ರಾಮನಗರ: ಕುಡಿತದ ಕಾರಣಕ್ಕಾಗಿ (liquor Party) ನಿತ್ಯವೂ ಹತ್ತಾರು ಕೊಲೆಗಳು (Murder Case) ಸಂಭವಿಸುತ್ತಿವೆ. ಕುಡಿತದ ಮತ್ತಿನಲ್ಲಿ ಕೊಲೆ ಮಾಡುವುದು, ಕುಡಿಯುವುದಕ್ಕಾಗಿ ಕರೆದುಕೊಂಡು ಹೋಗಿ ಕೊಲೆ ಮಾಡುವುದು, ಕುಡಿಸಿ ಕೊಲೆ ಮಾಡುವುದು, ಮದ್ಯ ಸೇವನೆ ಮಾಡಿಲ್ಲ ಎಂದು ಕೊಲ್ಲುವುದು.. ಹೀಗೆ ಹಲವಾರು ಅನಾಹುತಗಳು ನಡೆಯುತ್ತಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮದಲ್ಲಿ ಎಎಸ್‌ಐ ಒಬ್ಬರ ಪುತ್ರನನ್ನು (Son of Retired ASI Killed) ಇದೇ ರೀತಿ ಕೊಲೆ ಮಾಡಲಾಗಿದೆ.
ನಿವೃತ್ತ ಎಎಸ್ಐ ಮಗನಾಗಿರುವ ಬೆಂಗಳೂರು ಮೂಲದ ದೀಪಕ್ (23) ಎಂಬಾತನನ್ನು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಮಾಡಿದ ಆರೋಪಿ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿ. ಆತ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಪ್ರಸಾದ್‌ನನ್ನು ಭೇಟಿಯಾಗಿದ್ದ. ಅವರಿಬ್ಬರು ಅಲ್ಲಿನ ಶೆಡ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ರಾತ್ರಿ ಶೆಡ್‌ನಲ್ಲೇ ಮಲಗಿದ್ದ ದೀಪಕ್‌ನ ತಲೆ ಮೇಲೆ ಪ್ರಸಾದ್ ಕಲ್ಲು ಹೊತ್ತು ಹಾಕಿದ್ದಾನೆ. ಹೀಗಾಗಿ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಸಾದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ನಿಜವಾದ ಕಾರಣ ಇನ್ನಷ್ಟೇ ಬಯಲಾಗಬೇಕಾಗಿದೆ.
ಇದನ್ನೂ ಓದಿ: Murder Case: ಆಕೆಗಾಗಿಯೇ ಲಿಂಗ ಬದಲಾಯಿಸಿಕೊಂಡರೂ ಸಿಗದವಳನ್ನು ಜೀವಂತ ಸುಟ್ಟು ಕೊಂದ!
ಎಣ್ಣೆ ಪಾರ್ಟಿ ತಾರಕಕ್ಕೆ ಏರಿದ ಜಗಳ; ಸ್ನೇಹಿತನನ್ನೇ ಇರಿದು ಕೊಂದ ಧೂರ್ತ
ಕಲಬುರಗಿ : ಅವರಿಬ್ಬರು ಸ್ನೇಹಿತರು. ಆಗಾಗ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದವು. ಮತ್ತೆ ಒಂದಾಗುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ ಎಣ್ಣೆ ಪಾರ್ಟಿ (Liqour Party) ಮಾಡುವಾಗ ಹುಟ್ಟಿದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕೊಲೆ ನಡೆದಿದ್ದು ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಸಂಗೊಳಗಿ ಬಳಿಯ ಒಂದು ಜಮೀನಿನಲ್ಲಿ. ಚಂದ್ರಶೇಖರ್ ಬಸವರಾಜ್ ಎಂಬ 23ರ ಯುವಕನನ್ನು ಅವನ ಸ್ನೇಹಿತನಾದ ಮಿಲನ್ (23) ಎಂಬಾತ ಹೊಟ್ಟೆ ಮತ್ತು ಕತ್ತಿಗೆ ಚೂರಿಯಿಂದ ಇರಿದು ಕೊಲೆ (Murder Case) ಮಾಡಿದ್ದಾನೆ.
ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ಶನಿವಾರ ಹೂವಿನ ವ್ಯಾಪಾರ ಮಾಡುತ್ತಿದ್ದ ದಾವಲಸಾ ಗುಲಫರೋಷ್ (25) ಎಂಬಾತನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಅದೇ ರಾತ್ರಿ ಈಗ ಇನ್ನೊಂದು ಕೊಲೆ ನಡೆದಂತಾಗಿದೆ.
ಕೆಎಂಎಫ್ ಅಧ್ಯಕ್ಷರ ಸಹಾಯಕನ ಪುತ್ರನೇ ಕೊಲೆಯಾದವನು
ಅಳಂದ ತಾಲೂಕಿನ ಸಂಗೊಳಗಿಬಳಿಯ ಹೊರವಲಯ ಜಮೀನಿನಲ್ಲಿ ಎಣ್ಣೆ ಪಾರ್ಟಿ ಮಾಡುವಾಗ ಕೊಲೆಯಾದ ಚಂದ್ರಶೇಖರ್ ಸಾಮಾನ್ಯ ಹುಡುಗನೇನೂ ಅಲ್ಲ. ಕೆಎಂಎಫ್ ಅದ್ಯಕ್ಷ ಆರ್.ಕೆ ಪಾಟೀಲ್ ಅವರ ಆಪ್ತ ಸಹಾಯಕ ಬಸವರಾಜ್ ಚೌವಲ ಪುತ್ರ. ಊರಿನಲ್ಲಿ ಸಾಕಷ್ಟು ಪ್ರಭಾವವನ್ನೂ ಹೊಂದಿದ್ದ ಹುಡುಗ.
ನಿಜವೆಂದರೆ, ಮಿಲನ್ ಹಾಗೂ ಚಂದ್ರಶೇಖರ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಆಗಾಗ ಸಣ್ಣಪುಟ್ಟ ಜಗಳವಾಡಿಕೊಂಡು ಮತ್ತೆ ಒಂದಾಗುತ್ತಿದ್ದರು. ಮಿಲನ್ ಕಲಬುರಗಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ರಜೆ ಹಿನ್ನೆಲೆಯಲ್ಲಿ ತನ್ನ ಊರಾದ ಅಳಂದಗೆ ಬಂದಿದ್ದ.
ಊರಿಗೆ ಬಂದವನೇ ಸ್ನೇಹಿತನಾದ ಚಂದ್ರಶೇಖರ್‌ನನ್ನು ಎಣ್ಣೆ ಪಾರ್ಟಿ ಮಾಡೋಣ ಎಂದು ಕರೆದಿದ್ದ. ಅವರಿಬ್ಬರೂ ಸಂಗೋಳಗಿ ಬಳಿ ಜಮೀನಿನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ನಡುವೆ ಹಿಂದಿನ ಹಲವು ಪ್ರಕರಣಗಳಂತೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಚಂದ್ರಶೇಖರ್ ತನ್ನ ಬಳಿಯಿದ್ದ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ.
ಆಗ ಮಿಲನ್ ಚಂದ್ರಶೇಖರ್ ಬಳಿಯಿಂದ ಚಾಕು ಕಿತ್ತುಕೊಂಡು ಆತನಿಗೇ ಮರಳಿ ಚುಚ್ಚಿ ಕೊಲೆಗೈದಿದ್ದಾನೆ. ವಿಷಯ ತಿಳಿದು ಅಳಂದ ಪೊಲೀಸರು ಅಲ್ಲಿಗೆ ಧಾವಿಸಿ ಆರೋಪಿ ಮಿಲನ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಳಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಣ್ಣೆ ಪಾರ್ಟಿಗೆ ಹೋಗುವಾಗ ಚಂದ್ರಶೇಖರ್ ಚೂರಿ ಯಾಕೆ ಹಿಡಿದುಕೊಂಡು ಹೋಗಿದ್ದ. ಅವನಿಗೆ ಮಿಲನ್‌ನನ್ನು ಕೊಲೆ ಮಾಡುವ ಉದ್ದೇಶವಿತ್ತಾ? ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತಿದ್ದ ಅಂಶ ಯಾವುದು? ಜಗಳವಿದ್ದರೂ ಇಬ್ಬರೇ ಎಣ್ಣೆ ಪಾರ್ಟಿಗೆ ಹೋಗಿದ್ಯಾಕೆ? ಹೀಗೆ ಹಲವು ಪ್ರಶ್ನೆಗಳಿಗೆ ಪೊಲೀಸರು ತಮ್ಮ ತನಿಖೆ ವೇಳೆ ಉತ್ತರ ಹುಡುಕಬೇಕಾಗಿದೆ.
ಅಂತೂ ಇಬ್ಬರು ಎಳೆಹರೆಯದ ಯುವಕರು ಎಣ್ಣೆ ಪಾರ್ಟಿ, ಮೋಜು ಮತ್ತು ವೈಷಮ್ಯದಿಂದಾಗಿ ತಮ್ಮ ಬದುಕನ್ನು ಕಳೆದುಕೊಂಡಿರುವುದು ನಿಜ. ಚಂದ್ರಶೇಖರ್ ಕೊಲೆಯಾದರೆ ಮಿಲನ್ ಕೊಲೆಗಾರನಾಗಿದ್ದಾನೆ.