ಬೆಂಗಳೂರು/ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ (Multi specialty hospital) ಬೇಡಿಕೆ ಕೂಗು ಹೆಚ್ಚಾಗಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ಉ.ಕ.ಜಿಲ್ಲೆಯ ೫೦೦ಕ್ಕೂ ಹೆಚ್ಚು ಮಂದಿ ಪ್ರತಿಭಟಿಸುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಕಿಡಿಕಾರಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ʻʻಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯ ಸರ್ಕಾರವನ್ನು ಬೈಯುತ್ತಲೇ ಇದ್ದೇನೆ. ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಈಗಲೂ ನಾವು ಆಸ್ಪತ್ರೆಗಾಗಿ ಪ್ರತಿಭಟಿಸುತ್ತಿದ್ದೇವೆ. ಒಬ್ಬನಾದರೂ ಅಯೋಗ್ಯ ಎಂಎಲ್‌ಎ ಬಂದಿದ್ದಾನಾ? ನನಗೆ ಅನಂತ್ ಕುಮಾರ್ ಹೆಗಡೆ ಅತ್ಯಂತ ಆಪ್ತರು. ಐದಾರು ಬಾರಿ ಗೆದ್ದರೂ ಐದು ಪೈಸೆ ಕೆಲಸ ಆಗಿಲ್ಲ ಎಂದು ಅಂಕಣ ಬರೆದಿದ್ದೆ. ನನಗೂ ಅವರಿಗೂ ದ್ವೇಷ ಇಲ್ಲ. ಆದರೆ, ಉತ್ತರ ಕನ್ನಡ ಯಾವ ಸ್ಥಿತಿಯಲ್ಲಿದೆ?ʼʼ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ | Multi specialty hospital | ಉತ್ತರ ಕನ್ನಡ ಆಸ್ಪತ್ರೆ ಹೋರಾಟ: ಬೆಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ
ಮನವಿ ಕೊಡಲು ಹೋದಾಗ ಸಿಗದ ಸಿಎಂ
ಪ್ರತಿಭಟನೆ ಬಳಿಕ ಉತ್ತರ ಕನ್ನಡ ಜಿಲ್ಲೆಯ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣಾಗೆ ತೆರಳಿದ್ದಾರೆ. ಆದರೆ, ಆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿದ್ದ “ಉಜ್ವಲ ಭಾರತ – ಉಜ್ವಲ ಭವಿಷ್ಯ” ವಿದ್ಯುತ್ @ 2047 ವಿದ್ಯುತ್ ಮಹೋತ್ಸವ ಕುರಿತ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭಾಗಿಯಾಗಿದ್ದರು. ಈ ಕಾರಣದಿಂದ ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ಗೆ ಮನವಿ ಪತ್ರ ನೀಡಿ ನಿಯೋಗದ ಸದಸ್ಯರು ತೆರಳಿದ್ದಾರೆ.
ಉತ್ತರ ಕನ್ನಡಕ್ಕೆ ಬಂದಾಗ ಸಿಹಿ ಸುದ್ದಿಕೊಡುವೆನೆಂದ ಸಿಎಂ
ಉತ್ತರ ಕನ್ನಡ ಹಿತಾಸಕ್ತಿ ಬಳಗದ ಅಜಿತ್ ಕುಮಾರ್ ಮಾತನಾಡಿ ʻʻಉತ್ತರ ಕನ್ನಡ ಜಿಲ್ಲೆಗೆ ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬೇಡಿಕೆ ನಮ್ಮದು. ಉತ್ತರ ಕನ್ನಡದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ 500ಕ್ಕೂ ಹೆಚ್ಚು ಜನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮೊಂದಿಗೆ ನಿಲ್ಲಲಿಲ್ಲ. ಆದರೆ, ಜಿಲ್ಲೆಯ ಜನ ಪ್ರೋತ್ಸಾಹಿಸಿದ್ದಾರೆ. ನಮಗೆ ಮೊದಲು ಸಿಎಂ ಸಿಗಲಿಲ್ಲವಾದರೂ ಬಳಿಕ ಸಿಕ್ಕಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉತ್ತರ ಕನ್ನಡಕ್ಕೆ ಬಂದಾಗ ಸಿಹಿ ಸುದ್ದಿ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆʼʼ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ನಟ-ನಟಿಯರು, ಸಾಹಿತಿಗಳು ಭಾಗಿಯಾಗಿದ್ದರು. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮುಖಾಂತರ ಅಭಿಯಾನ ಆರಂಭಗೊಂಡಿದೆ. ಈ ಹಿಂದೆ ಆಸ್ಪತ್ರೆ ಮಾಡುವ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಹಾಗೂ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದರು. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಗಿದೆ.
ಹೊನ್ನಾವರದಲ್ಲಿಯೂ ಪ್ರತಿಭಟನೆ
ಉ.ಕ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಶನಿವಾರ ಹೊನ್ನಾವರದಲ್ಲಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಿರಿಯ ನ್ಯಾಯವಾದಿ ಡಿ.ಎಲ್. ಕಾಮತ್ ಹೋರಾಟಕ್ಕೆ ಚಾಲನೆ ನೀಡಿದರು. ಚಂಡೆವಾದನದ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿತು. ಮಿನಿವಿಧಾನಸೌಧದ ಎದುರು ಮುಕ್ತಾಯಗೊಳಿಸಿ, ಉಪವಾಸ ಸತ್ಯಾಗ್ರಹ ನಡೆಸಿದರು. ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Multi specialty | ಉ.ಕ.ಕ್ಕೆ ಬರಲು ವೈದ್ಯರೇ ಒಪ್ಪುತ್ತಿಲ್ಲವೆಂದ ಶಾಸಕಿ; ಸಿಎಂ ಜತೆ ಚರ್ಚಿಸುವೆನೆಂದ ಆರೋಗ್ಯ ಸಚಿವ
ಹೋರಾಟಕ್ಕೆ ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಬೆಂಬಲ
ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಈ ಹಿಂದೆಯೇ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವಂತೆ ಕರೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ‘ʻಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅತ್ಯವಶ್ಯವಾಗಿದೆ. ಕಳೆದ ಮೂರು ದಶಕಗಳಿಂದಲೂ ಈ ವಿಷಯದಲ್ಲಿ ಜಿಲ್ಲಾದ್ಯಂತ ಒಮ್ಮತದ ಹಾಗೂ ಒತ್ತಾಯಪೂರ್ವಕವಾದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಲೇ ಬಂದಿದ್ದರೂ, ಇದುವರೆಗೂ ಅದು ಈಡೇರದೇ ಇರುವುದು ಜನತೆಗೆ ನೋವನ್ನುಂಟು ಮಾಡಿದೆ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ಆದರೆ, ಈ ಜಿಲ್ಲೆಯ ಜನರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಅತ್ಯಂತ ಮೂಲಭೂತ ಹಾಗೂ ಅನಿವಾರ್ಯವಾದ ವ್ಯವಸ್ಥೆ ಎಂದರೆ ಅದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ’ ಎಂದು ಹೇಳಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಹೋರಾಟಕ್ಕೆ ಬೆಂಬಲ ಸೂಚಿಸಿ, ʻʻರಾಜ್ಯ, ರಾಷ್ಟ್ರಕ್ಕಾಗಿ ಅನೇಕ ಕೊಡುಗೆಯನ್ನು ಉತ್ತರ ಕನ್ನಡ ಜಿಲ್ಲೆ ನೀಡಿದೆ. ಆದರೆ, ಜಿಲ್ಲೆಯಲ್ಲಿ ಉತ್ತಮ ಆರೋಗ್ಯದ ವ್ಯವಸ್ಥೆ ಇಲ್ಲ. ಜಿಲ್ಲೆಯಲ್ಲಿ ಅನೇಕ ಬೃಹತ್ ಯೋಜನೆಯಿಂದ ದೇಶಕ್ಕೆ ಲಾಭವಾಗುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ಇಲ್ಲದೆ ಹೊರ ಜಿಲ್ಲೆಗೆ ರೋಗಿಗಳನ್ನು ಕರೆದುಕೊಂಡು ಹೋಗುವಾಗ ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಎದುರಾಗುತ್ತಿದೆ. ಆದರೆ, ಅದರ ಬಿಸಿ ಮಾತ್ರ ಜಿಲ್ಲೆಯ ಜನರಿಗೆ ತಟ್ಟುತ್ತಿದೆʼʼ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ | Multi-Specialty Hospital | ಉತ್ತರ ಕನ್ನಡದ ಜನತೆಯ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ