ಮೈಸೂರು: ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade activist) ವೇಣುಗೋಪಾಲ್ ನಾಯಕ್ (32) ಅವರ ಕೊಲೆಗೆ (Murder case) ಹನುಮ ಜಯಂತಿ (Hanuma Jayanti) ದಿನ ನಡೆದ ಫೋಟೊ ವಿವಾದವೇ ಕಾರಣವಾಯ್ತಾ? ಹೀಗೊಂದು ಪ್ರಶ್ನೆ ಈಗ ಎದ್ದುನಿಂತಿದೆ. ಇತ್ತೀಚೆಗೆ ನಡೆದ ಹನುಮ ಜಯಂತಿ ಸಂದರ್ಭದಲ್ಲಿ ದೇವಸ್ಥಾನದ ಬಳಿ ಬೈಕ್ ನಿಲ್ಲಿಸುವ ವಿವಾದ ಕೊಲೆಗೆ ಕಾರಣ ಎಂದು ಒಂದು ಕಡೆ ಹೇಳಲಾಗುತ್ತಿದ್ದರೆ, ಇನ್ನೊಂದು ಕಡೆ ಮೃತ ವೇಣುಗೋಪಾಲ್ ಅವರ ಪತ್ನಿಯ ಪ್ರಕಾರ ಹನುಮ ಜಯಂತಿ ದಿನ ಮೆರವಣಿಗೆ ವೇಳೆ ಪುನೀತ್ ರಾಜ್ ಕುಮಾರ್ (Puneet Rajkumar) ಫೋಟೊ ಇಡುವುದು ಬೇಡ ಎಂದು ಹೇಳಿದ್ದೇ ವಿವಾದದ ಮೂಲ. ಇದೀಗ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ತಿ. ನರಸೀಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಅವರನ್ನು ಭಾನುವಾರ ರಾತ್ರಿ ಅವರಿಗೆ ಪರಿಚಿತರಾಗಿರುವ ಮತ್ತು ಗೆಳೆಯರೇ ಆಗಿರುವ ವ್ಯಕ್ತಿಗಳು ಬಾಟಲಿಯಿಂದ ಇರಿದು ಕೊಲೆ ಮಾಡಿದ್ದರು. ಹನುಮ ಜಯಂತಿ ಆಚರಣೆ ವೇಳೆ ನಡೆದ ವಾಗ್ವಾದ ಮುಂದುವರಿದು ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿತ್ತು.ರು
ಆರು ಮಂದಿಯ ಮೇಲೆ ಎಫ್‌ಐಆರ್ ದಾಖಲು, ಇಬ್ಬರ ಬಂಧನ
ವೇಣುಗೋಪಾಲ ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು, ಹ್ಯಾರಿಸ್ ಎಂಬ ಆರು ಮಂದಿಯ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಇವರ ಪೈಕಿ ಮಣಿಕಂಠ ಹಾಗೂ ಸಂದೇಶ್ ಎಂಬ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಜುಲೈ 8ರಂದು ನಡೆದಿದ್ದ ಹನುಮ ಜಯಂತಿ ಮೆರವಣಿಗೆ ವೇಳೆ ದೇವಸ್ಥಾನದ ಬಳಿ ಯಾವ ವಾಹನಗಳನ್ನು ಬಿಡದಂತೆ ಆಯೋಜಕರು ತಡೆದಿದ್ದರು. ಇದರ ನೇತೃತ್ವವನ್ನ ವಹಿಸಿದ್ದ ವೇಣುಗೋಪಾಲ ನಾಯಕ್ ಮತ್ತು ಆರೋಪಿಗಳ ನಡುವೆ ಜಗಳ ಆಗಿತ್ತು. ಯಾವುದೇ ಕಾರಣಕ್ಕೂ ದೇವಸ್ಥಾನ ಬಳಿ ಬೈಕ್ ನಿಲ್ಲಿಸಲು ಬಿಡುವುದಿಲ್ಲ ಎಂದು ವೇಣುಗೋಪಾಲ್ ನಾಯಕ್ ಹೇಳಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಗಲಾಟೆ ತೆಗೆದು ಕೊಲೆ ಮಾಡಲಾಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ.
ಆದರೆ, ವೇಣುಗೋಪಾಲ್ ಪತ್ನಿ ಹೇಳುವ ಕಾರಣವೇ ಬೇರೆ
ಈ ನಡುವೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ವೇಣುಗೋಪಾಲ್ ಅವರ ಪತ್ನಿ ಪೂರ್ಣಿಮಾ ಅವರು, ಈ ಕೊಲೆಯ ಹಿಂದೆ ಫೋಟೊ ವಿವಾದವೂ ಇರುವ ಸಾಧ್ಯತೆ ಇದೆ ಎಂದಿದ್ದಾರೆ.
ತಿ.ನರಸೀಪುರದಲ್ಲಿ ನಡೆದಿದ್ದ ಹನುಮ ಜಯಂತಿ ವೇಳೆ ವ್ಯಾನ್ ನಲ್ಲಿ ಭಾರತ ಮಾತೆಯ ಭಾವಚಿತ್ರದ ಎದುರು ಪುನೀತ್ ರಾಜ್ ಕುಮಾರ್ ಅವರ ಫೋಟೊವನ್ನು ಇಡಲಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ವೇಣುಗೋಪಾಲ್ ಅವರು, ಈ ವಿಚಾರದಲ್ಲಿ ವಿವಾದ ಬೇಡ, ಇಲ್ಲಿ ಯಾರ ಫೋಟೊ ಹಾಕುವುದೂ ಬೇಡ ಎಂದು ಹೇಳಿ ತೆಗೆಸಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೇ ಗಲಾಟೆಯಾಗಿತ್ತು. ನಂತರ ಭಾನುವಾರ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎಂದು ಕೊಲೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಹೇಳಿಕೆ ನೀಡಿದ್ದಾರೆ.
ತಿ.ನರಸೀಪುರದಲ್ಲಿ ಅಂಗಡಿ ಮುಂಗಟ್ಟು ಬಂದ್
ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯ ಬಳಿಕ ಸೋಮವಾರ ಮುಂಜಾನೆಯಿಂದ ತೀ. ನರಸೀಪುರ ಪೇಟೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಹಿಂದೂ ಪರ ಸಂಘಟನೆಗಳ ಕರೆ ಮೇರೆಗೆ ಬಂದ್ ಆಚರಿಸಲಾಗುತ್ತಿದೆ. ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವೇಣುಗೋಪಾಲ್ ನಾಯಕ್ ಮನೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Karnataka live news: ಜೈನ ಮುನಿ ಬರ್ಬರ ಕೊಲೆ: ಚಿಕ್ಕೋಡಿ ಸೇರಿದಂತೆ ಹಲವು ಕಡೆ ಪ್ರತಿಭಟನೆ