Site icon Vistara News

ಮುರುಘಾಶ್ರೀ ಪ್ರಕರಣ | ವಾರ್ಡನ್‌ ರಶ್ಮಿ ಪೊಲೀಸರ ವಶದಲ್ಲಿ, ಬಂಧಿಸಿಲ್ಲ ಎಂದ ಎಸ್‌ಪಿ

murugha

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಎರಡನೇ ಆರೋಪಿ, ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಅವರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಅವರನ್ನು ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌ ಸ್ಪಷ್ಟಪಡಿಸಿದ್ದಾರೆ.

ವಾರ್ಡನ್‌ ರಶ್ಮಿ ಅವರು ಮುರುಘಾಶರಣರ ಮೇಲಿನ ಪೋಕ್ಸೊ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದರೆ, ಮಠದ ಆಡಳಿತಾಧಿಕಾರಿ ಬಸವರಾಜ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ಮೇಲೆ ದಾಖಲಾದ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌ ದೂರಿನ ಅರ್ಜಿದಾರೆ ಮತ್ತು ಸಂತ್ರಸ್ತೆಯಾಗಿದ್ದಾರೆ.

ರಶ್ಮಿ ಅವರು ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಹಾಜರಾಗಿದ್ದಾರೆ. ಅವರನ್ನು ಮಠದ ಹಾಸ್ಟೆಲ್‌ನಿಂದ ಕರೆದುಕೊಂಡು ಬರಲಾಗಿದೆಯೇ ಅಥವಾ ಅವರೇ ಬಂದಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ಮೊದಲು ಬಂಧಿಸಲು ಸಾಧ್ಯವಿಲ್ಲ?
ಪೋಕ್ಸೊ ಪ್ರಕರಣದಲ್ಲಿ ರಶ್ಮಿ ಅವರು ಎರಡನೇ ಆರೋಪಿಯಾಗಿದ್ದು, ಮೊದಲ ಆರೋಪಿ ಎಂದು ಗುರುತಿಸಲಾಗಿರುವ ಮುರುಘಾಶ್ರೀಗಳನ್ನು ಬಿಟ್ಟು ಇವರೊಬ್ಬರನ್ನೇ ಬಂಧಿಸುವ ಸಾಧ್ಯತೆಗಳಿಲ್ಲ. ಒಂದು ವೇಳೆ ಬಂಧಿಸುವುದಾದರೆ ಮುರುಘಾಶ್ರೀಗಳನ್ನೂ ಬಂಧಿಸಬೇಕಾಗುತ್ತದೆ. ಆದರೆ, ಅಂಥ ಚಟುವಟಿಕೆಗಳ್ಯಾವುದೂ ಗೋಚರವಾಗುತ್ತಿಲ್ಲ. ಒಂದೊಮ್ಮೆ ಮೊದಲ ಆರೋಪಿ ಲಭ್ಯರಿಲ್ಲ, ಪೊಲೀಸರ ಕೈಗೆ ಸಿಗುತ್ತಿಲ್ಲ. ತಪ್ಪಿಸಿಕೊಂಡಿದ್ದಾರೆ ಎಂಬ ಪರಿಸ್ಥಿತಿ ಇದ್ದರಷ್ಟೇ ಎರಡನೇ ಆರೋಪಿಯನ್ನು ಬಂಧಿಸಬಹುದು ಎನ್ನಲಾಗುತ್ತಿದೆ.

ವಿಚಾರಣೆ ನಡೆಸಿ ಬಿಡುತ್ತಾರಾ?
ರಶ್ಮಿ ಅವರು ದೂರುದಾರರೂ ಆಗಿರುವುದರಿಂದ ಅವರಿಂದ ಮಾಹಿತಿ ಪಡೆಯುವ ಉದ್ದೇಶದಿಂದಲೂ ಕರೆಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ರಶ್ಮಿ ಅವರ ಹೇಳಿಕೆಯನ್ನು ಪಡೆಯುವ ಉದ್ದೇಶದಿಂದಲೂ ಕರೆಸಿರಬಹುದು ಎನ್ನಲಾಗಿದೆ.

ಈ ನಡುವೆ, ವಿದ್ಯಾರ್ಥಿನಿಯರು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳನ್ನು ಆಧರಿಸಿ ತನಿಖಾಧಿಕಾರಿಗಳು ರಶ್ಮಿ ಅವರನ್ನು ವಿಚಾರಿಸುವ ಅವಕಾಶವೂ ಇದೆ. ಒಂದು ವೇಳೆ ರಶ್ಮಿ ಅವರಿಗೆ ನೋಟಿಸ್‌ ನೀಡಿ ಕಳುಹಿಸಿದರೆ ಮುರುಘಾ ಶರಣರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಪ್ರಸಕ್ತ ಪೊಲೀಸ್‌ ಠಾಣೆಯಲ್ಲಿರುವ ರಶ್ಮಿ ಅವರನ್ನು ಬಿಟ್ಟು ಕಳುಹಿಸಲಾಗುತ್ತದೆಯೇ ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಯಾರ‍್ಯಾರು ಆರೋಪಿಗಳು?
ಪೋಕ್ಸೊ ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್‌ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್‌ ಗಂಗಾಧರ್‌ ಮತ್ತು ಶ್ರೀಗಳ ಆಪ್ತರಾದ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.

ಮುರುಘಾಶ್ರೀ ಪ್ರಕರಣ | ಅತ್ಯಾಚಾರ ಯತ್ನ ಕೇಸಿನಲ್ಲಿ ಬಸವರಾಜ್‌ ದಂಪತಿಗೆ ನಿರೀಕ್ಷಣಾ ಜಾಮೀನು

Exit mobile version