ಚಿತ್ರದುರ್ಗ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಚಿತ್ರದುರ್ಗದ ಅಪರ ಮತ್ತು ಸತ್ರ ಜಿಲ್ಲಾ ನ್ಯಾಯಾಲಯವು ಇಲ್ಲಿನ ಮುರುಘಾ ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದಾರೆ.
ಶ್ರೀ ಮಠಕ್ಕೆ ಸೇರಿದ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ಎದುರಿಸುತ್ತಿರುವ ಶ್ರೀಗಳು ಬಂಧನ ಭೀತಿ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ ಈ ಅರ್ಜಿಯ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ಮುಂದೂಡಲಾಗಿದೆ. ಇದರಿಂದಾಗಿ ಒಂದೊಮ್ಮೆ ಪೊಲೀಸರು ಶ್ರೀಗಳನ್ನು ಪೋಕ್ಸೋ ಪ್ರಕರಣದಲ್ಲಿ ಇಂದೇ ಬಂಧಿಸಲು ನಿರ್ಧರಿಸಿದರೆ ಅವರಿಗೆ ಯಾವುದೇ ಕಾನೂನಾತ್ಮಕ ರಕ್ಷಣೆ ಇರುವುದಿಲ್ಲ.
ಇದು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವಾಗಿರುವುದರಿಂದ ಪೋಕ್ಸೋ ಕಾಯಿದೆಯಡಿ ಯಾವುದೇ ಕ್ಷಣ ಬಂಧನ ಆಗಬಹುದು ಎಂಬ ಭೀತಿ ಎದುರಾಗಿದ್ದು, ಹೀಗಾಗಿ ಶ್ರೀಗಳ ಪರವಾಗಿ ಸೆಪ್ಟೆಂಬರ್ 30ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತ್ತು.
ಗುರುವಾರ ಅಪರ ಮತ್ತು ಸತ್ರ ಜಿಲ್ಲಾ ನ್ಯಾಯಾಲಯದಲ್ಲಿ ಐಆರ್‌ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಜಾಮೀನು ಅರ್ಜಿಯ ವಿಚಾರಣೆ ಆರಂಭಗೊಂಡಿತ್ತು. ಮೊದಲ ಕಾಲಿಂಗ್ ಅವರ್ ಮುಗಿದ ಬಳಿಕ ಶ್ರೀಗಳ ಅರ್ಜಿ ವಿಚಾರಣೆ ನಡೆದಿತ್ತು.
ಇನ್ ಕ್ಯಾಮೆರಾ ವಿಚಾರಣೆ
ಇದು ಮುರುಘಾ ಶ್ರೀ ವರ್ಸಸ್ ಇಬ್ಬರು ಬಾಲಕಿಯರ ನಡುವಿನ ಪ್ರಕರಣವಾಗಿದ್ದರಿಂದ ವಿದ್ಯಾರ್ಥಿನಿಯರನ್ನೂ ಕೋರ್ಟ್‌ಗೆ ಕರೆ ತರಲಾಗಿತ್ತು. ವಿದ್ಯಾರ್ಥಿನಿಯರು ಇದ್ದುದರಿಂದ ಇನ್ ಕ್ಯಾಮೆರಾ ವಿಚಾರಣೆ ನಡೆಯಿತು.
ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ವಿದ್ಯಾರ್ಥಿನಿಯರ ಕಡೆಯಿಂದ ತಕರಾರು ಅರ್ಜಿಗೆ ಅವಕಾಶ ನೀಡಬೇಕಾಗಿತ್ತು. ಆದರೆ, ಅವರ ಪರವಾಗಿ ವಾದಿಸುವ ವಕೀಲರು ಯಾರು ಎನ್ನುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲದೆ ಅರ್ಜಿ ಸಲ್ಲಿಸಲಾಗಿರಲಿಲ್ಲ. ಸರಕಾರ ವಿದ್ಯಾರ್ಥಿನಿಯರ ಪರವಾಗಿ ಒಬ್ಬ ಅಭಿಯೋಜಕರನ್ನು ಗೊತ್ತುಪಡಿಸಿತ್ತು. ಈ ನಡುವೆ, ವಿದ್ಯಾರ್ಥಿನಿಯರ ಕಡೆಯವರು ಬೆಂಗಳೂರಿನ ಶಂಕರ್ ಎಂಬ ಒಬ್ಬ ವಕೀಲರನ್ನು ನೇಮಿಸಲು ಮುಂದಾಗಿದ್ದರು. ಗುರುವಾರ ನ್ಯಾಯಾಲಯದಲ್ಲಿ ಅವರಿಬ್ಬರೂ ಹಾಜರಾದರು. ನ್ಯಾಯಾಧೀಶರು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿದರು. ಆಗ ವಿದ್ಯಾರ್ಥಿನಿಯರು ಬೆಂಗಳೂರಿನಿಂದ ಬಂದಿರುವ ವಕೀಲ ಶಂಕರ್ ಅವರ ಮೇಲೆ ತಮಗೆ ವಿಶ್ವಾಸವಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಅವರನ್ನು ನೇಮಿಸಿಕೊಳ್ಳಲಾಗಿದೆ.
ಇದೀಗ ಕೋರ್ಟ್ ಅವರಿಗೆ ತಕರಾರು ಅರ್ಜಿ ಸಲ್ಲಿಸಲು ಒಂದು ದಿನದ ಕಾಲಾವಕಾಶ ನೀಡಿದೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಮುಂದೇನಾಗಲಿದೆ?
ಒಂದೊಮ್ಮೆ ಚಿತ್ರದುರ್ಗದ ಅಪರ ಮತ್ತು ಸತ್ರ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ತಿರಸ್ಕೃತವಾಗಿದ್ದರೆ ಶ್ರೀಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇತ್ತು. ಆದರೆ, ವಿಚಾರಣೆ ಮುಂದೂಡಿದ್ದರಿಂದ ಆ ಸಾಧ್ಯತೆ ಇಲ್ಲವಾಗಿದೆ.
ಈ ನಡುವೆ, ವಿದ್ಯಾರ್ಥಿನಿಯರು ತಮಗಾಗಿರುವ ಅನ್ಯಾಯದ ವಿಚಾರದಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅದರ ವರದಿ ಈಗ ತನಿಖಾಧಿಕಾರಿಗಳಿಗೆ ತಲುಪಿದೆ. ತನಿಖಾಧಿಕಾರಿಗಳು ಈ ವರದಿಯಲ್ಲಿರುವ ಮಾಹಿತಿಯನ್ನು ಆಧರಿಸಿ ಶ್ರೀಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅದಕ್ಕೆ ಶ್ರೀಗಳು ಉತ್ತರಿಸಲು ಕಾಲಾವಕಾಶ ಸಿಗಬಹುದು.
ನಿಜವೆಂದರೆ, ಪೋಕ್ಸೊ ಪ್ರಕರಣದಲ್ಲಿ ಈ ಯಾವ ಪ್ರಕ್ರಿಯೆಗಳು ಇಲ್ಲದೆಯೇ ನೇರವಾಗಿ ಆರೋಪಿಗಳನ್ನು ಬಂಧಿಸುವ ಅವಕಾಶವಿದೆ. ಪೊಲೀಸರು ಯಾವ ಹೆಜ್ಜೆಯನ್ನು ಇಡುತ್ತಾರೆ, ಇದಕ್ಕೆ ಶ್ರೀಗಳ ವಕೀಲರ ನಡೆ ಏನಿರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲ್ಪಟ್ಟಿರುವುದು ಶ್ರೀಗಳ ಪಾಲಿಗೆ ಸಣ್ಣ ಹಿನ್ನಡೆಯಾದಂತಾಗಿದೆ. ಯಾಕೆಂದರೆ, ಒಂದೊಮ್ಮೆ ಪೊಲೀಸರು ಬಂಧಿಸಲು ಮುಂದಾದರೆ ಅವರಿಗೆ ಯಾವ ಕಾನೂನಾತ್ಮಕ ರಕ್ಷಣೆಯೂ ಇರುವುದಿಲ್ಲ.
ಇದನ್ನೂ ಓದಿ| ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ; ಚಿತ್ರದುರ್ಗ ಎಸ್‌ಪಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್