ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ನಾಲ್ಕು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ಇಂದು ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಅನಿಲ್ ಕುಮಾರ್ ಅವರ ಕಚೇರಿಯಲ್ಲಿ ಉಳಿಸಿಕೊಳ್ಳಲಾಗುತ್ತಿದೆ.
ನ್ಯಾಯಾಂಗ ಬಂಧನ ವಿಧಿಸಲಾಗಿದ್ದ ಶ್ರೀಗಳನ್ನು ಶುಕ್ರವಾರ ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆಯೂ ಚರ್ಚೆ ನಡೆದಿತ್ತು. ಈ ನಡುವೆ ತಮ್ಮ ಅನುಮತಿ ಇಲ್ಲದೆ ಜೈಲಿನಿಂದ ಆಸ್ಪತ್ರೆಗೆ ವರ್ಗಾಯಿಸಿದ್ದನ್ನು ನ್ಯಾಯಾಧೀಶರು ಆಕ್ಷೇಪಿಸಿದ್ದರು. ಕೋರ್ಟ್‌ಗೆ ಹಾಜರುಮಾಡುವಂತೆ ಸೂಚಿಸಿದ್ದರು. ಕೋರ್ಟ್‌ಗೆ ಬಂದ ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.
ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರು
ಈ ನಡುವೆ ಪೊಲೀಸ್ ಕಸ್ಟಡಿಗೆ ಒಳಗಾದ ಶ್ರೀಗಳನ್ನು ವೈದ್ಯಕೀಯ ಚಿಕಿತ್ಸೆ ಮುಂದುವರಿಸಲು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಧ್ಯಾಹ್ನದಿಂದ ಸಂಜೆವರೆಗೂ ಅವರನ್ನು ಅಲ್ಲೇ ಉಳಿಸಿಕೊಳ್ಳಲಾಯಿತು. ಈ ನಡುವೆ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಅವರನ್ನು ಮತ್ತೆ ಆಂಬ್ಯುಲೆನ್ಸ್ ಮೂಲಕ ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಅನಿಲ್ ಕುಮಾರ್ ಅವರ ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಆದರೂ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯವ ನಿಟ್ಟಿನಲ್ಲಿ ಕೋರ್ಟ್ ಅನುಮತಿ ಪಡೆಯುವ ಪ್ರಯತ್ನಗಳು ಮುಂದುವರಿಯುತ್ತಿದೆ ಎನ್ನಲಾಗಿದೆ.
ಜೈಲಿನ ಆಹಾರವನ್ನೇ ನೀಡಲು ಸೂಚನೆ
ಈ ನಡುವೆ ಶ್ರೀಗಳಿಗೆ ಪ್ರತ್ಯೇಕ ಸಾತ್ವಿಕ ಆಹಾರ ನೀಡಬೇಕು ಎಂಬ ವಕೀಲರ ವಾದವನ್ನು ನ್ಯಾಯಾಧೀಶರು ಒಪ್ಪಿಲ್ಲ. ಹೀಗೆ ಅವಕಾಶ ಕೋಡಬೇಕು ಎಂದರೆ ಪ್ರತ್ಯೇಕವಾಗಿ ನಿಯಮಾವಳಿ ಪ್ರಕಾರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಅಲ್ಲಿವರೆಗೆ ಜೈಲಿನಲ್ಲಿ ಕೈದಿಗಳಿಗೆ ಕೊಡುವ ಆಹಾರವನ್ನೇ ನೀಡಲು ಸೂಚಿಸಿದರು. ಆದರೆ, ಪೊಲೀಸ್ ಕಸ್ಟಡಿಯಲ್ಲಿ ಇರುವುದರಿಂದ ಅವರಿಗೆ ಬೇಕಾದ ಆಹಾರ ನೀಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | 2ನೇ ಆರೋಪಿ ವಾರ್ಡನ್ ರಶ್ಮಿ ಶಿವಮೊಗ್ಗ ಜೈಲಿಗೆ, 13 ದಿನ ನ್ಯಾಯಾಂಗ ಬಂಧನ