ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಾತ್ರವಲ್ಲ ಹೆಚ್ಚು ಕಡಿಮೆ ಸಮಸ್ತ ಕಾಂಗ್ರೆಸ್ ವಿರುದ್ಧವೇ ಮುನಿಸಿಕೊಂಡಂತಿರುವ ಮಾಜಿ ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ ಅವರು ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಗೆ ಗೈರುಹಾಜರಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಂದೆ ತಮ್ಮ ಸಿಟ್ಟನ್ನು ತೋರಿಸಿದ್ದರೂ ಫಲ ನೀಡದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುವ ಸಭೆಯಲ್ಲೂ ಕಾಣಿಸಿಕೊಳ್ಳದೆ ಹೈಕಮಾಂಡ್‌ಗೇ ನೇರ ಸಂದೇಶ ತಲುಪಿಸುವ ಭಾಗವಾಗಿ ಗೈರುಹಾಜರಾಗಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನೆಲ್ಲ ರಾಹುಲ್ ಗಾಂಧಿ ಅವರು ಗಮನಿಸಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಕಾಂಗ್ರೆಸ್ ಸಮಾವೇಶ, ರಾಹುಲ್ ಗಾಂಧಿ ಆಗಮನ ಸೇರಿ ಯಾವ ವಿಚಾರದಲ್ಲೂ ತಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಸಿಟ್ಟಿನಲ್ಲಿದ್ದಾರೆ ಮುನಿಯಪ್ಪ. ಅದಕ್ಕಿಂತಲೂ ಮುಖ್ಯವಾಗಿ ಜೊತೆಗೆ ಕೋಲಾರದಲ್ಲಿ ಕೊತ್ತನೂರು ಮಂಜುನಾಥ್ ಹಾಗೂ ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಅವರನ್ನು ಯಾಕೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಲು ಗಡುವು ನೀಡಿದ್ದರೂ ರಾಜ್ಯ ನಾಯಕರು ಒಂದು ತಿಂಗಳಿನಿಂದಲೂ ಮೌನವಾಗಿಯೇ ಇದ್ದಾರೆ. ಇದು ಮುನಿಯಪ್ಪ ಅವರು ಇನ್ನಷ್ಟು ಮುನಿಯುವಂತೆ ಮಾಡಿದೆ.
ಜೆಡಿಎಸ್ ಜತೆ ಸಂಪರ್ಕ
ಹಿರಿಯ ನಾಯಕನಾಗಿದ್ದರೂ ಪ್ರಭಾವಿ ದಲಿತ ಮುಖಂಡನಾಗಿದ್ದರೂ ತಮ್ಮನ್ನು ಪದೇಪದೆ ಅವಮಾನಿಸುತ್ತಿರುವುದರಿಂದ ನೊಂದಿರುವ ಮುನಿಯಪ್ಪ ಈಗ ಜೆಡಿಎಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಹೀಗಾಗಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಗೆ ಆಗಮಿಸಿಲ್ಲ ಎನ್ನಲಾಗಿದೆ. ನಿಜವೆಂದರೆ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾವೇಶದಲ್ಲಿ ಭಾಷಣ ಮಾಡುವವರ ಪಟ್ಟಿಯಲ್ಲಿ ಮುನಿಯಪ್ಪ ಹೆಸರಿದೆ. ಆದರೆ, ಅವರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಎಸ್.ಆರ್. ಪಾಟೀಲ್ ಕೂಡಾ ಗೈರು?
ಈ ನಡುವೆ, ಮುನಿಸಿನಲ್ಲಿರುವ ಇನ್ನೊಬ್ಬ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಕೂಡಾ ಸಮಾವೇಶಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಮೇಲ್ಮನೆ ಸದಸ್ಯರಾಗಿದ್ದ ಅವರ ಸದಸ್ಯತ್ವ ಮುಂದುವರಿಸದೆ ಅಪಮಾನ ಮಾಡಲಾಗಿದೆ ಎನ್ನುವುದು ಅವರಿಗೆ ಬೇಸರ. ಅದರ ಹಿಂದೆ ಸಿದ್ದರಾಮಯ್ಯ ಅವರೇ ಇದ್ದಾರೆ ಎನ್ನುವುದು ಅವರ ಸಂಶಯ. ಹೀಗಾಗಿ ಅವರು ಬರುವ ಸಾಧ್ಯತೆಗಳು ಕಡಿಮೆ. ಅವರು ಸಿದ್ದರಾಮೋತ್ಸವದ ಯಾವುದೇ ಕಾರ್ಯಕ್ರಮದಲ್ಲೂ ಸಕ್ರಿಯರಾಗಿಲ್ಲ.
ಈ ನಡುವೆ ಇತ್ತೀಚೆಗೆ ಇವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಎಸ್‌ಆರ್ ಪಾಟೀಲ್ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದಿದ್ದರು. ಜತೆಗೆ ಎಸ್.ಆರ್. ಪಾಟೀಲ್ ಅವರಂಥ ನಾಯಕರನ್ನು ಅಷ್ಟು ಸುಲಭದಲ್ಲಿ ಕಡೆಗಣಿಸುವಂತಿಲ್ಲ ಎಂದಿದ್ದರು.
ಇದನ್ನೂ ಓದಿ| ಸಿದ್ದರಾಮಯ್ಯ@75 | ಚಾರಿತ್ರಿಕ ಸಮಾವೇಶಕ್ಕೆ ಕ್ಷಣಗಣನೆ, ಮೊಳಗಲಿದೆ ಕಾಂಗ್ರೆಸ್ ರಣಕಹಳೆ