ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪದ ಹಿಂದೆ ವಿರೋಧಿಗಳ ಕೈವಾಡವಿದೆ ಎಂದು ಮುರುಘಾಮಠ ಪರ ವಕೀಲ ವಿಶ್ವನಾಥಯ್ಯ ಹೇಳಿದ್ದಾರೆ.
ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಆರೋಪಗಳಿಂದ ಶ್ರೀಗಳಿಗೆ ಬೇಸರವಾಗಿದೆ. ಅವರು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ಆದರೆ, ಇದು ಸುಳ್ಳು ಎಂದು ಅವರು ಹೇಳಿದ್ದಾರೆ ಎಂದರು.
ಮುರುಘಾಮಠದ ಕೆಲವು ವಿರೋಧಿಗಳು ಸುಳ್ಳು ದೂರು ನೀಡಿದ್ದಾರೆ. ಬಾಲಕಿಯರ ತಲೆಯನ್ನು ಕೆಡಿಸಿ ಶ್ರೀಗಳ ವಿರುದ್ಧ ಎತ್ತಿಕಟ್ಟಲಾಗಿದೆ. ಅವರನ್ನೂ ದುರುಪಯೋಗ ಮಾಡಲಾಗಿದೆ ಎಂದು ವಕೀಲರು ಹೇಳಿದರು.
ಈ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ಶ್ರೀಗಳು ಮತ್ತು ಮಠದ ಗೌರವಕ್ಕೆ ಹಾನಿ ಮಾಡುವ ಈ ಪ್ರಯತ್ನವನ್ನು ಹೀಗೇ ಬಿಡಲಾಗದು. ಒಂದೊಮ್ಮೆ ಸುಳ್ಳು ದೂರು ನೀಡಿದವರಿಗೆ ಬುದ್ಧಿ ಬಂದು ಅವರೇನಾದರೂ ಕೇಸು ಹಿಂಪಡೆದರೆ ಒಳ್ಳೆಯದು ಎಂದು ಅವರು ಸ್ಪಷ್ಟಪಡಿಸಿದರು. ಈ ನಡುವೆ, ಮಠದ ಹಾಸ್ಟೆಲ್‌ನ ವಾರ್ಡನ್ ರಶ್ಮಿ ಅವರು ಮಾಜಿ ಶಾಸಕ ಎಸ್‌ಕೆ ಬಸವರಾಜ್ ಅವರ ವಿರುದ್ಧ ದೂರು ನೀಡಿರುವುದು ತಿಳಿದುಬಂದಿದೆ ಎಂದು ವಕೀಲ ವಿಶ್ವನಾಥಯ್ಯ ಹೇಳಿದರು.
ಏನಿದು ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮಠದ ಮೂಲಕ ನಡೆಸಲಾಗುವ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಾ, ವಸತಿ ಶಾಲೆಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ವಿದ್ಯಾರ್ಥಿನಿ ಮೇಲೆ ಮೂರು ವರ್ಷದಿಂದ ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ಒಂದೂವರೆ ವರ್ಷದಿಂದ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ. ಅವರಿಬ್ಬರು ಮಹಿಳಾ ರಕ್ಷಣಾ ಸಮಿತಿ ಮತ್ತು ಸಾಂತ್ವನ ಕೇಂದ್ರವಾದ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದರು. ಸಂಸ್ಥೆಯು ಅವರಿಬ್ಬರನ್ನೂ ಕರೆಸಿಕೊಂಡು ಆಪ್ತ ಸಮಾಲೋಚನೆಯ ಮೂಲಕ ದೌರ್ಜನ್ಯದ ವಿವರಗಳನ್ನು ಪಡೆದುಕೊಂಡು ಇದೀಗ ಚಂದ್ರಕುಮಾರ್ ಎಂಬುವರ ಮೂಲಕ ಪೊಲೀಸರಿಗೆ ದೂರು ನೀಡಿದೆ.
ಹೇಗೆ ದೌರ್ಜನ್ಯ, ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್ ಗಂಗಾಧರ್ ಮತ್ತು ಲೀಡರ್ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.
ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿಗಳ ಬಳಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿಯೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತಲೂ ಗಂಭೀರವಾದ ಇನ್ನೊಂದು ಆರೋಪವೆಂದರೆ ವಿದ್ಯಾರ್ಥಿನಿಯರನ್ನು ಹೀಗೆ ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಕಿರುಕುಳವನ್ನು ಪ್ರಶ್ನಿಸಿದ ಕಾರಣಕ್ಕೆ ಈ ವಿದ್ಯಾರ್ಥಿನಿಯರನ್ನು ಹಾಸ್ಟೆಲ್‌ನಿಂದ ಹೊರದಬ್ಬಲಾಗಿದೆ ಎಂದು ಆರೋಪಿಸಲಾಗಿದೆ.
ಈ ನಡುವೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ದೂರು ನೀಡಿದ ಬಾಲಕಿಯರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.