Site icon Vistara News

ಮುರುಘಾಶ್ರೀ ಕೇಸ್‌| ಬಸವರಾಜ್‌ ವಿರುದ್ಧದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಹಾಸ್ಟೆಲ್‌ನಲ್ಲಿ ಮಹಜರು

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯ ಜತೆಗೇ, ಮಠದ ಈ ಹಿಂದಿನ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜ್‌ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯೂ ನಡೆಯುತ್ತಿದೆ.

ಶ್ರೀಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀಗಳನ್ನು ಮೊದಲ ಆರೋಪಿಯಾಗಿ, ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರನ್ನು ಎರಡನೇ ಆರೋಪಿಯಾಗಿ ಗುರುತಿಸಲಾಗಿತ್ತು. ಉಳಿದ ಮೂವರ ಮೇಲೆ ಕೇಸು ಇದೆ.
ಈ ನಡುವೆ ಅಂದೇ ವಾರ್ಡನ್‌ ರಶ್ಮಿ ಅವರು ಮಠದ ಮಾಜಿ ಆಡಳಿತಾಧಿಕಾರಿ ಹಾಗು ಮಾಜಿ ಶಾಸಕ ಎಸ್‌.ಕೆ. ಬಸವರಾಜ್‌, ಅವರ ಪತ್ನಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಅವರ ಮೇಲೆ ದೂರು ದಾಖಲಿಸಿದ್ದರು. ಬಸವರಾಜ್‌ ಅವರು ಆಡಳಿತಾಧಿಕಾರಿಯಾಗಿದ್ದಾಗ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ದೂರು ನೀಡಿದ್ದರು. ಸೌಭಾಗ್ಯ ಅವರ ಮೇಲೆ ಬ್ಲ್ಯಾಕ್‌ಮೇಲ್‌ ಕೇಸು ದಾಖಲಾಗಿತ್ತು.

ಬಸವರಾಜ್‌ ಅವರು ಆಡಳಿತಾಧಿಕಾರಿಯಾಗಿದ್ದಾಗ ಆಗಾಗ ಹಾಸ್ಟೆಲ್‌ಗೆ ಬಂದು ಕಿರುಕುಳ ನೀಡುತ್ತಿದ್ದರು. ತಮಗೆ ಉನ್ನತ ಹುದ್ದೆಯ ಆಮಿಷ ಒಡ್ಡುತ್ತಿದ್ದರು. ಹೇಳಿದಂತೆ ಕೇಳಿದರೆ ಎಲ್ಲ ನೆರವು ನೀಡುವುದಾಗಿ ಹೇಳಿದ್ದರು. ಒಂದು ಹಂತದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ವಾರ್ಡನ್‌ ರಶ್ಮಿ ಅವರು ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಹಾಸ್ಟೆಲ್‌ನಲ್ಲಿ ಮಹಜರಿಗಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿದ್ದರು. ಮೊದಲು ಮುರುಘಾ ಮಠಕ್ಕೆ ಭೇಟಿ ನೀಡಿದ ತಂದ ಬಳಿಕ ಮಠದ ಆವರಣದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಸ್ಥಳ ಮಹಜರು ನಡೆಸಲು ತೆರಳಿದೆ.

ಪ್ರಾಧಿಕಾರದ ಕಾರ್ಯದರ್ಶಿ ಭೇಟಿ
ಈ ನಡುವೆ, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ನ್ಯಾಯಮೂರ್ತಿ ಬಿ.ಕೆ. ಗಿರೀಶ್‌ ಅವರು, ಅಕ್ಕಮಹಾದೇವಿ ಹಾಸ್ಟೆಲ್‌ಗೆ ಭೇಟಿ ನೀಡಿದರು. ಸ್ಥಳ ಮಹಜರು ನಡೆಯುವ ವೇಳೆಯೇ ಅವರು ಭೇಟಿ ನೀಡಿದ್ದಾರೆ.

ಹಾಸ್ಟೆಲ್‌ನಲ್ಲೇ ಇದ್ದಾರೆ ವಾರ್ಡನ್‌
ಈ ನಡುವೆ ಹಾಸ್ಟೆಲ್‌ ವಾರ್ಡನ್‌ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಎರಡನೇ ಆರೋಪಿಯಾಗಿರುವ ರಶ್ಮಿ ಅವರು ಹಾಸ್ಟೆಲ್‌ ಬಿಟ್ಟು ಪರಾರಿ ಆಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ, ಅಧಿಕಾರಿಗಳು ಮಹಜರಿಗೆ ತೆರಳಿದಾಗ ಅವರು ಅಲ್ಲೇ ಇದ್ದರು ಎಂದು ತಿಳಿದುಬಂದಿದೆ.

ಮುರುಘಾಶರಣರ ಆಪ್ತರು ಹೇಳುವುದೇನು?
ಈ ನಡುವೆ, ಲಿಂಗಾಯತ ಸಮುದಾಯದ ಮುಖಂಡ ಹಾಗೂ ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ (ಪಪ್ಪಿ) ಅವರು ಮುರುಘಾಶರಣರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದ ಜತೆ ಮಾತನಾಡಿ, ʻʻಶ್ರೀಗಳು ನಿತ್ಯ ಹೇಗಿರ್ತಾರೋ ಅದೇ ರೀತಿ ಚಟುವಟಿಕೆಯಲ್ಲಿದಾರೆ. ಪೊಲೀಸರ ತನಿಖೆ ಕ್ರಮ ಪ್ರಕಾರವಾಗಿ ನಡೆಯುತ್ತಿದೆ. ನಾವು ಯಾರೂ ಅದರಲ್ಲಿ ಮಧ್ಯ ಪ್ರವೇಶಿಸುತ್ತಿಲ್ಲʼʼ ಎಂದು ಹೇಳಿದರು.

ʻʻಮಕ್ಕಳ ಬಗ್ಗೆ ತಪ್ಪಾಗಿದ್ದಲ್ಲಿ ನಿಜವಾಗಿಯೂ ಅದಕ್ಕೆ ಶಿಕ್ಷೆಯಾಗಬೇಕು. ಶಿಕ್ಷೆಯಾಗೇ ಆಗುತ್ತೆ, ನಮ್ಮ ದೇಶದ ಕಾನೂನು ಅಷ್ಟು ಸ್ಟ್ರಾಂಗ್ ಆಗಿದೆ. ಷಡ್ಯಂತ್ರ ನಡಿತೀದೆ ಅಂತ ನನ್ನ ಗಮನಕ್ಕೆ ಇತ್ತೀಚೆಗೆ ಬಂದಿದೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿದೆʼʼ ಎಂದು ಹೇಳಿದರು ವೀರೇಂದ್ರ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು, ಗುರುವಾರ ಶ್ರೀಗಳಿಗೆ ನೋಟಿಸ್‌ ಸಾಧ್ಯತೆ

Exit mobile version