Site icon Vistara News

ಮುರುಘಾಶ್ರೀ ಪ್ರಕರಣ | ಮರುಘಾ ಶರಣರಿಗೆ ಯಶಸ್ವಿ ಕೊರೊನರಿ ಆಂಜಿಯೊಗ್ರಾಮ್‌: ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

chitradurga muruga sharana

ಶಿವಮೊಗ್ಗ: ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಯಶಸ್ವಿಯಾಗಿ ಆಂಜಿಯೊಗ್ರಾಮ್‌ ಚಿಕಿತ್ಸೆ ನೀಡಲಾಗಿದೆ.

ಕಳೆದ ಸೆಪ್ಟೆಂಬರ್‌ ೧ರಂದು ಬಂಧಿತರಾದ ಶ್ರೀಗಳಿಗೆ ಸೆಪ್ಟೆಂಬರ್‌ ೨೭ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ನೀಡಿತ್ತು. ಈ ನಡುವೆ ಶ್ರೀಗಳಿಗೆ ಹೃದಯದ ಸಮಸ್ಯೆ ಇರುವುದರಿಂದ ಕೊರೊನರಿ ಆಂಜಿಯೊಗ್ರಾಮ್‌ ನಡೆಸಬೇಕಿದ್ದು, ಆಸ್ಪತ್ರೆಗೆ ದಾಖಲಿಸಲು ಅನುಮತಿ ನೀಡಬೇಕು ಎಂದು ಶ್ರೀಗಳ ಪರವಾಗಿ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಹೀಗಾಗಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳಿಗೆ ಹೃದಯ ವಿಭಾಗದ ಐಸಿಯುನಲ್ಲಿ ತಜ್ಞ ವೈದ್ಯರ ತಂಡ ಎಲ್ಲಾ ರೀತಿಯ ತಪಾಸಣೆ ನಡೆಸಿದೆ. ಇಕೋ, ಇಸಿಜಿ, ರಕ್ತ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗೆ ಶ್ರೀಗಳನ್ನು ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಮೆಗ್ಗಾನ್ ಅಧೀಕ್ಷಕ ಡಾ. ಶ್ರೀಧರ್ ತಿಳಿಸಿದ್ದಾರೆ‌.

ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ದೈಹಿಕ ಕ್ಷಮತೆಯ ವರದಿ ಆಧರಿಸಿ ಆಂಜಿಯೋಗ್ರಾಮ್‌ ಮಾಡಲಾಗಿದೆ. ಶ್ರೀಗಳ ಕೊರೊನರಿ ಆಂಜಿಯೋಗ್ರಾಮ್ ಯಶಸ್ವಿಯಾಗಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ ಹೇಳಿದ್ದಾರೆ.

ಗುರುವಾರ ಬೆಳಗ್ಗೆ 10.45ಕ್ಕೆ ಆ್ಯಂಜಿಯೋಗ್ರಾಮ್ ಮಾಡಲಾಗಿದ್ದು, ಹೃದಯ ತಜ್ಞರಾದ ಡಾ ಮಹೇಶ್ ಮೂರ್ತಿ, ಡಾ ಪರಮೇಶ್ವರ್ ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಿದ್ದಾರೆ. ಆಂಜಿಯೋಗ್ರಾಮ್ ಮಾಡುವ ಮೊದಲು ಜೈಲು ಅಧಿಕಾರಿಯ ಅನುಮತಿ ತೆಗೆದುಕೊಳ್ಳಲಾಗಿತ್ತು. ಯಶಸ್ವಿಯಾದ ಬಳಿಕವೂ ಅವರಿಗೆ ಮಾಹಿತಿ ನೀಡಲಾಗಿದೆ. ಶ್ರೀಗಳ ಆರೋಗ್ಯ ಸ್ಥಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಕೋರ್ಟ್‌ ಅನುಮತಿ

Exit mobile version