ಬೆಂಗಳೂರು: ಮೈಸೂರು ಜಿಲ್ಲೆಯ ತಿ. ನರಸೀಪುರ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade activist) ವೇಣುಗೋಪಾಲ್ ನಾಯಕ್ (Venugopal Nayak) ಕೊಲೆ ಪ್ರಕರಣದ (Murder Case) ಹಿಂದೆ ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ. ಮಹದೇವಪ್ಪ (Minister Dr. H.C Mahadevappa) ಅವರ ಪುತ್ರ ಸುನಿಲ್ ಬೋಸ್ ಇದ್ದಾರೆ. ಇದು ಸುನಿಲ್ ಬೋಸ್ ಸಹಚರರ ಕೃತ್ಯ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakaravarty sulibele) ನೇರ ಆರೋಪ ಮಾಡಿದ್ದಾರೆ.
ಅಗಲಿದ ಯುವ ಬ್ರಿಗೇಡ್ ಸದಸ್ಯ ವೇಣುಗೋಪಾಲ್ ನಾಯಕ್ ಮತ್ತು ಚಿಕ್ಕೋಡಿಯ ಹಿರೇಕೋಡಿಯಲ್ಲಿ ಕೊಲೆಯಾದ ಜೈನ ಮುನಿಗಳ ಸಾವಿಗೆ ಮೌನ ಸಂತಾಪ ಸೂಚಿಸುವ ಕಾರ್ಯಕ್ರಮ ಮಂಗಳವಾರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ವೀರಾಂಜನೇಯ ಸ್ವಾಮಿ (Veeranjaneya temple) ದೇವಾಲಯದಲ್ಲಿ ನಡೆಯಿತು. ಈ ವೇಳೆ ವಿಸ್ತಾರ ನ್ಯೂಸ್ ಜತೆಗೆ ಅವರು ಮಾತನಾಡಿದರು.
ಈ ಕೊಲೆಯ ಹಿಂದೆ 100% ಕಾಂಗ್ರೆಸ್ ಇದೆ
ವೇಣುಗೋಪಾಲ ನಾಯಕ್ ಕೊಲೆಯ ಹಿಂದೆ ಕಾಂಗ್ರೆಸ್ ಇರುವುದು ಅತ್ಯಂತ ಸ್ಪಷ್ಟ. ನಾನು ವೇಣುಗೋಪಾಲ ನಾಯಕ್ ಅವರ ಪತ್ನಿ ಜತೆ ಮಾತನಾಡಿದ್ದೇನೆ. ಕೊಲೆಯಾದ ದಿನ ರಾತ್ರಿ ವೇಣುಗೋಪಾಲ ನಾಯಕ್ ಜತೆ ಸಂಧಾನಕ್ಕೆ ಹೋದವರೊಂದಿಗೆ ಮಾತನಾಡಿದ್ದೇನೆ. ಅವರೆಲ್ಲರೂ ಹೇಳುವುದು ಒಂದೇ, ಇದು ಸುನಿಲ್ ಬೋಸ್ ಸಹಚರರದೇ ಕೃತ್ಯ ಎಂದು- ಹೀಗೆ ಸ್ಪಷ್ಟವಾಗಿ ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ.
ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರನೇ ಈ ಕೊಲೆಯ ಹಿಂದಿದ್ದಾರೆ ಎನ್ನುವದು ಸ್ಪಷ್ಟವಾಗಿದೆ. ಸಮಾಜ ಕಲ್ಯಾಣ ಎಂದರೆ ದಲಿತರ ಕಲ್ಯಾಣವೂ ಇದೆ. ಅದೇ ಸಮಾಜ ಕಲ್ಯಾಣ ಖಾತೆ ಸಚಿವರ ಮಗ ಬೆಳೆಯುತ್ತಿರುವ ಒಬ್ಬ ದಲಿತ ನಾಯಕನ ಕೊಲೆ ಮಾಡಿಸಿದ್ದಾನೆ. ಒಂದು ದಿನದ ಹಿಂದೆ ಅವನ ಸಹಚರರು ಬಂದು ವೇಣುಗೋಪಾಲ ನಾಯಕನನ್ನು ಭಾರಿ ಬೆಳೆಸುತ್ತಿದ್ದೀರಲ್ಲಾ ಎಂದು ನಮ್ಮಲ್ಲಿ ಕೇಳಿಹೋಗಿದ್ದಾರೆ. ವೇಣುಗೋಪಾಲ ನಾಯಕ ಹನುಮ ಜಯಂತಿ ಆಚರಣೆ ಮಾಡುವುದು, ಅದರ ಮುಂಚೂಣಿಯಲ್ಲಿ ನಿಲ್ಲುವುದು, ಅವನ ಮಾತನ್ನು ಎಲ್ಲರೂ ಕೇಳುವುದು ಇವರಿಗೆ ಸಹಿಸಲು ಆಗದೆ ಈ ಕೊಲೆ ಮಾಡಲಾಗಿದೆ ಎಂದು ಚಕ್ರವರ್ತಿ ಆರೋಪಿಸಿದರು.
ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ.. ನೀವು ಅಹಿಂದ ಅಂತ ಹೇಳಿಕೊಂಡು ಇಷ್ಟೆಲ್ಲ ತಿರುಗಾಡುತ್ತೀರಿ, ಇಷ್ಟೆಲ್ಲ ಹೋರಾಟಗಳನ್ನು ಮಾಡುತ್ತೀರಿ. ಈಗ ಒಬ್ಬ ದಲಿತ ನಾಯಕ ಇಷ್ಟೊಂದು ಬರ್ಬರವಾಗಿ ಕೊಲೆಯಾದಾಗ ಒಂದು ಮಾತು ಆಡಬೇಕು ಅಂತ ಅನಿಸೋದಿಲ್ವಾ? ಸಾಂತ್ವನ ಹೇಳಬೇಕು ಅಂತ ಅನಿಸೋದಿಲ್ವಾ ಎಂದು ಚಕ್ರವರ್ತಿ ಪ್ರಶ್ನಿಸಿದರು.
ಹಂತಕರಿಗೆ ಕಾಂಗ್ರೆಸ್ ಬೆಂಬಲ ಇದ್ದೇ ಇದೆ
ಹನುಮ ಜಯಂತಿ ಆಚರಣೆ ಮಾಡಿದ ಒಂದೇ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ. ನಡುರಸ್ತೆಯಲ್ಲಿ ನಿಲ್ಲಸಿ ಕೈಯನ್ನು ಹಿಂದಕ್ಕೆ ಲಾಕ್ ಮಾಡಿಸಿ ಇರಿದು ಕೊಲೆ ಮಾಡಲು ಹಂತಕರಿಗೆ ಧೈರ್ಯ ಬಂದಿರುವುದೇ ಕಾಂಗ್ರೆಸ್ ಸರ್ಕಾರದಿಂದ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅವರು ಮತ್ತೆ ಚಿಗುರಿಕೊಂಡಿದ್ದಾರೆ. ಹಿಂದೆಯೂ ಇದೇ ರೀತಿ ಇತ್ತು. ಈಗಲೂ ಆ ಶಕ್ತಿ ಮತ್ತೆ ಬಂದಿದೆ ಎಂದು ಚಕ್ರವರ್ತಿ ಹೇಳಿದರು.
ಬಂಧಿತ ಆರು ಮಂದಿಯ ಮೂಲವನ್ನು ಕೆದಕಿದರೆ ಅವರ ಹಿಂದೆ ಇರುವವರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ. ಇವರಿಗೆ ಕಾಂಗ್ರೆಸ್ ಬೆಂಬಲ ಹೇಗಿದೆ ಮತ್ತು ಇವರು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೇಗೆ ಚಿಗಿತುಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ.
ಇದನ್ನೂ ಓದಿ: Murder Case: ಯುವ ಬ್ರಿಗೇಡ್ ಸದಸ್ಯನ ಕೊಲೆ ; 6 ಆರೋಪಿಗಳು ಅರೆಸ್ಟ್, ಒಬ್ಬ ಬಿಜೆಪಿ ಪಾಲಿಕೆ ಸದಸ್ಯೆ ತಮ್ಮ!