Site icon Vistara News

Murugha seer | ವೈದ್ಯಕೀಯ ವರದಿ ಕುತಂತ್ರದ ಭಾಗ, ಇದು ಕ್ಲೀನ್‌ಚಿಟ್‌ ಅಲ್ಲ ಎಂದ ಒಡನಾಡಿ, ಸಿಬಿಐ ತನಿಖೆಗೆ ಆಗ್ರಹ

ಮುರುಗಾಶ್ರೀ ಪ್ರಕರಣ

ಮೈಸೂರು: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ (Murugha seer) ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂಬ ವೈದ್ಯಕೀಯ ವರದಿಗಳ ಬಗ್ಗೆ ಈ ವಿಚಾರದಲ್ಲಿ ತೀವ್ರ ಹೋರಾಟ ನಡೆಸುತ್ತಿರುವ ಮೈಸೂರಿನ ಒಡನಾಡಿ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.

ಪೋಕ್ಸೋ ಪ್ರಕರಣದಲ್ಲಿ ವೈದ್ಯಕೀಯ ವರದಿ ಅಷ್ಟು ಮುಖ್ಯವಲ್ಲ. ನ್ಯಾಯಾಧೀಶರ ಮುಂದೆ ಮಕ್ಕಳು ನೀಡಿರುವ ಹೇಳಿಕೆಯೇ ಮುಖ್ಯ ಆಗುತ್ತವೆ ಎಂದು ವಿಸ್ತಾರ ನ್ಯೂಸ್‌ಗೆ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿಕೆ ನೀಡಿದ್ದಾರೆ.

ಈ ರೀತಿ ವರದಿ ನೀಡುವುದು ಕುತಂತ್ರದ ಒಂದು ಭಾಗವಾಗಿದೆ. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಕುತಂತ್ರ ನಡೆದಿದೆ. ಬೆನಿಫಿಟ್ ಆಫ್ ಡೌಟ್ ಎಂಬ ವಿಚಾರ ಮುಂದಿಟ್ಟುಕೊಂಡು ಜಾಮೀನು ಪಡೆಯುವ ತಂತ್ರಗಾರಿಕೆ ನಡೆದಿದೆ. ಆರಂಭದಿಂದಲೂ ಹಲವು ಅಧಿಕಾರಿಗಳು ಆರೋಪಿಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ ಎಂದು ಒಡನಾಡಿ ಸ್ಟ್ಯಾನ್ಲಿ ಹೇಳಿದ್ದಾರೆ. ವಿಧಿವಿಜ್ಞಾನ ಸಂಸ್ಥೆಯ ವರದಿಗಳು ಬರಬೇಕು. ಅದರ ಆಧಾರದಲ್ಲಿ ವರದಿ ಮಾಡಬೇಕು. ಹೀಗಿರುವಾಗ ಈ ಬಿಡುಗಡೆಯಾಗಿರುವ ವರದಿಗೆ ಪ್ರಾಮುಖ್ಯತೆ ಇರುವುದಿಲ್ಲ ಎಂದು ಸ್ಟ್ಯಾನ್ಲಿ ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಒಡನಾಡಿ ಸಂಸ್ಥೆಯೇ ಆರಂಭದಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಆಗಸ್ಟ್‌ ತಿಂಗಳಲ್ಲಿ ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದ್ದರು ಎಂದು ಹೇಳಲಾಗಿದ್ದು, ಆಗಸ್ಟ್‌ ೨೬ರಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಬಳಿಕ ಅದನ್ನು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು.

ಈ ನಡುವೆ, ಒಡನಾಡಿ ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪವನ್ನೂ ಮಾಡಿತ್ತು. ಜತೆಗೆ ಈ ಪ್ರಕರಣ ಮುಚ್ಚಿ ಹಾಕಲು ಕೋಟ್ಯಂತರ ರೂಪಾಯಿ ಆಮಿಷವೂ ಬಂದಿದೆ ಎಂದು ಹೇಳಿಕೊಂಡಿತ್ತು.

ಇದೀಗ ವೈದ್ಯಕೀಯ ವರದಿ ಮತ್ತು ವಿದ್ಯಾರ್ಥಿನಿಯರು ಕೂಡಾ ತಮ್ಮ ಮೇಲೆ ಖಾಸಗಿ ಭಾಗಗಳ ಮೂಲಕ ದೇಹ ಭಾಗ ಒಳ ಹೋಗುವಂತೆ ಅತ್ಯಾಚಾರ ನಡೆಸಿಲ್ಲ ಎಂದು ಹೇಳಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಒಡನಾಡಿಯ ಹೇಳಿಕೆ ಮಹತ್ವ ಪಡೆದಿದೆ.

ʻʻ20ಕ್ಕೂ ಹೆಚ್ಚು ಮಕ್ಕಳ ಮೇಲೆ ಅತ್ಯಾಚಾರ ಆಗಿದೆ ಎಂಬ ದೂರಿದೆ. ಪ್ರಕರಣ ತನಿಖೆ ಹಳ್ಳ ಹಿಡಿದಿದೆ. ಅದಕ್ಕಾಗಿ ತನಿಖೆಯನ್ನು ಸಿಬಿಐ ಅಥವಾ ಸಿಐಎ ಅಥವಾ ನ್ಯಾಯಾಧೀಶರ ಸಮ್ಮುಖದಲ್ಲಿ ಮಾಡಿಸಬೇಕು. ಇವರು ಏನೇ ಮಾಡಿದರೂ ನ್ಯಾಯಾಧೀಶರು ಎಲ್ಲವನ್ನೂ ಗಮನಿಸುತ್ತಾರೆ.. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆʼʼ ಎಂದು ಒಡನಾಡಿ ನಿರ್ದೇಶಕರು ಹೇಳಿದರು.

ವೈದ್ಯಕೀಯ ವರದಿಯಲ್ಲಿ ಏನಿದೆ?
ವಿಸ್ತಾರ ನ್ಯೂಸ್‌ಗೆ ಲಭ್ಯವಿರುವ ಮಾಹಿತಿ ಪ್ರಕಾರ, ಇಬ್ಬರೂ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಇಬ್ಬರೂ ಮಕ್ಕಳ ಯೋನಿ ಪೊರೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಆದರೆ, ತನಿಖಾಧಿಕಾರಿಗಳು ಮತ್ತು ಆಪ್ತ ಸಮಾಲೋಚಕರ ಮುಂದೆ ಬಾಲಕಿಯರು ನೀಡಿದ ಹೇಳಿಕೆಯಲ್ಲಿ, ಮುರುಘಾಶರಣರು ನಿರಂತರವಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ತಮ್ಮ ಖಾಸಗಿ ಭಾಗಗಳ ಒಳಗೆ ಅವರ ಖಾಸಗಿ ಅಂಗಗಳನ್ನು ಹಾಕುತ್ತಿದ್ದರು (Sexual penetration) ಎಂದು ಹೇಳಿರುವುದು ದಾಖಲಾಗಿದೆ.

ಇಬ್ಬರು ಬಾಲಕಿಯರ ಪೈಕಿ ಒಬ್ಬಳು ಆರಂಭದಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಒಪ್ಪಿರಲಿಲ್ಲ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪ್ರಮಾಣ ಮಾಡಿದ್ದ ಆಕೆ ಕೆಲವು ದಿನಗಳ ಸಮಾಲೋಚನೆಗಳ ಬಳಿಕ ಪರೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದಳು. ಆದರೆ, ಆಗ ತನ್ನ ಖಾಸಗಿ ಭಾಗಗಳ ಒಳಗೆ ಶ್ರೀಗಳು ಖಾಸಗಿ ಅಂಗವನ್ನು ಹಾಕಿಲ್ಲ ಎಂದು ಬಳಿಕ ಆಕೆ ಹೇಳಿರುವುದು ದಾಖಲೆಯಲ್ಲಿ ಸ್ಪಷ್ಟವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ | Murugha seer ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ | ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎನ್ನುತ್ತಿದೆ ವೈದ್ಯಕೀಯ ವರದಿ!

Exit mobile version