ಶಿವಮೊಗ್ಗ: ಇಲ್ಲಿನ ಶಿಕಾರಿಪುರದ ಶಿರಾಳಕೊಪ್ಪ ಪಟ್ಟಣದಲ್ಲಿರುವ ಹಾರ್ಡ್ವೇರ್ ಅಂಗಡಿಗೆ ಕಾಂಟ್ರಾಕ್ಟರ್ ಒಬ್ಬ ನುಗ್ಗಿ ಹಗಲಿನಲ್ಲಿಯೇ ಉದ್ಯಮಿಯೊಬ್ಬರ (Murder Case) ಕೊಲೆ ಮಾಡಿದ್ದಾನೆ. ದಯಾನಂದ (60) ಕೊಲೆಯಾಗಿರುವ ಉದ್ಯಮಿ.
ಸೊರಬ ತಾಲೂಕಿನ ಚನ್ನಾಪುರದ ನಿವಾಸಿ ಕಾಂಟ್ರಾಕ್ಟರ್ ಕೋಟೇಶ್ ಎಂಬಾತ ಹಳೇ ದ್ವೇಷಕ್ಕೆ ದಯಾನಂದ ಅವರಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಶನಿವಾರ ಬೆಳಗ್ಗೆ ಶಿವಮೊಗ್ಗ ರಸ್ತೆಯಲ್ಲಿರುವ ವಿಜಯ ಹಾರ್ಡ್ವೇರ್ ಅಂಗಡಿಗೆ ಏಕಾಏಕಿ ನುಗ್ಗಿದ ಕೋಟೇಶ್ ದಯಾನಂದ ಅವರಿಗೆ ಚಾಕು ಇರಿದಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಪುತ್ರ ರಾಘವೇಂದ್ರ (೪೨) ಅಡ್ಡ ಬಂದಿದ್ದಾರೆ. ಅಲ್ಲದೆ, ತಪ್ಪಿಸಲು ಪ್ರಯತ್ನಿಸಿದ್ದಾರೆ. ಆಗ ಕೋಟೇಶ್ ರಾಘವೇಂದ್ರ ಅವರ ಮೇಲೂ ಹಲ್ಲೆ ನಡೆಸಿದ್ದು, ಅವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉದ್ಯಮಿ ದಯಾನಂದ್ ಅವರ ಕಟ್ಟಡ ನಿರ್ಮಾಣ ಕೆಲಸವನ್ನು ಕಾಂಟ್ರಾಕ್ಟರ್ ಕೋಟೇಶ್ ವಹಿಸಿಕೊಂಡಿದ್ದರು. ಆದರೆ, ಗುಣಮಟ್ಟದ ಕಾಮಗಾರಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೋಸ್ಕರವಾಗಿ ದಯಾನಂದ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೇರೆಯವರಿಗೆ ನೀಡಿದ್ದರು. ಆದರೆ, ಮಾಡಿದ ಕೆಲಸಕ್ಕೆ ತಮಗೆ ಹಣ ಕೊಡುವಂತೆ ಈ ವೇಳೆ ದಯಾನಂದ್ ಅವರಿಗೆ ಕೋಟೇಶ್ ಒತ್ತಾಯಿಸಿದ್ದಾನೆ. ಹಣ ಕೊಡಲು ದಯಾನಂದ್ ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಇದೇ ದ್ವೇಷದಿಂದ ಕೋಟೇಶ್ ಚಾಕು ಇರಿದಿದ್ದಾನೆ ಎಂದು ಹೇಳಲಾಗಿದೆ. ಈ ಮೊದಲು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪವೂ ಇತ್ತು. ಶನಿವಾರ ಏಕಾಏಕಿ ವಿಜಯ ಹಾರ್ಡ್ವೇರ್ ಅಂಗಡಿಗೆ ನುಗ್ಗಿ ದಯಾನಂದ್ರನ್ನು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ | Murder Case | ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ರುಂಡ ಕತ್ತರಿಸಿ ಬರ್ಬರ ಕೊಲೆ!