ಚಿತ್ರದುರ್ಗ: ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ, ಮಠದ ಅಧೀನದಲ್ಲಿರುವ ಹಾಸ್ಟೆಲ್‌ನ ವಾರ್ಡನ್ ರಶ್ಮಿಗೆ ೧೩ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ, ಚಿತ್ರದುರ್ಗದ ಜೈಲಿನಲ್ಲಿ ಈಗ ಮಹಿಳಾ ಸೆಲ್ ಇಲ್ಲದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜೈಲಿಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿನಿಯರು ಸಲ್ಲಿರುವ ದೂರಿನಲ್ಲಿ ರಶ್ಮಿ ಅವರು ತಮ್ಮ ಮೇಲಿನ ದೌರ್ಜನ್ಯ ಘಟನೆಗಳಿಗೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದರು. ೨೬ ವರ್ಷದ ರಶ್ಮಿ ಅವರನ್ನು ಗುರುವಾರವೇ ಡಿವೈಎಸ್‌ಪಿ ಕಚೇರಿಗೆ ಕರೆಸಿಕೊಂಡು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಬಳಿಕ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆೆಗೆ ಸೇರಿದ ಸಾಂತ್ವನ ಕೇಂದ್ರಕ್ಕೆ ರಾತ್ರಿ ವಾಸ್ತವ್ಯಕ್ಕಾಗಿ ಕಳುಹಿಸಲಾಗಿತ್ತು. ಶುಕ್ರವಾರ ಮುಂಜಾನೆ ಮತ್ತು ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ಅನಿಲ್ ಕುಮಾರ್ ಅವರ ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿ ಬಳಿಕ ಬಂಧನವನ್ನು ಅಧಿಕೃತಗೊಳಿಸಲಾಯಿತು.
ರಶ್ಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಧೀಶರು ಅವರಿಗೆ ೧೩ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಾಮಾನ್ಯವಾಗಿ ಕೋರ್ಟ್ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸುತ್ತದೆ. ಹೀಗಾಗಿ ಗುರುವಾರ ವಶಕ್ಕೆ ಪಡೆದ ಕ್ಷಣದಿಂದಲೇ ಬಂಧನ ಎಂದು ದಾಖಲಿಸಿದಂತೆ ಕಾಣುತ್ತಿದೆ. ಅವರು ಇನ್ನು ಸೆಪ್ಟೆಂಬರ್ ೧೪ರವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ.
ಕೋವಿಡ್ ಹಿನ್ನೆಲೆಯಲ್ಲಿ ಚಿತ್ರದುರ್ಗ ಜೈಲಿನಲ್ಲಿರುವ ಮಹಿಳಾ ಸೆಲ್‌ನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ರಶ್ಮಿಯನ್ನು ಶಿವಮೊಗ್ಗದ ಜೈಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತನಿಖಾಧಿಕಾರಿ ಕಚೇರಿಗೆ ಬಂದ ತಾಯಿ
ಈ ನಡುವೆ ರಶ್ಮಿಯನ್ನು ಶಿವಮೊಗ್ಗ ಜೈಲಿಗೆ ವರ್ಗಾವಣೆ ಆಗುತ್ತಿದ್ದಂತೆಯೇ ಅವರ ತಾಯಿ ತನಿಖಾಧಿಕಾರಿ ಕಚೇರಿಗೆ ಆಗಮಿಸಿದರು. ಅವರನ್ನು ಮಾತನಾಡಿಸಿ ಕಳುಹಿಸಲಾಯಿತು.
ಬಾಲಕಿಯರ ವಿಚಾರಣೆ
ಈ ನಡುವೆ ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ಕಚೇರಿಗೆ ಸಂತ್ರಸ್ತ ಬಾಲಕಿಯರನ್ನೂ ಪೊಲೀಸರು ಕರೆತಂದರು. ಅಲ್ಲಿಂದ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಮುರುಘಾ ಶ್ರೀಗಳ ವಿಚಾರಣೆ ಕೋರ್ಟಲ್ಲೇ ನಡೆಯುತ್ತಿರುವಾಗಲೇ ಸಂತ್ರಸ್ತ ಬಾಲಕಿಯರ ಆಗಮನವಾಗಿದ್ದು ವಿಶೇಷವಾಗಿತ್ತು