Site icon Vistara News

ಮುರುಘಾ ಶ್ರೀ ಪ್ರಕರಣ | ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ, ಹೇಳಿದ್ದೇನು?

siddaramaiah murugha sree

ಬೆಂಗಳೂರು: ಚಿತ್ರದುರ್ಗದ ಶ್ರೀ ಮುರುಘಾ ಮಠದ ಶ್ರೀ ಶಿವಯೋಗಿ ಮುರುಘಾಶರಣದ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೊನೆಗೂ ಮೌನ ಮುರಿದಿದ್ದಾರೆ.

ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳಿಗೆ, ಅದರಕ್ಕೂ ಮಠ ಮಾನ್ಯಗಳಿಗೆ ಸಂಬಂಧಿಸಿ ತಕ್ಷಣ ಪ್ರತಿಕ್ರಿಯೆ ನೀಡುವ ಸಿದ್ದರಾಮಯ್ಯ ಅವರು ಮುರುಘಾ ಶ್ರೀ ಪ್ರಕರಣ ನಡೆದು ಏಳು ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಯಾಕೆ ಎನ್ನುವುದೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಮುರುಘಾ ಮಠದ ಜತೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಲ್ಲಾ ಪಕ್ಷಗಳು ಉತ್ತಮ ಸಂಬಂಧವನ್ನೇ ಹೊಂದಿವೆ. ಇದಕ್ಕೆ ಮುಖ್ಯ ಕಾರಣ ಲಿಂಗಾಯತ ಮತಗಳ ಮೇಲಿರುವ ಕಣ್ಣು. ಹೀಗಾಗಿ ರಾಜಕೀಯ ಪಕ್ಷಗಳು ತುಂಬಾ ಜಾಗರೂಕವಾಗಿ ಪ್ರತಿಕ್ರಿಯಿಸಿದೆ. ಅಷ್ಟಾದರೂ ಸಿದ್ದರಾಮಯ್ಯ ಅವರು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.

ಸಿದ್ದರಾಮಯ್ಯ ಅವರಿಗೆ ಆಪ್ತರಾದ ಪ್ರಗತಿಪರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು ಮತ್ತು ಶ್ರೀಗಳನ್ನು ತಕ್ಷಣ ಬಂಧಿಸುವಂತೆಯೂ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲೂ ಸಿದ್ದರಾಮಯ್ಯ ಅವರ ನಿಲುವಿನ ಬಗ್ಗೆ ಕುತೂಹಲವಿತ್ತು. ಈಗ ಕೊನೆಗೂ ದೂರು ದಾಖಲಾಗಿ ಒಂದು ವಾರದ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.

ಏನು ಹೇಳಿದ್ದಾರೆ ಸಿದ್ದರಾಮಯ್ಯ?
ʻʻಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕುʼʼ ಎಂದು ಟ್ವೀಟ್‌ನಲ್ಲಿ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಜಡ್ಜ್‌, 4 ದಿನ ಕಸ್ಟಡಿ, ಆಸ್ಪತ್ರೆ ಹೈಡ್ರಾಮಾಕ್ಕೆ ತೆರೆ

Exit mobile version