ಮಂಡ್ಯ/ರಾಮನಗರ: ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಮಗುವಿನ ಮೇಲೂ ಮಾರಣಾಂತಿಕ ಹಲ್ಲೆ (Murder Case) ನಡೆಸಿರುವ ಘಟನೆ ನಡೆದಿದೆ. ಮಂಡ್ಯದ ಪಾಂಡವಪುರದ ಹೊಸ ಯರಗನಹಳ್ಳಿ, ಡಿಂಕಾ ಗ್ರಾಮಗಳ ನಡುವಿನ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ಗೌತಮ್ ಎಂಬಾತ ತನ್ನ ಪತ್ನಿ ವರ್ಷಿತಾಳನ್ನು ಹತ್ಯೆಗೈದು ಪರಾರಿ ಆಗಿದ್ದಾನೆ. ಪತ್ನಿಯನ್ನು ಕೊಂದು ಒಂದೂವರೆ ವರ್ಷದ ಗಂಡು ಮಗುವಿನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೋಟದ ಮನೆಯ ಅಡುಗೆ ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ವರ್ಷಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಜಮೀನು ವಿವಾದ ಕೊಲೆಯಲ್ಲಿ ಅಂತ್ಯ
ರಾಮನಗರದ ಮಾಗಡಿ ತಾಲೂಕಿನ ನೆಸೆಪಾಳ್ಯ ಗ್ರಾಮದಲ್ಲಿ ಜಮೀನು ವಿಚಾರವಾಗಿ ಸಹೋದರರ ನಡುವೆ ಜಗಳ ನಡೆದಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ನಾಗರಾಜು (35) ಮೃತ ದುರ್ದೈವಿ.
ಇದನ್ನೂ ಓದಿ: Road Accident : ಚಲಿಸುತ್ತಿದ್ದ ಆಟೋ ಪಲ್ಟಿಯಾಗಿ ಓರ್ವ ಮೃತ್ಯು; ಕಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್
ರೇಷ್ಮೆ ಎಲೆ ಕಟಾವು ಮಾಡುವಾಗ ಸಹೋದರರಾದ ನಾಗರಾಜು, ರಾಮಚಂದ್ರು ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ ಸಿಟ್ಟಿಗೆದ್ದ ರಾಮಚಂದ್ರ ಮಚ್ಚಿನಿಂದ ನಾಗರಾಜು ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ನಾಗರಾಜು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ