Site icon Vistara News

ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಜಡ್ಜ್‌, 4 ದಿನ ಕಸ್ಟಡಿ, ಆಸ್ಪತ್ರೆ ಹೈಡ್ರಾಮಾಕ್ಕೆ ತೆರೆ

murugha swameeji court

ಚಿತ್ರದುರ್ಗ: ಗುರುವಾರ ರಾತ್ರಿ ಬಂಧಿತರಾದ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂದರೆ ಅವರು ಸೆ.೫ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಶ್ರೀಗಳನ್ನು ಅನಾರೋಗ್ಯದ ನೆಪ ಒಡ್ಡಿ ತನಗೆ ತಿಳಿಸದೆಯೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ನ್ಯಾಯಾಧೀಶರು ಜೈಲು ಅಧೀಕ್ಷಕರ ವಿರುದ್ಧ ಕೋರ್ಟ್‌ ಗರಂ ಆದರು. ಈ ನಡುವೆ ವಿಚಾರಣೆ ವೇಳೆ ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಘಟನೆಯೂ ನಡೆಯಿತು.

ಮಠಕ್ಕೆ ಸೇರಿದ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದ, ಮಠದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರುಘಾಶ್ರೀಗಳನ್ನು ಗುರುವಾರ ರಾತ್ರಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದಾಗ ಅವರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ನಡುವೆ, ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಅವರು ತಮಗೆ ಅಗತ್ಯವಿದ್ದು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಈ ಮಧ್ಯೆ ಕಾರಾಗೃಹದ ಅಧಿಕಾರಿಗಳು ಶ್ರೀಗಳನ್ನು ಕೋರ್ಟ್‌ನ ಗಮನಕ್ಕೆ ತಾರದೆ ಆಸ್ಪತ್ರೆಗೆ ದಾಖಲಿಸಿದ್ದು ನ್ಯಾಯಾಲಯವನ್ನು ಕೆರಳಿಸಿದ್ದು, ಕೂಡಲೇ ಅವರನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸೂಚಿಸಿತ್ತು. ಹಾಜರುಪಡಿಸಿದ ವೇಳೆ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶಿಸಿದರು. 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಕೋಮಲಾ ಅವರು ಈ ಆದೇಶ ನೀಡಿದ್ದಾರೆ.

ಆಸ್ಪತ್ರೆ ಡ್ರಾಮಾಕ್ಕೆ ಗರಂ ಆದ ನ್ಯಾಯಾಧೀಶರು
ಗುರುವಾರ ರಾತ್ರಿ ೧೦ ಗಂಟೆಯ ಹೊತ್ತಿಗೆ ಶ್ರೀಗಳನ್ನು ಬಂಧಿಸಿದ ಪೊಲೀಸರು ಅವರನ್ನು ಚಿತ್ರದುರ್ಗದಿಂದ ೩೦ ಕಿ.ಮೀ. ದೂರದ ಚಳ್ಳಕೆರೆಯ ಡಿವೈಎಸ್‌ಪಿ ಕಚೇರಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ನಂತರ ರಾತ್ರಿ ೨ ಗಂಟೆಗೆ ನ್ಯಾಯಾಧೀಶೆ ಕೋಮಲಾ ಅವರ ಮನೆಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ರಾತ್ರಿಯೇ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿತ್ತು.

ಈ ನಡುವೆ ಮುಂಜಾನೆ ೯ ಗಂಟೆಯ ಹೊತ್ತಿಗೆ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ತಪಾಸಣೆ ವೇಳೆ ಅವರಿಗೆ ತೀವ್ರ ಸಮಸ್ಯೆ ಇದೆ ಎಂದು ಅಂದಾಜಿಸಿದ ವೈದ್ಯರು ಅವರನ್ನು ತೀವ್ರ ನಿಗಾ ಘಟಕ (ಐಸಿಯು)ಕ್ಕೆ ಸ್ಥಳಾಂತರ ಮಾಡಿದರು. ಇದರ ನಡುವೆಯೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಕರೆದೊಯ್ಯಲಾಗುತ್ತದೆ ಎಂಬ ಸುದ್ದಿ ಹರಡಿತು. ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವುದೇ ಅಥವಾ ಏರ್‌ಲಿಫ್ಟ್‌ ಮಾಡುವುದೇ ಎಂಬ ಚರ್ಚೆ ಜೋರಾಯಿತು. ಇಷ್ಟಾಗುವಾಗ ಬೆಂಗಳೂರಿನ ಜಯದೇವ ಸಂಸ್ಥೆ ಸ್ಪಷ್ಟೀಕರಣವೊಂದನ್ನು ನೀಡಿ ಶ್ರೀಗಳನ್ನು ಇಲ್ಲಿಗೆ ಕರೆ ತರಲಾಗುತ್ತಿಲ್ಲ. ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಇಷ್ಟೆಲ್ಲ ಹೈಡ್ರಾಮಾಗಳನ್ನು ಗಮನಿಸಿದ ೨ನೇ ಸತ್ರ ಮತ್ತು ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಕೋಮಲಾ ಅವರು ಕಾರಾಗೃಹದ ಅಧೀಕ್ಷಕರಾದ ಎಂ.ಎಂ. ಮರಕಟ್ಟಿ ಅವರಿಗೆ ಮೆಮೊ ನೀಡಿದರು.
ʻʻರಾತ್ರಿ ೨ ಗಂಟೆಗೆ ನನ್ನನ್ನು ಎಬ್ಬಿಸಿದ್ದೀರಿ. ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈಗ ನೋಡಿದರೆ ಆಸ್ಪತ್ರೆಗೆ ಒಯ್ದಿದ್ದೀರಿ. ಬೇರೆ ಕಡೆಗೆ ಶಿಫ್ಟ್‌ ಮಾಡುವ ಮಾತೂ ಕೇಳಿಬರುತ್ತಿದೆ. ಏನಿದು? ಆಸ್ಪತ್ರೆಗೆ ಶಿಫ್ಟ್‌ ಮಾಡುವಾಗ ಕೋರ್ಟ್‌ಗೆ ಯಾಕೆ ತಿಳಿಸಿಲ್ಲʼʼ ಎಂದು ಗರಂ ಆದರು. ಆಗ ಜೈಲು ಅಧೀಕ್ಷಕರು ತುರ್ತು ಆರೋಗ್ಯ ಪರಿಸ್ಥಿತಿಯ ಕಾರಣದಿಂದ ಹೀಗೆ ಮಾಡಲಾಯಿತು ಎಂದು ವಿವರಿಸಿದರು. ಆದರೆ, ಅವರ ವಿವರಣೆಯನ್ನು ಕೇಳಲು ಒಪ್ಪದ ನ್ಯಾಯಾಧೀಶರು ಕೂಡಲೇ ತನ್ನ ಮುಂದೆ ಹಾಜರುಪಡಿಸುವಂತೆ ಆದೇಶಿಸಿದರು.

ವರ್ಚ್ಯುವಲ್‌ ಹಾಜರಿಗೆ ಒಪ್ಪದ ಕೋರ್ಟ್‌
ಈ ನಡುವೆ ಜೈಲು ಅಧೀಕ್ಷಕರು ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ವರ್ಚ್ಯುವಲ್‌ ಆಗಿ ಹಾಜರುಪಡಿಸುವುದಾಗಿ ಕೇಳಿಕೊಂಡರು. ಆದರೆ, ಕೋರ್ಟ್‌ ಒಪ್ಪಲಿಲ್ಲ. ಬಳಿಕ ಶ್ರೀಗಳನ್ನು ಪೊಲೀಸ್‌ ವಾಹನದಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಶ್ರೀಗಳು ಸ್ಟ್ರೆಚರ್‌ ಮೂಲಕ ಬಂದು ಬಳಿಕ ಮೆಟ್ಟಿಲು ಹತ್ತಿಕೊಂಡು ಕೋರ್ಟ್‌ಗೆ ಹೋದರು.

ವಿಚಾರಣೆಯ ಸಂದರ್ಭದಲ್ಲಿ ಶ್ರೀಗಳ ಪರ ವಕೀಲರು, ಶ್ರೀಗಳನ್ನು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದಲೇ ಡಿಸ್ಚಾರ್ಜ್‌ ಮಾಡಿಕೊಂಡು ಬಂದಿದ್ದೇವೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಹಾಗಾಗಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡಬೇಕು ಎಂದು ಕೇಳಿಕೊಂಡರು. ಆದರೆ, ಕೋರ್ಟ್‌ ಇದಕ್ಕೆ ಒಪ್ಪಲಿಲ್ಲ.

ಕಟಕಟೆ ಏರಿದ ಶ್ರೀಗಳು
ಶ್ರೀಗಳು ಪೊಲೀಸ್‌ ವಾಹನದಲ್ಲೇ ಕೋರ್ಟ್‌ಗೆ ಬಂದಿದ್ದಾರೆ. ಮೆಟ್ಟಿಲು ಹತ್ತಿದ್ದಾರೆ. ಹೀಗಾಗಿ ಆರೋಗ್ಯ ಸಮಸ್ಯೆ ತೀವ್ರವಾಗಿದೆ ಎಂದು ಒಪ್ಪಲಾಗದು ಎಂದರು. ಒಂದು ಹಂತದಲ್ಲಿ ಶ್ರೀಗಳನ್ನು ಕಟಕಟೆಯಲ್ಲಿ ಬಂದು ನಿಲ್ಲುವಂತೆ ನ್ಯಾಯಾಧೀಶರು ಆದೇಶಿಸಿದರು. ಆಗ ಶ್ರೀಗಳು ಅತ್ಯಂತ ಬೇಸರದಿಂದ ಕಟಕಟೆ ಏರಿ ನಿಂತರು.

ಈ ವೇಳೆ, ಶ್ರೀಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶರು ಆರೋಪಿ ಸಂಖ್ಯೆ ೧ನ್ನು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ಹೀಗಾಗಿ ಶ್ರೀಗಳು ಸೆಪ್ಟೆಂಬರ್‌ ೫ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿ ಇರಬೇಕಾಗುತ್ತದೆ.

ಈಗ ಹುಟ್ಟಿಕೊಂಡಿರುವ ಮತ್ತೊಂದು ಪ್ರಶ್ನೆ ಎಂದರೆ ಶ್ರೀಗಳನ್ನು ಯಾವ ಪೊಲೀಸ್‌ ಠಾಣೆಯಲ್ಲಿ ಇಟ್ಟುಕೊಳ್ಳುತ್ತಾರೆ, ಜಿಲ್ಲಾ ಕಾರಾಗೃಹದಲ್ಲೇ ಇಟ್ಟುಕೊಳ್ಳುತ್ತಾರಾ? ಅಥವಾ ಅಜ್ಞಾತವಾದ ಬೇರೆ ಜಾಗದಲ್ಲಿ ಇಟ್ಟು ವಿಚಾರಣೆ ನಡೆಸುತ್ತಾರಾ ಎನ್ನುವುದು.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ಸುದ್ದಿಯಲ್ಲಿ ಮುರುಘಾ ಮಠ; ಇದರ ಇತಿಹಾಸವೇನು ಗೊತ್ತೇ?

Exit mobile version