ಕಾರವಾರ: ಅತ್ಯಂತ ಸುಂದರ ಕಡಲ ತೀರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ (Uttara Kannada News) ಪುಣ್ಯಕ್ಷೇತ್ರ ಮುರ್ಡೇಶ್ವರಕ್ಕೆ (Murdeshwara Beach) ಪ್ರವಾಸ ಹೋಗುವ ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಈ ವರದಿಯನ್ನು ಓದಿದ ಬಳಿಕವೇ ಮುಂದಿನ ನಿರ್ಧಾರ ಮಾಡಿ.
ಮುರ್ಡೇಶ್ವರದಲ್ಲಿ ಸುಂದರವಾದ ದೇಗುಲ, ವೈಭವೋಪೇತ ಶಿವನ ಮೂರ್ತಿ, ನೀರಿನಲ್ಲಿ ತೇಲುವಂತಿರುವ ರೆಸ್ಟೋರೆಂಟ್ ಎಲ್ಲವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು. ಶಿವನ ಮೂರ್ತಿ ಇರುವ ಎತ್ತರದ ಜಾಗದಿಂದ ನಿಂತು ನೋಡಿದರೆ ಕಾಣುವ ನೀಲ ಸಾಗರದ ಆಕರ್ಷಣೆಯಂತೂ ಹೇಳತೀರದು. ಅದೇ ಹೊತ್ತಿಗೆ ಇಲ್ಲಿನ ಸುಂದರ ಕಡಲ ತೀರವಂತೂ ಎಲ್ಲರಿಗೂ ಅಚ್ಚುಮೆಚ್ಚು. ಕಡಲ ತೀರದಲ್ಲಿ ನಡೆದಾಡುವುದು ಮಾತ್ರವಲ್ಲ, ಸಮುದ್ರ ಸಾಹಸಗಳಿಗೂ ಇಲ್ಲಿ ಅವಕಾಶವಿದೆ. ಇದು ಅತ್ಯಂತ ಸುರಕ್ಷಿತ ಬೀಚ್ ಎಂದೇ ಪ್ರಸಿದ್ಧವಾಗಿತ್ತು.
ಆದರೆ, ಕಳೆದ ಮೂರು ದಿನಗಳಿಂದ ಇಲ್ಲಿ ಎರಡು ಸಾವುಗಳು ಸಂಭವಿಸಿವೆ. ಹಾಗಾಗಿ ಈಗ ಕಡಲ ತೀರಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರವಾಸ ಹೋಗುವವರು ಇದನ್ನು ಗಮನಿಸಿಕೊಂಡು ತೆರಳಿದರೆ ಉತ್ತಮ.
ಹೌದು, ಕಳೆದ ಮೂರು ದಿನಗಳಲ್ಲಿ ಇಬ್ಬರು ಪ್ರವಾಸಿಗರು ಇಲ್ಲಿ ನೀರುಪಾಲಾಗಿದ್ದಾರೆ. ಕಲಘಟಗಿ ಮೂಲದ ಸಂತೋಷ ಹುಲಿಗೊಂಡ, ಬೆಂಗಳೂರಿನ ಪವನ ನಾಯ್ಕ ಮೃತ ಪ್ರವಾಸಿಗರು. ಪವನ್ ಮೃತದೇಹ ಮಂಗಳವಾರ ಮತ್ತು ಸಂತೋಷ್ ಮೃತದೇಹ ಬುಧವಾರ ಪತ್ತೆಯಾಗಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಅದರ ಜತೆಗೆ ಅಲೆಗಳ ಅಬ್ಬರವೂ ಹೆಚ್ಚಿದೆ. ಇಲ್ಲಿ ಜೀವರಕ್ಷಕರ ದೊಡ್ಡ ಪಡೆಯೂ ಇದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹೊತ್ತಿನಲ್ಲಿ ಇವರು ಇನ್ನಷ್ಟು ಅಲರ್ಟ್ ಆಗಿರುತ್ತಾರೆ. ಆದರೆ, ಪ್ರವಾಸಿಗರು ಕೆಲವು ಸಮಯದಲ್ಲಿ ಇವರ ಮಾತನ್ನು ಕೇಳದೆ ನೀರಿಗೆ ಇಳಿಯುವುದು ದೊಡ್ಡ ಸಮಸ್ಯೆಯಾಗಿದೆ. ಮೇಲಿನ ಎರಡೂ ಸಾವುಗಳು ಸಂಭವಿಸಲು ಇಂಥಹುದೇ ಉದ್ಧಟತನ ಕಾರಣವೆಂದು ಹೇಳಲಾಗಿದೆ.
ಕಲಘಟಗಿ ಮೂಲದ ಸಂತೋಷ ಹುಲಿಗೊಂಡ(19) ಅವರು ಎರಡು ದಿನದ ಹಿಂದೆ ನೀರಿಗೆ ಇಳಿದು ಕಣ್ಮರೆಯಾಗಿದ್ದರು. ಸೋಮವಾರ ಕಡಲತೀರದಲ್ಲಿ ಈಜುವಾಗ ಅಲೆಯ ಹೊಡೆತಕ್ಕೆ ಸಿಕ್ಕು ನಾಪತ್ತೆಯಾಗಿದ್ದರು. ಅವರು ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಕೊಚ್ಚಿಹೋಗಿದ್ದಾರೆ ಎನ್ನಲಾಗಿತ್ತು. ಇದೀಗ ಎರಡು ದಿನಗಳ ಬಳಿಕ ಅವರ ಶವ ಭಟ್ಕಳದ ಬೈಲೂರು ಕಡಲತೀರದಲ್ಲಿ ಪತ್ತೆಯಾಗಿದೆ.
ಜಿಲ್ಲಾಡಳಿತ ಕಠಿಣ ನಿರ್ಬಂಧ
ಮೂರು ದಿನದಲ್ಲಿ ಎರಡು ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ತಕ್ಷಣ ಅಲರ್ಟ್ ಆಗಿರುವ ಉತ್ತರ ಕನ್ನಡ ಜಿಲ್ಲಾಡಳಿತ ಪ್ರವಾಸಿಗರ ನಿಯಂತ್ರಣಕ್ಕಾಗಿ ಬೀಚ್ ಪ್ರವೇಶವನ್ನು ನಿರ್ಬಂಧಿಸಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಕಡಲತೀರಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಬೀಚ್ ಪ್ರವೇಶಿಸುವ ಎರಡು ಪ್ರವೇಶದ್ವಾರಗಳನ್ನು ಸಿಬ್ಬಂದಿ ಬಂದ್ ಮಾಡಿದ್ದಾರೆ.
ಲೈಫ್‌ಗಾರ್ಡ್ ಸಿಬ್ಬಂದಿ ಸೂಚನೆ ನಿರ್ಲಕ್ಷಿಸಿ ಪ್ರವಾಸಿಗರು ನೀರಿಗಿಳಿಯುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಈ ಕ್ರಮ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ಓದಿ: Murudeswar : ಮುರ್ಡೇಶ್ವರದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಪ್ರವಾಸಿ ನಾಪತ್ತೆ, ಇಬ್ಬರ ರಕ್ಷಣೆ