುವ ಸಂಬಂಧ ತರಹೇವಾರು ರೀತಿಯಲ್ಲಿ ಟ್ವೀಟ್‌ಗಳು, ಕಮೆಂಟ್‌ಗಳು, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಬ್ಬರು “ಮಲ್ಟಿ ಆಸ್ಪತ್ರೆಗೆ 200 ಕಿ.ಮೀ., ಸ್ಮಶಾನಕ್ಕೆ ೦ ಕಿ.ಮೀ.” ಎಂದು ಹಾಕಿದ್ದರೆ. ಮತ್ತೊಬ್ಬರು, ಉತ್ತರ ಕನ್ನಡ ಜಿಲ್ಲೆಗೆ ಸುಸ್ವಾಗತ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಜೀವದ ಮೇಲೆ ಆಸೆ ಇದ್ದವರು ನಿಧಾನವಾಗಿ ವಾಹನವನ್ನು ಚಲಾಯಿಸಿ” ಎಂದು ಪೋಸ್ಟರ್ ಹರಿಬಿಟ್ಟಿದ್ದಾರೆ. ಇದೇ ರೀತಿಯಾಗಿ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
40 ವರ್ಷದಲ್ಲಿ 35021 ಹೆಕ್ಟೇರ್ ಪ್ರದೇಶ ಬಳಕೆ
ಉತ್ತರ ಕನ್ನಡ ಸಮೃದ್ಧವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಯಾಗಿದೆ. ಆದರೆ, ಕಳೆದ 40 ವರ್ಷದಲ್ಲಿ 35021 ಹೆಕ್ಟೇರ್ ಅರಣ್ಯ ಪ್ರದೇಶವನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಅಂದರೆ 1973ರಲ್ಲಿ 8,55,854 ಹೆಕ್ಟೇರ್ ಅರಣ್ಯ ಭೂಮಿ ಇತ್ತು. ಅಂದರೆ, ಇದು ಉತ್ತರ ಕನ್ನಡ ಜಿಲ್ಲೆಯ ಒಟ್ಟಾರೆ ಭೂಭಾಗದಲ್ಲಿ ಶೇ. 83.17 ರಷ್ಟು ಅರಣ್ಯ ಪ್ರದೇಶವಾಗಿದೆ. ಆದರೆ, 2013ರಲ್ಲಿ ಶೇ. 52.71ರಷ್ಟು ಅಂದರೆ 5,42,474 ಹೆಕ್ಟೇರ್‌ಗೆ ಇಳಿದಿದೆ.
ಯಾವ ಯಾವ ಮಹತ್ವದ ಯೋಜನೆಗಳು?
ಕೈಗಾ, ಸೀಬರ್ಡ್, ಕಾಳಿ ಯೋಜನೆಯಡಿ 5 ಅಣೆಕಟ್ಟುಗಳು ಮತ್ತು ಶರಾವತಿ ಜಲವಿದ್ಯುತ್ ಯೋಜನೆಯಡಿ 1 ಅಣೆಕಟ್ಟು ಹಾಗೂ ಕೊಂಕಣ ರೈಲ್ವೆ, ದಾಂಡೇಲಿಯಲ್ಲಿ ಕಾರ್ಖಾನೆಗಳಿಗೆ ಸೇರಿದಂತೆ ಇನ್ನಿತರ ಹಲವಾರು ಯೋಜನೆಗಳಿಗೆ ಉತ್ತರ ಕನ್ನಡದ ಪ್ರದೇಶಗಳು ಬಳಕೆಯಾಗಿವೆ. ಲಕ್ಷಾಂತರ ಕುಟುಂಬದವರು ಈ ಯೋಜನೆಗಳಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಆದರೆ, ಬೇಕಿರುವ ಕನಿಷ್ಠ ಮೂಲ ಸೌಲಭ್ಯಗಳೇ ಇವರಿಗೆ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಜಿಲ್ಲೆಯಲ್ಲಿ ಕಳೆದ ಅನೇಕ ದಶಕಗಳಿಂದ ಆರ್.ವಿ.ದೇಶಪಾಂಡೆ ಸಚಿವರಾಗಿ ಅಧಿಕಾರ ನಡೆಸಿದ್ದರೆ, ಅನಂತಕುಮಾರ ಹೆಗಡೆ ಆರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾಧ್ಯಕ್ಷರು, ಕಾರ್ಮಿಕ ಸಚಿವರು ಸೇರಿ ಪ್ರಸ್ತುತ ಸರ್ಕಾರದ ಭಾಗವಾಗಿರುವ ಐವರು ಶಾಸಕರುಗಳೇ ಇದ್ದರೂ ಆಸ್ಪತ್ರೆಯ ವಿಚಾರವಾಗಿ ಈ ನಾಯಕರು ಜನರಿಗೆ ಯಾವುದೇ ಪ್ರಯೋಜನಕ್ಕಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಕೂಡ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರಾದ ರಮಾನಂದ ಅಂಕೋಲಾ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
2 ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು
ಶಿರೂರಿನಲ್ಲಿ ಬುಧವಾರ (ಜು.20) ನಡೆದ ಅಪಘಾತಕ್ಕೆ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲದಿರುವುದೇ ಕಾರಣ ಎಂದು ಹೇಳಬಹುದಾಗಿದೆ. ಬಹುಶಃ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಆಂಬ್ಯುಲೆನ್ಸ್ ಮೂಲಕ ಹೊರಜಿಲ್ಲೆಗೆ ತೆರಳುವ ಅನಿವಾರ್ಯತೆ ಕೂಡ ಇವರ‍್ಯಾರಿಗೂ ಬರುತ್ತಿರಲಿಲ್ಲ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಕಣ್ತೆರೆಯಬೇಕಿದೆ. ಜಿಲ್ಲೆಗೆ 2 ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ ಎಂದು ಸ್ಥಳೀಯ ಯುವಕ ರಾಘವ ನಾಯ್ಕ ಅವರು ವಿಸ್ತಾರ ನ್ಯೂಸ್‌ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.