m ಬಿ.ಎಸ್. ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಮುರುಗೇಶ್ ನಿರಾಣಿ ಹೆಸರು ಜೋರಾಗಿ ಕೇಳಿಬಂದಿತ್ತು. ಇದೀಗ ಮತ್ತದೇ ನಿರಾಣಿ ಹೆಸರು ಈಗ ಕೇಳಿಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುಗಿದಿದೆ ಎಂಬ ಹೊತ್ತಲ್ಲಿ ಬಂದಿರುವ ಆ ಒಂದು ಪೋಸ್ಟರ್ ಕುತೂಹಲ ಕೆರಳಿಸಿದೆ.
ಆಗಸ್ಟ್ ೧೮ಕ್ಕೆ ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ೫೭ನೇ ಹುಟ್ಟುಹಬ್ಬ. ಅದಕ್ಕೆ ಸ್ವತಃ ಮುರುಗೇಶ್ ನಿರಾಣಿ ಅವರ ಆಪ್ತರೇ ಪೋಸ್ಟರ್‌ಗಳನ್ನು ರೂಪಿಸಿದ್ದಾರೆ. ಶುಭಾಶಯ ಕೋರುವ ಈ ಪೋಸ್ಟರ್‌ನಲ್ಲಿ ಮುಂದಿನ ಮುಖ್ಯಮಂತ್ರಿಗಳು ಎಂದು ಬರೆಯಲಾಗಿದೆ! ನಿರಾಣಿ ಆಪ್ತ ಸಹಾಯಕ ಕಿರಣ ಬಡಿಗೇರ ಅವರಿಂದ ರೆಡಿಯಾಗಿದ್ದ ಪೋಸ್ಟರ್ ಇದಾಗಿರುವುದರಿಂದ ಇದು ನಿರಾಣಿ ಅವರ ಅರಿವಿನಲ್ಲೇ ನಡೆದ ಕೆಲಸ ಎನ್ನುವುದು ಬಹುತೇಕ ಸ್ಪಷ್ಟ ಅಂತ ಹೇಳಲಾಗುತ್ತಿದೆ. ಈ ನಡುವೆ ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಎಂಬ ಪದವನ್ನು ತೆಗೆದು ಬೇರೆ ಪೋಸ್ಟರ್ ಬಿಡಲಾಗಿದೆ.
ಜಮಖಂಡಿ ಮೇಲೆ ಕಣ್ಣು?
ಇನ್ನು ಈ ಪೋಸ್ಟರ್ ಮೂಲಕ ಬೆಳಕಿಗೆ ಬಂದಿರುವ ಇನ್ನೊಂದು ಸಂಗತಿ ಎಂದರೆ ಹಾಲಿ ಬೀಳಗಿ ಶಾಸಕರಾಗಿರುವ ಮುರುಗೇಶ್ ನಿರಾಣಿ ಅವರು ಈ ಬಾರಿ ಜಮಖಂಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು. ಈ ಅಂಶವನ್ನು ಎರಡೂ ಪೋಸ್ಟರ್‌ಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಅದರಲ್ಲಿ ಜಮಖಂಡಿ ಜಿಲ್ಲೆಯ ಕನಸನ್ನು ನನಸು ಮಾಡುವ ನಾಯಕ ಎಂದು ಬಿಂಬಿಸಲಾಗಿದೆ.
ಜಮಖಂಡಿ ಕಡೆಗೆ ಆಕರ್ಷಣೆ ಯಾಕೆ?
ಜಮಖಂಡಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯ ಜನ ಹೆಚ್ಚಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಇಲ್ಲಿ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಲಾಗಿತ್ತು. ಈ ಪೀಠ ಸ್ಥಾಪನೆಯ ಹಿಂದೆಯೂ ಮುರುಗೇಶ್ ನಿರಾಣಿ ಅವರೇ ಇದ್ದರು.
ಕಳೆದ ಬಾರಿಯೇ ಪ್ರಯತ್ನ ಮಾಡಿದ್ದರು
ಪಂಚಮ ಸಾಲಿ ಪೀಠ ಸ್ಥಾಪನೆ ಗಮನಿಸಿದರೆ ನಿರಾಣಿ ಜಮಖಂಡಿ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾ ಅನಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಜಮಖಂಡಿಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ನಿರಾಣಿ ಸಹೋದರ ಸಂಗಮೇಶ ನಿರಾಣಿ ಅವರು ಸಜ್ಜಾಗಿದ್ದರು. ಆದರೆ, ಯಡಿಯೂರಪ್ಪ ಮಧ್ಯಸ್ಥಿಕೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆದರೆ, ಈ ಬಾರಿ ಈಗಿನಿಂದಲೇ ಕ್ಷೇತ್ರವನ್ನು ಪಕ್ಕಾ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಜನ್ಮ ದಿನದ ನೆಪದಲ್ಲಿ ತಮ್ಮ ಆಕಾಂಕ್ಷೆಯನ್ನು ಪ್ರಬಲವಾಗಿ ಮಂಡಿಸಿದ್ದಾರೆ.
ಇದನ್ನೂ ಓದಿ| ಸಿಎಂ ಬೊಮ್ಮಾಯಿ ಮಂಡಿ ನೋವನ್ನು ಅಣಕಿಸಿದರೇ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ?