Site icon Vistara News

Murder Case : ವೈಯಕ್ತಿಕ ಕೊಲೆಗೆ ನಾನು ಹೇಗೆ ಹೊಣೆ; ಸೂಲಿಬೆಲೆಗೆ ತಲೆ ಸರಿ ಇಲ್ಲ ಎಂದ ಬೋಸ್‌

Chakravarty sulibele- Sunil bose

ಮೈಸೂರು: ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವಾ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ.
ವೈಯುಕ್ತಿಕ ಗಲಭೆಗಳು, ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ- ಹೀಗೆಂದು ಹೇಳಿದ್ದಾರೆ ರಾಜ್ಯ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ (Minister Dr. HC Mahadevappa) ಅವರ ಪುತ್ರ ಸುನಿಲ್‌ ಬೋಸ್‌ (Sunil Bose). ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist) ವೇಣುಗೋಪಾಲ ನಾಯಕ (Venugopal Nayaka) ಅವರ ಕೊಲೆ (Murder Case) ಸಂಬಂಧ ಪ್ರತಿಕ್ರಿಯಿಸಿದ ಅವರು ತಮ್ಮ ವಿರುದ್ಧ ಅರೋಪಗಳನ್ನು ಮಾಡಿರುವ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakaravarty Sulibele) ಅವರಿಗೆ ತಲೆ ಸರಿ ಇಲ್ಲ ಎಂದರು.

ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿದ ಸುನೀಲ್ ಬೋಸ್ ಅವರು ಮೃತರ ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಈ ಕೊಲೆಯನ್ನು ನಾನು ಖಂಡಿಸುತ್ತೇನೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಮ್ಮ ತಂದೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ನಾನು ಪ್ರೇರಣೆ ಹೇಗಾಗುತ್ತೇನೆ?

ವೇಣುಗೋಪಾಲ ನಾಯಕ್‌ ಕೊಲೆಯ ಹಿಂದೆ ಸುನಿಲ್‌ ಬೋಸ್‌ ಅವರ ಕೈವಾಡವಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಜತೆ ಫೋಟೋ ತೆಗೆಸಿಕೊಂಡಿರುತ್ತಾರೆ. ನಾನು ಈ ಭಾಗದ ಮುಖಂಡ. ಅವರು ಮಾಡುವ ವೈಯುಕ್ತಿಕ ತಪ್ಪಿಗೆ ನಾವು ಹೇಗೆ ಪ್ರೇರಣೆಯಾಗುತ್ತೇವೆ? ಎಂದು ಪ್ರಶ್ನಿಸಿದರು.

ʻʻಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದ್ರೆ ಅದರ ಹೊಣೆಯನ್ನು ಬಿಜೆಪಿ ಹೊರುತ್ತದೆಯೇ? ಪ್ರಕರಣದ A4 ಆರೋಪಿ ಬಿಜೆಪಿ ಪಾಲಿಕೆ ಸದಸ್ಯೆಯ ತಮ್ಮ.. ಇದನ್ನು ನೋಡಿ ಬಿಜೆಪಿಯವರೇ ಹೇಳಿಕೊಟ್ಟಿದ್ದಾರೆ ಎಂದು ನಾನು ಪ್ರಶ್ನಿಸಿದರೆ ಅದು ಹೇಗಿರುತ್ತದೆ ಹೇಳಿ? ತಿ.ನರಸೀಪುರದಲ್ಲಿ ಬಿಜೆಪಿ ಬಲಾಡ್ಯ ಇಲ್ಲ ನೀನು ಕೊಲೆ ಮಾಡು ನಾವು ರಾಜಕಾರಣ ಮಾಡುತ್ತೇವೆ ಎಂದು ಆತನಿಗೆ ಹೇಳಿಕೊಟ್ಟಿದ್ರಾ ಎಂದು ನಾನು ಪ್ರಶ್ನಿಸುತ್ತೇನೆ. ಈ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯನಾʼʼ ಎಂದು ಅವರು ಕೇಳಿದರು. ʻʻಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಗೆ ಸದಾ ಕಾಲ ಇಂತ ಕೊಲೆ ಗಲಭೆಗಳ ಬಗ್ಗೆ ಆಸಕ್ತಿʼʼ ಎಂದು ಹೇಳಿದರು ಸುನಿಲ್‌ ಬೋಸ್‌.

ಸೂಲಿಬೆಲೆಗೆ ತಲೆ ಸರಿ ಇಲ್ಲ ಎಂದ ಬೋಸ್

‌ವೇಣುಗೋಪಾಲ ನಾಯಕ ಕೊಲೆಯಲ್ಲಿ ತಮ್ಮ ಪಾತ್ರವಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿದ ಸುನೀಲ್‌ ಬೋಸ್‌‌, ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ. ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ ಎಂದರು.

ʻʻಸುಳ್ಳಿನಿಂದಲೇ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು. ಈ‌ ಕೊಲೆ ಪ್ರಕರಣದಲ್ಲೂ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ. ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ. ಆದರೆ ಸೂಲಿಬೆಲೆ ಅವರನ್ನು ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ. ಸೂಲಿಬೆಲೆಗೆ ಮೊದಲು ಚಿಕಿತ್ಸೆ ಕೊಡಿಸಿʼʼ ಎಂದು ಬೋಸ್‌ ಹೇಳಿದರು.

ಧನಸಹಾಯ ಮಾಡಿದ ಸುನಿಲ್ ಬೋಸ್‌

ಮೃತ ವೇಣುಗೋಪಾಲ್‌ ನಿವಾಸಕ್ಕೆ ಭೇಟಿ ನೀಡಿದ ಬೋಸ್‌ ಅವರು, ಜಿಲ್ಲಾಧಿಕಾರಿಗಳಿಗೆ ಹೇಳಿ ಗರಿಷ್ಠ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಜತೆಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಕತ್ತು ಕೊಯ್ದುಕೊಂಡು ಸಾಯುವೆ ಎಂದ ವೇಣುಗೋಪಾಲ್‌ ಪತ್ನಿ

ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರ ಪತ್ನಿ ಸುನಿಲ್‌ ಬೋಸ್‌ ಅವರ ಮುಂದೆ ತಮ್ಮ ಸಂಕಟವನ್ನು ತೋಡಿಕೊಂಡಿದ್ದಲ್ಲದೆ ಎಚ್ಚರಿಕೆಯನ್ನೂ ನೀಡಿದರು.

ʻʻನಾನು ಕುರುಬ ಸಮುದಾಯಕ್ಕೆ ಸೇರಿದವಳು. ನನ್ನ ಗಂಡ ನಾಯಕ ಸಮುದಾಯಕ್ಕೆ ಸೇರಿದವನು. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೆವು. 7 ವರ್ಷ ಜೀವನ ಸಾಗಿಸಿದ್ದೇನೆ. ಈಗ ನನಗೆ ಯಾರು ಗತಿ?ʼʼ ಎಂದು ಕೇಳಿದ ಅವರು, ʻʻಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದ್ರೆ ನಾನು ಮತ್ತು ಮಗಳು ಕತ್ತು ಕೊಯ್ದುಕೊಂಡು ಸಾಯುತ್ತೇನೆ. ಹನುಮ ಜಯಂತಿ ನಡೆದ ವೃತ್ತದ್ದಲ್ಲೇ ನಮ್ಮ ಸಾವುʼʼ ಎಂದು ಸುನೀಲ್ ಬೋಸ್ ಮುಂದೆ ಎಚ್ಚರಿಕೆ ಕೊಟ್ಟರು ವೇಣುಗೋಪಾಲ್‌ ಪತ್ನಿ ಪೂರ್ಣಿಮಾ.

ʻʻಹಿಂದೂಗಳನ್ನೇ ಮುಗಿಸುತ್ತಿದ್ದಾರಲ್ಲ ಸರ್ʼʼ ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಸುನಿಲ್‌ ಬೋಸ್‌ ಮುಂದೆ ಅಳಲು ತೋಡಿಕೊಂಡರು. ʻʻಯಾರದ್ದೇ ಆದರೂ ಪ್ರಾಣ ಒಂದೇ ಅಲ್ವಾʼ ಎಂದು ಹೇಳಿ ಸಾಂತ್ವನ ಹೇಳಿ ಹೊರ ಬಂದರು ಸುನಿಲ್‌ ಬೋಸ್‌.

Exit mobile version