ಬೆಂಗಳೂರು: ಯಲಹಂಕದಲ್ಲಿ ನಾಲ್ಕು ದಿನದ ಹಿಂದಷ್ಟೇ ವ್ಯಕ್ತಿಯೊಬ್ಬನ ತಲೆ, ಮರ್ಮಾಂಗ ಸೇರಿದಂತೆ ದೇಹದ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದರು. ಮೊದಮೊದಲು ಇದು ದ್ವೇಷಕ್ಕೆ ನಡೆದಿರುವ ಕೊಲೆ ಎಂದೇ ಭಾವಿಸಲಾಗಿತ್ತು. ಅಲ್ಲದೆ, ಇದು ಆ್ಯಕ್ಸಿಡೆಂಟ್ ಎಂದೂ ಪತ್ನಿ ಕತೆ ಕಟ್ಟಿದ್ದಳು. ಆದರೆ, ತನಿಖೆಗಿಳಿದ ಪೊಲೀಸರಿಗೆ ಇದೊಂದು ಪ್ರೇಮ ಪುರಾಣಕ್ಕೆ ನಡೆದ ಕೊಲೆ ಎಂದು ತಿಳಿದು ಬಂದಿದೆ.
ಇಲ್ಲಿನ ಯಲಹಂಕದಲ್ಲಿ ಅಕ್ಟೋಬರ್ 22ರಂದು ಮನೆಯ ಟೆರೇಸ್ ಮೇಲೆ ರಕ್ತದ ಮಡುವಿನಲ್ಲಿ ಚಂದ್ರಶೇಖರ್ ಎಂಬುವವರು ನರಳಾಡುತ್ತಿದ್ದರು. ಗಂಡನನ್ನು ಹುಡುಕುತ್ತಾ ಬಂದ ಪತ್ನಿಗೆ ಹಲ್ಲೆಯಾಗಿರುವುದು ಕಂಡು ಬಂದಿದೆ. ತಕ್ಷಣವೇ ಆಕೆ ತನ್ನ ಪತಿಯನ್ನು ಆಸ್ಪತ್ರೆಗೆ ಸೇರಿಸಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪತಿ ಮೃತಪಟ್ಟಿದ್ದ. ಆದರೆ, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ವೇಳೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಗೆ ಪತ್ನಿಯ ಪ್ರೀತಿಯೇ ಕಾರಣ ಎಂದು ತಿಳಿದು ಬಂದಿದೆ.
ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಶ್ವೇತಾ
ಹಿಂದೂಪುರ ಬಳಿಯ ಹಳ್ಳಿಯೊಂದರಲ್ಲಿ ವಾಸವಿದ್ದ ಚಂದ್ರಶೇಖರ್ ಹಾಗೂ ಶ್ವೇತಾ ಕೆಲ ಸಮಯದ ಹಿಂದಷ್ಟೆ ಯಲಹಂಕಕ್ಕೆ ಬಂದಿದ್ದರು. ವಿವಾಹಕ್ಕೂ ಮೊದಲು ಪ್ರೀತಿಸುತ್ತಿದ್ದ ಲೋಕೇಶ್, ಶ್ವೇತಾ ಮದುವೆಯಾದ ನಂತರವೂ ಪ್ರೀತಿಯನ್ನು ಮುಂದುವರಿಸಿದ್ದ. ಅಲ್ಲದೆ, ಶ್ವೇತಾ ಇದ್ದ ಊರಿನಲ್ಲಿ ಆಕೆಗೆ ಕೆಲವರು ಅಸಭ್ಯ ಮೆಸೇಜ್ಗಳನ್ನು ಕಳುಹಿಸುತ್ತಿದ್ದರು ಎಂಬ ಕಾರಣಕ್ಕಾಗಿ ಸ್ಥಳ ಬದಲಾವಣೆ ಮಾಡಿದ್ದರು.
ಮದುವೆಯಾದ ನಂತರವೂ ಶ್ವೇತಾಗೆ ಪ್ರೈವೇಟ್ ನಂಬರ್ನಿಂದ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಕಾರಣದಿಂದಲೇ ಶ್ವೇತಾ, ಲೋಕೇಶ್ ಎಂಬಾತನ ವಿರುದ್ಧ ಹಿಂದೂಪುರದಲ್ಲಿ ದೂರು ದಾಖಲಿಸಿದ್ದಳು. ಈ ವೇಳೆ ಠಾಣೆಯಲ್ಲಿ ನಡೆದಿದ್ದ ಮಾತಿನ ಚಕಮಕಿಯಲ್ಲಿ ಲೋಕೇಶ್‌ಗೆ ಶ್ವೇತಾ ಚಪ್ಪಲಿಯಿಂದ ಹೊಡೆದಿದ್ದಳು. ಈ ಕಾರಣದಿಂದಲೇ ಶ್ವೇತಾ ತನ್ನ ಗಂಡನ ಜತೆ ಊರು ಬಿಟ್ಟು ಯಲಹಂಕಕ್ಕೆ ಬಂದು ನೆಲೆಸಿದ್ದಳು. ಇನ್ನು ಚಪ್ಪಲಿಯಿಂದ ಏಟು ತಿಂದಾತನೇ ಆ ಸಿಟ್ಟಿನಿಂದಾಗಿ ಕೊಲೆ ಮಾಡಿರಬೇಕು ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಇದನ್ನೂ ಓದಿ | Murder Case | ಬೀದಿ ಹೆಣವಾದ ರೌಡಿಶೀಟರ್; ಅನುಮಾನಾಸ್ಪದ ಸಾವು
ಇಬ್ಬರಿಗೂ ಇಷ್ಟವಿರದ ಮದುವೆ
ಅಂದಹಾಗೆ, ಚಂದ್ರಶೇಖರ್ ಅವರ ಸ್ವಂತ ಅಕ್ಕನ ಮಗಳೇ ಶ್ವೇತಾ. ಇಬ್ಬರ ನಡುವೆ ೧೬ ವರ್ಷಗಳ ಅಂತರ ಇರುವ ಕಾರಣಕ್ಕೆ ಇಬ್ಬರಿಗೂ ಮದುವೆ ಆಗಲು ಇಷ್ಟವಿರಲಿಲ್ಲ. ಆದರೆ, ಕುಟುಂಬದವರು ಶ್ವೇತಾ ಓದುತ್ತಿರುವಾಗಲೇ ಒಪ್ಪಿಸಿ ಮದುವೆ ಮಾಡಿಸಿದ್ದರು. ಇದಕ್ಕೆ ಇಬ್ಬರೂ ವಿರೋಧ ವ್ಯಕ್ತಪಡಿಸಲು ಆಗದ ಸ್ಥಿತಿಯಲ್ಲಿದ್ದರು.
ಕಾಲೇಜಿನಲ್ಲಿ ಪ್ರೇಮ ಪಾಶಕ್ಕೆ ಸಿಲುಕಿದ್ದ ಶ್ವೇತಾ
ಕಾಲೇಜಿನಲ್ಲಿ ಇರುವಾಗಲೇ ಲೋಕೇಶ್‌ನನ್ನು ಶ್ವೇತಾ ಪ್ರೀತಿಸುತ್ತಿದ್ದಳು. ಆದರೆ, ಈ ಮಧ್ಯೆ ಮನೆಯವರು ಚಂದ್ರಶೇಖರ್‌ನೊಂದಿಗೆ ಮದುವೆ ಮಾಡಿಸಿದರು. ಮದುವೆಯಾದ ಬಳಿಕ ಶ್ವೇತಾ ವಿದ್ಯಾಭ್ಯಾಸ ಮಾಡಲು ಇಚ್ಛಿಸಿದಾಗ, ಪತಿ ಚಂದ್ರಶೇಖರ್ ಅನುಮತಿ ನೀಡಿದ್ದರು. ಮತ್ತೆ ಕಾಲೇಜಿಗೆ ಬರಲಾಂಭಿಸಿದ ಶ್ವೇತಾಳಿಗೆ ಲೋಕೇಶ್ ಮತ್ತೆ ಹತ್ತಿರವಾಗಿದ್ದಾನೆ. ಹೀಗಾಗಿ ಇಬ್ಬರ ನಡುವಿನ ಪ್ರೀತಿ ಹಾಗೇ ಮುಂದುವರಿದಿತ್ತು.
ಪತ್ನಿಯ ಪ್ರೇಮ ವಿಚಾರ ಚಂದ್ರಶೇಖರ್‌ಗೆ ತಿಳಿದಾಗ ಮನೆಯಲ್ಲಿ ಗಲಾಟೆ ನಡೆದಿತ್ತು. ನಂತರ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿಯಿಂದಲೇ ಲೋಕೇಶ್ ವಿರುದ್ಧ ದೂರು ಕೊಡಿಸಿದ್ದರು. ಆಗ ಲೋಕೇಶ್ ಗಲಾಟೆ ಮಾಡಿದ್ದ ಎಂಬ ಕಾರಣಕ್ಕೆ ಎಲ್ಲರೆದುರೇ ಪೊಲೀಸ್ ಠಾಣೆಯಲ್ಲಿ ಲೋಕೇಶ್‌ನಿಗೆ ಶ್ವೇತಾ ಚಪ್ಪಲಿಯಲ್ಲಿ ಹೊಡೆದಿದ್ದಳು. ಹೀಗಾಗಿ ಪತ್ನಿ ಬದಲಾದಳೆಂಬ ಖುಷಿಯಲ್ಲಿದ್ದ ಚಂದ್ರಶೇಖರ್ ಬೆಂಗಳೂರಿಗೆ ಕೆಲಸಕ್ಕೆ ಸೇರಲು ನಿರ್ಧರಿಸಿದರು. ಮತ್ತೆ ಪತ್ನಿಯ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಹಿಂದೂಪುರದಲ್ಲಿಯೇ ಆಕೆಯನ್ನು ಬಿಟ್ಟು ಯಲಹಂಕದ ತನ್ನ ಅಣ್ಣನ ಮನೆಯಲ್ಲಿ ವಾಸವಿದ್ದರು.
ಶ್ವೇತಾಳ ಖಾಸಗಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಲೋಕೇಶ್
ಈ ಮಧ್ಯೆ ಮನೆಯಲ್ಲಿ ಗಲಾಟೆಯಾಗುತ್ತದೆ ಎಂದು ಲೋಕೇಶ್ ಸಹವಾಸ ಬೇಡ ಎಂದಿದ್ದವಳು, ಮತ್ತೆ ಬಲವಂತವಾಗಿ ಪ್ರೇಮ ಮುಂದುವರಿಸಿದ್ದಳು. ಇದಕ್ಕೆ ಕಾರಣ ಈ ಹಿಂದೆ ಶ್ವೇತಾಳ ಜತೆಗೆ ಇದ್ದಾಗ ಖಾಸಗಿ ವಿಡಿಯೊವನ್ನು ಲೋಕೇಶ್ ಇಟ್ಟುಕೊಂಡಿದ್ದ. ಇದನ್ನು ತೋರಿಸಿ ಬೆದರಿಸಿ ಮತ್ತೆ ಬಲವಂತವಾಗಿ ತನ್ನತ್ತ ಸೆಳೆದುಕೊಂಡಿದ್ದ.
ಇದನ್ನೂ ಓದಿ | Murder Case | ರೌಡಿಶೀಟರ್ ದಿವಾಕರ್ @ ಡಿಚ್ಚಿ ದಿವಾ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದರು!
ವಿಚಾರ ತಿಳಿದು ಹಲ್ಲೆ ನಡೆಸಿದ್ದ ಚಂದ್ರಶೇಖರ್
ಲೋಕೇಶ್‌ನ ಬೆದರಿಕೆ ವಿಚಾರ ತಿಳಿದ ಚಂದ್ರಶೇಖರ್ ಆತನನ್ನು ಯಲಹಂಕಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿದ್ದ. ಈ ವಿಚಾರವನ್ನು ಲೋಕೇಶ್ ತನ್ನ ಸಂಬಂಧಿ ಸತೀಶ್‌ಗೆ ತಿಳಿಸಿ ಒಳಗೊಳಗೆ ದ್ವೇಷ ಕಾರುತ್ತಿದ್ದ. ಈ ಮಧ್ಯೆ ಶ್ವೇತಾ ಯಲಹಂಕದ ಮನೆ ಮಾಲೀಕನ ಮಗ ಭರತ್ ಜತೆ ಸಲುಗೆ ಬೆಳೆಸಿಕೊಂಡಿದ್ದಳು. ಶ್ವೇತಾ, ಲೋಕೇಶ್ ಇಬ್ಬರ ಪ್ರೇಮದ ಬಗ್ಗೆ ತಿಳಿದುಕೊಂಡಿದ್ದ ಭರತ್, ಲೋಕೇಶ್‌ನ ಕಾಂಟ್ಯಾಕ್ಟ್ ಮಾಡಿಸುವ ನೆಪದಲ್ಲಿ ಶ್ವೇತಾಳಿಗೆ ಹತ್ತಿರವಾಗಿ ತಾನು ಪ್ರೀತಿಸಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.
ಗಂಡ ನನಗೆ ಹೊಡೆಯುತ್ತಿದ್ದಾನೆ
ಈ ಮಧ್ಯೆ ಭರತ್ ಮೊಬೈಲ್ ಬಳಸುತ್ತಿದ್ದ ಶ್ವೇತಾ, ಅದರ ಮೂಲಕ ಲೋಕೇಶ್ ಜತೆಗೆ ಮೆಸೇಜ್ ಮಾಡಿ ಮಾತುಕತೆ ನಡೆಸುತ್ತಿದ್ದಳು. ಇಬ್ಬರು ಚಾಟಿಂಗ್ ಮಾಡುವಾಗ ಪತಿ ಚಂದ್ರಶೇಖರ್ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂದು ಲೋಕೇಶ್‌ಗೆ ತಿಳಿಸಿದ್ದಳು. ಶ್ವೇತಾಳಿಗೆ ಚಂದ್ರಶೇಖರ್ ಟಾರ್ಚರ್ ಕೊಡುತ್ತಿದ್ದಾನೆಂದು ಕೇಳಿ ಕೆರಳಿದ ಲೋಕೇಶ್ ಆತನನ್ನು ಕೊಲೆ ಮಾಡುವ ಪ್ಲ್ಯಾನ್ ಮಾಡಿದ್ದಾನೆ. ಈ ವಿಷಯವನ್ನು ಮೊದಲು ಶ್ವೇತಾಳಿಗೆ ತಿಳಿಸಿದ್ದಾನೆ. ಅವಳ ಒಪ್ಪಿಗೆ ಪಡೆದ ಬಳಿಕ ಲೋಕೇಶ್ ತನ್ನ ಸಂಬಂಧಿ ಸುರೇಶ್ ಜತೆ ಸೇರಿಕೊಂಡು ಚಂದ್ರಶೇಖರ್ ಮನೆಗೆ ನುಗ್ಗಿ ಟೆರೇಸ್‌ಗೆ ಕರೆದೊಯ್ದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕ್ಷಣಕ್ಕೊಂದು ಹೇಳಿಕೆ ಕೊಟ್ಟು ಸಿಕ್ಕಿಬಿದ್ದ ಶ್ವೇತಾ
ಕೊಲೆಯಾದ ದಿನ ಶ್ವೇತಾಳ ಜತೆ ಲೋಕೇಶ್ ವಿಚಾರವಾಗಿ ಚಂದ್ರಶೇಖರ್ ಜಗಳವಾಡಿದ್ದ. ಆ ಬಳಿಕ ಯಲಹಂಕದ ಮನೆಯಲ್ಲಿ ಆರೋಪಿಗಳು ಕೊಚ್ಚಿ ಕೊಲೆ ಮಾಡಿದರು. ಈ ವೇಳೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಾ ಶ್ವೇತಾ ನಾಟಕವಾಡಿದ್ದಳು. ರಕ್ತಮಯವಾಗಿ ಬಿದ್ದಿದ್ದ ಚಂದ್ರಶೇಖರ್‌ನನ್ನು ಆಸ್ಪತ್ರೆಗೆ ಕರೆ ತಂದ ಶ್ವೇತಾ ಆ್ಯಕ್ಸಿಡೆಂಟ್ ಆಗಿದೆ ಎಂದು ಹೇಳಿದ್ದಳು. ಆದರೆ, ಮಾರಕಾಸ್ತ್ರಗಳಿಂದ ಆದ ಹಲ್ಲೆ ಎಂದು ಗಮನಿಸಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು.
ಈ ವೇಳೆ ಶ್ವೇತಾ, ಪೊಲೀಸರ ಮುಂದೆ ಯಾರೋ ಕೆಲವರು ಮಾರಕಾಸ್ತ್ರದಿಂದ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆಂದು ಹೇಳಿಕೆ ನೀಡಿದ್ದಳು. ಪತಿಯ ಹತ್ಯೆಯಲ್ಲಿ ಪತ್ನಿಯ ಕೈವಾಡ ಇರುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಲೋಕೇಶ್, ಸುರೇಶ್ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ, ಶ್ವೇತಾ ಹಾಗೂ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮುಖ್ಯ ಆರೋಪಿ ಲೋಕೇಶ್‌ಗಾಗಿ ತೀವ್ರ ಹುಡುಕಾಟವನ್ನು ಯಲಹಂಕ ಪೊಲೀಸರು ನಡೆಸುತ್ತಿದ್ದಾರೆ.
ಇದನ್ನೂ ಓದಿ | Murder | ಶಿವಮೊಗ್ಗದ ಕೊಲೆ ಆರೋಪಿ ಕಾಲಿಗೆ ಗುಂಡು, ಸ್ಥಳ ಮಹಜರು ವೇಳೆ ಹಲ್ಲೆಗೆ ಯತ್ನಿಸಿದವನಿಗೆ ತಕ್ಕ ಪಾಠ