ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಲೈಂಗಿಕ ಕ್ರಿಯೆ ನಡೆಸಲು ಶಕ್ತರೇ ಎನ್ನುವ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಯಿತು ಎಂದು ಜಿಲ್ಲಾ ಎಸ್‌ಪಿ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ೨೭ರಂದು ಶ್ರೀಗಳ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಸಂಬಂಧ ಸೆಪ್ಟೆಂಬರ್ ೧ರಂದು ಶ್ರೀಗಳನ್ನು ಬಂಧಿಸಲಾಗಿತ್ತು. ಅಂದು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದರೂ. ಸೆ. ೨ರಂದು ನಾಲ್ಕು ದಿನಗಳ ಕಸ್ಟಡಿಗೆ ಕೊಡಲಾಗಿದೆ. ಶುಕ್ರವಾರದಿಂದ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಶನಿವಾರ ಮುಂಜಾನೆ ಡಿವೈಎಸ್‌ಪಿ ಕಚೇರಿಯಲ್ಲಿ ತನಿಖಾಧಿಕಾರಿ ಡಿವೈಎಸ್‌ಪಿ ಅನಿಲ್ ಕುಮಾರ್ ಮತ್ತು ಎಸ್‌ಪಿ ಪರಶುರಾಮ್ ಅವರು ಶ್ರೀಗಳ ವಿಚಾರಣೆ ನಡೆಸಿದರು. ಬಳಿಕ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಲಾಯಿತು.
ಶ್ರೀಗಳು ಲೈಂಗಿಕ ಕ್ರಿಯೆ ನಡೆಸಲು ಶಕ್ತರೋ ಅಲ್ಲವೋ ಎನ್ನುವುದನ್ನು ಪರೀಕ್ಷಿಸಲು ಪುರುಷತ್ವ ಪರೀಕ್ಷೆ ನಡೆಸಲಾಗಿದೆ ಎಂದು ಎಸ್‌ಪಿ ಅವರೇ ತಿಳಿಸಿದ್ದಾರೆ. ಆದರೆ, ಇದರ ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಪರೀಕ್ಷೆಯ ನಂತರ ಮತ್ತೆ ಡಿವೈಎಸ್‌ಪಿ ಕಚೇರಿಗೆ ಕರೆ ತಂದು ವಿಚಾರಣೆ ಮುಂದುವರಿಸಲಾಯಿತು.
ಮುಂಜಾನೆಯಿಂದಲೇ ಚಟುವಟಿಕೆ
ಡಿವೈಎಸ್‌ಪಿ ಕಚೇರಿಯಲ್ಲಿದ್ದ ಶ್ರೀಗಳ ಪರವಾಗಿ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿದೆಯಾದರೂ ಅದಕ್ಕೆ ಕೋರ್ಟ್ ಯಾವುದೇ ಪ್ರತಿಕ್ರಿಯೆ ನೀಡಿದಂತಿಲ್ಲ. ಪೊಲೀಸ್ ಕಸ್ಟಡಿ ಮುಗಿಯುವವರೆಗೆ ಅವರ ಜಾಮೀನು ಅರ್ಜಿ ಪರಿಗಣನೆಯಾಗುವುದು ಕಷ್ಟ ಎಂದು ಹೇಳಲಾಗಿದೆ.
ಈ ನಡುವೆ ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕವಾಗಿ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮಠಕ್ಕೆ ಭೇಟಿ ನೀಡಿದ್ದರು.
ಶ್ರೀಗಳು ಮಠಕ್ಕೆ ಬರುತ್ತಾರೆ ಎಂದು ಸಾರ್ವಜನಿಕರು, ಭಕ್ತರು ಮಾತ್ರವಲ್ಲದೆ, ಕೆಲವು ಮಠಗಳ ಸ್ವಾಮೀಜಿಗಳು ಕೂಡಾ ಆಗಮಿಸಿದ್ದರು. ಆದರೆ, ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಬರಲಾಗಿಲ್ಲ.
ಸಂತ್ರಸ್ತೆ ಚಿಕ್ಕಪ್ಪನ ಎಂಟ್ರಿ!
ಇದೆಲ್ಲದರ ಕೊನೆಗೆ ಸಂತ್ರಸ್ತ ಬಾಲಕಿಯರಲ್ಲಿ ಒಬ್ಬಳ ಚಿಕ್ಕಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಕಳೆದ ಬಾರಿ ಬಾಲಕಿಯರು ಹಾಸ್ಟೆಲ್‌ನಿಂದ ಕಾಣೆಯಾಗಿ ಬೆಂಗಳೂರಿನಿಂದ ಸಿಕ್ಕಿದ ಬಳಿಕ ಅವರು ಬಸವರಾಜನ್ ಅವರ ಮನೆಯಲ್ಲೇ ಇದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ. ತಾವು ಬೆಂಗಳೂರಿನಿಂದ ಕರೆದುಕೊಂಡು ಬಂದ ವಿದ್ಯಾರ್ಥಿನಿಯರನ್ನು ಎರಡು ದಿನ ಮನೆಯಲ್ಲಿ ಇಟ್ಟುಕೊಂಡು ಬಳಿಕ ಅವರ ಮನೆಗೆ ಕಳುಹಿಸಿದ್ದಾಗಿ ಬಸವರಾಜನ್ ಹೇಳಿದ್ದಕ್ಕೂ ಇದಕ್ಕೂ ತಾಳೆಯಾಗುತ್ತಿಲ್ಲ. ಹೀಗಾಗಿ ಬಸವರಾಜನ್ ಅವರು ವಿದ್ಯಾರ್ಥಿನಿಯರನ್ನು ಒಂದು ತಿಂಗಳ ಕಾಲ ತಮ್ಮ ಮನೆಯಲ್ಲೇ ಉಳಿಸಿಕೊಂಡು ಅವರ ತಲೆ ತುಂಬಿ ಮುರುಘಾಶರಣರ ವಿರುದ್ಧ ದೂರು ಕೊಡಿಸಿದರೇ ಎನ್ನುವುದು ಈಗ ಓಡಾಡಲು ಶುರುವಾಗಿರುವ ಥಿಯರಿ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣಕ್ಕೆ Big twist: ಸಂತ್ರಸ್ತ ಬಾಲಕಿ 1 ತಿಂಗಳು ಬಸವರಾಜನ್ ಮನೆಲೇ ಇದ್ದಳು ಎಂದ ಚಿಕ್ಕಪ್ಪ