Site icon Vistara News

ಮುರುಘಾಶ್ರೀ ಪ್ರಕರಣ | ನಿರೀಕ್ಷಣಾ ಜಾಮೀನು ಅರ್ಜಿ ವಜಾ, ನಾಳೆ ಹೊಸ ಅರ್ಜಿ

murugha Sree POCSO ACT Sexual Assault Chitradurga Murugha matt

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ವಜಾ ಮಾಡಿದೆ.

ಬಂಧನದ ಭೀತಿಯಲ್ಲಿ ಸಲ್ಲಿಸಿದ್ದ ಅರ್ಜಿ ಇದಾಗಿತ್ತು. ಆದರೆ, ಈಗ ಬಂಧನವೇ ನಡೆದುಹೋಗಿರುವುದರಿಂದ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಶ್ರೀಗಳು ಕಳೆದ ಆಗಸ್ಟ್‌ ೩೦ರಂದು ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್‌ ವಿಚಾರಣೆಯನ್ನು ಸೆಪ್ಟೆಂಬರ್‌ ೧ಕ್ಕೆ ಮುಂದೂಡಿತ್ತು. ಜತೆಗೆ ಎರಡು ಪಕ್ಷಕ್ಕೆ ತಕರಾರು ಅರ್ಜಿ ಸಲ್ಲಿಸುವ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಈ ಮುಂದೂಡಿಕೆ ಎಂದು ತಿಳಿಸಿತ್ತು. ಈ ನಡುವೆ, ಶುಕ್ರವಾರ ರಾತ್ರಿಯೇ ಶ್ರೀಗಳನ್ನು ಬಂಧಿಸಲಾಗಿದ್ದರಿಂದ ಶನಿವಾರದ ವಿಚಾರಣೆಯಲ್ಲಿ ಹೆಚ್ಚಿನ ಮಹತ್ವ ಉಳಿದಿರಲಿಲ್ಲ.

ನಾಳೆ ಹೊಸ ಅರ್ಜಿ ಸಾಧ್ಯತೆ
ಇದೀಗ ಬಂಧನದಲ್ಲಿರುವ ಮುರುಘಾಶರಣರ ಪರವಾಗಿ ಶನಿವಾರ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಪ್ರಸಕ್ತ ಮುರುಘಾಶರಣರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ನಡುವೆ, ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೇಳುವ ಸಾಧ್ಯತೆಯೂ ಇದೆ. ಈ ಮಧ್ಯೆ ಶ್ರೀಗಳಿಗೆ ಅನಾರೋಗ್ಯದ ಸಮಸ್ಯೆ ಕಾಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದೆಲ್ಲದರ ನಡುವೆ ಪ್ರಕರಣದಲ್ಲಿ ತಾತ್ಕಾಲಿಕ ಬಂಧ ಮುಕ್ತಿ ಕೋರಿ ಅವರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಶ್ರೀಗಳ ಪರ ವಕೀಲರಲ್ಲಿ ಒಬ್ಬರಾದ ಉಮೇಶ್‌ ಅವರು ತಿಳಿಸಿದ್ದಾರೆ. ಈಗ ಶ್ರೀಗಳ ಪರವಾಗಿ ಸಿಆರ್ ಪಿಸಿಯ ಸೆಕ್ಷನ್‌ 439ರ ಅಡಿಯಲ್ಲಿ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.
ವಿದ್ಯಾರ್ಥಿನಿಯರು ದಾಖಲಿಸಿರುವ ಪೋಕ್ಸೊ ಪ್ರಕರಣದಲ್ಲಿ ಐವರು ಆರೋಪಿಗಳ ಹೆಸರಿದೆ. ಅದರೆ, ಮುರುಘಾ ಶ್ರೀಗಳ ಪರವಾಗಿ ಮಾತ್ರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ವಕೀಲ ವಿಶ್ವನಾಥಯ್ಯ ಅವರು ಅರ್ಜಿ ಸಲ್ಲಿಸಿದ್ದರು.
ಈ ನಡುವೆ, ಪ್ರಕರಣದ ಎರಡನೇ ಆರೋಪಿಯಾಗಿರುವ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರು ಈಗಾಗಲೇ ಪೊಲೀಸರ ವಶದಲ್ಲಿದ್ದು, ಅವರ ಬಂಧನವೂ ಖಚಿತವಾಗಿದೆ. ಯಾವಾಗ ಅವರನ್ನು ಕೋರ್ಟ್‌ಗೆ ಹಾಜರುಪಡಿಸುತ್ತಾರೆ ಎಂದು ಕಾದುನೋಡಬೇಕಾಗಿದೆ. ಶುಕ್ರವಾರ ಮಧ್ಯಾಹ್ನ ಅವರನ್ನು ವಶಕ್ಕೆ ಪಡೆದಿರುವುದರಿಂದ ಶನಿವಾರ ಮಧ್ಯಾಹ್ನದ ಹೊತ್ತಿಗೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ಐಸಿಯುಗೆ ಶರಣರ ಶಿಫ್ಟ್‌, ಬೆಂಗಳೂರಿಗೆ ಕರೆತರಲು ಸಿದ್ಧತೆ

Exit mobile version