Site icon Vistara News

ಮುರುಘಾಮಠ ಪ್ರಕರಣ| ಹಾಸ್ಟೆಲ್‌ ಬಿಟ್ಟು ಬೆಂಗಳೂರಿಗೆ ಬಂದಿದ್ದ ಬಾಲಕಿಯರು, ವಾರ್ಡನ್‌ ಬಗ್ಗೆ ಬೇಸರ, ಶ್ರೀಗಳ ಬಗ್ಗೆ ದೂರಿಲ್ಲ

murugha students

ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಪೀಠಾಧಿಪತಿಯಾಗಿರುವ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಇಬ್ಬರು ವಿದ್ಯಾರ್ಥಿನಿಯರು ಕಳೆದ ಜುಲೈ ೨೪ರಂದು ಚಿತ್ರದುರ್ಗದ ಹಾಸ್ಟೆಲ್‌ ಬಿಟ್ಟು ಬೆಂಗಳೂರಿಗೆ ಬಂದಿರುವುದನ್ನು ಕಾಟನ್‌ ಪೇಟೆ ಪೊಲೀಸರು ಖಚಿತಪಡಿಸಿದ್ದಾರೆ. ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಶ್ರೀಗಳ ಬಗ್ಗೆ ಯಾವುದೇ ದೂರು ಹೇಳಿಕೊಂಡಿಲ್ಲ. ಆದರೆ, ಹಾಸ್ಟೆಲ್‌ ವಾರ್ಡನ್‌ ಬಗ್ಗೆ ಮಾತ್ರ ಆರೋಪ ಮಾಡಿದ್ದರು ಎಂದು ತಿಳಿಸಿದ್ದಾರೆ.

ಯಾಕಾಗಿ ಬಂದಿದ್ದರು?
ಜುಲೈ ೨೪ರಂದು ವಾರ್ಡನ್‌ ಅವರ ಬಳಿ ವೈಯಕ್ತಿಕ ಕಾರಣವನ್ನು ಹೇಳಿ ಚಿತ್ರದುರ್ಗದಿಂದ ಹೊರಟಿದ್ದ ಈ ವಿದ್ಯಾರ್ಥಿನಿಯರು ರಾತ್ರಿ ೧೧.೩೦ರ ಹೊತ್ತಿಗೆ ಮೆಜೆಸ್ಟಿಕ್‌ ತಲುಪಿದ್ದರು. ಅವರು ಆಟೋದಲ್ಲಿ ಲಗ್ಗೆರೆಗೆ ಹೋಗಿದ್ದರು. ಆದರೆ, ಆ ಸಂದರ್ಭದಲ್ಲಿ ಯುವತಿಯ ದೊಡ್ಡಮ್ಮ ಅವರನ್ನು ಮನೆಗೆ ಬಿಟ್ಟುಕೊಂಡಿಲ್ಲ ಎನ್ನಲಾಗಿದೆ. ಅದೇ ಆಟೊ ಚಾಲಕ ಅವರನ್ನು ಮೆಜೆಸ್ಟಿಕ್‌ಗೆ ಕರೆ ತಂದಿದ್ದ. ಬಳಿಕ ಪೊಲೀಸ್‌ ಕಂಟ್ರೋಲ್‌ ರೂಂಗೆ ಫೋನ್‌ ಮಾಡಿದ್ದ.

ಚಾಲಕನ ಫೋನ್‌ ಕರೆಗೆ ಸ್ಪಂದಿಸಿದ ಪೊಲೀಸರು ಕೂಡಲೇ ಸ್ಥಳಕೆಕ ಬಂದು ಅವರನ್ನು ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ಕರೆತಂದಿದ್ದರು. ಅಲ್ಲಿ ವಿಚಾರಣೆ ನಡೆಸಿದಾಗ ತಾವು ಚಿತ್ರದುರ್ಗದ ಮುರುಘಾಮಠದ ಅನಾಥಾಲಯದಲ್ಲಿದ್ದು ವಾರ್ಡನ್ ಕಿರುಕುಳದಿಂದ ಹೊರಗೆ ಬಂದಿದ್ದೇವೆ ಎಂದು ಹೇಳಿದದ್ದರು. ಕೂಡಲೇ ಪೊಲೀಸರು ಮಠವನ್ನು ಸಂಪರ್ಕಿಸಿದಾಗ ಅಲ್ಲಿನವರು ಆಡಳಿತಾಧಿಕಾರಿಯಾಗಿದ್ದ ಬಸವರಾಜ್‌ ಅವರ ಫೋನ್‌ ನಂಬರ್‌ ನೀಡಿದ್ದರು.

ಬಸವರಾಜ್‌ ಅವರು ತಾವೇ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದ್ದರಾದರೂ ಪುರುಷರ ಜತೆ ಕಳುಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದರು. ಆಗ ಬಸವರಾಜ್‌ ಅವರು ತಮ್ಮ ಪತ್ನಿ ಸೌಭಾಗ್ಯ ಅವರನ್ನೂ ಕರೆದುಕೊಂಡುಬಂದಿದ್ದರು. ಚಿತ್ರದುರ್ಗದಿಂದ ಹೊರಟು ಬಂದ ಬಸವರಾಜ್‌ ದಂಪತಿ ಬೆಳಗ್ಗೆ ಐದು ಗಂಟೆಗೆ ಕಾಟನ್‌ ಪೇಟೆ ಪೊಲೀಸ್‌ ಠಾಣೆ ತಲುಪಿದ್ದರು. ಈ ವೇಳೆ ಮಕ್ಕಳು ಹಾಗೂ ಬಸವರಾಜ್ ದಂಪತಿ ಹೇಳಿಕೆ ಪಡೆದು ಪೊಲೀಸರು ಅವರ ಜತೆ ಕಳುಹಿಸಿಕೊಟ್ಟಿದ್ದರು.

ವಿಚಾರಣೆಯ ವೇಳೆ ವಿದ್ಯಾರ್ಥಿನಿರು ಮುರುಘಾಮಠದ ಸ್ವಾಮಿಜಿ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎನ್ನಲಾಗಿದೆ. ಆದರೆ, ವಾರ್ಡನ್ ರಶ್ಮಿ ಅವರ ವಿರುದ್ಧ ಆರೋಪ ಮಾಡಿದ್ದರು. ಈ ನಡುವೆ, ಪೊಲೀಸರು ಬಸವರಾಜ್ ದಂಪತಿ ಜೊತೆ ಹುಡುಗಿಯರ ಪೋಟೊ ತೆಗೆದುಕೊಂಡು ಕಳುಹಿಸಿದ್ದರು.

ಮಕ್ಕಳನ್ನು ಕರೆದುಕೊಂಡು ಹೋದ ಬಸವರಾಜ್‌ ದಂಪತಿ ಅವರನ್ನು ಪೋಷಕರ ಕೈಗೆ ಒಪ್ಪಿಸಿದ ಬಗ್ಗೆ ಜುಲೈ ೨೭ರಂದು ಕಾಟನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಾರ್ಡನ್‌ ರಶ್ಮಿ ಅವರು ಇದೇ ರೀತಿ ಹೇಳಿದ್ದರು
ಹುಡುಗಿಯರ ನಾಪತ್ತೆಗೆ ಸಂಬಂಧಿಸಿ ವಾರ್ಡನ್‌ ರಶ್ಮಿ ಅವರು ಕೂಡಾ ಇದೇ ಮಾಹಿತಿಯನ್ನು ನೀಡಿದ್ದರು. ಆದರೆ, ಬಸವರಾಜ್‌ ದಂಪತಿ ವಿದ್ಯಾರ್ಥಿನಿಯರನ್ನು ಎರಡು ದಿನಗಳ ವರೆಗೆ ಹಾಸ್ಟೆಲ್‌ಗೆ ಒಪ್ಪಿಸಿಲ್ಲ ಮತ್ತು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಿದ್ದರು.
‌ಇದನ್ನೂ ಓದಿ| ಮುರುಘಾಮಠ ಪ್ರಕರಣ| ಮಾಜಿ ಶಾಸಕ ಎಸ್‌.ಕೆ ಬಸವರಾಜನ್‌, ಪತ್ನಿ ವಿರುದ್ಧ ದೂರು ನೀಡಿದ ಹಾಸ್ಟೆಲ್ ವಾರ್ಡನ್‌

Exit mobile version