ಚಿತ್ರದುರ್ಗ: ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಾದ ನಂತರ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಪ್ರರಕಣ ಸಂಬಂಧ ದೂರು ದಾಖಲಾದ ನಂತರದಲ್ಲಿ ಮಠದ ಆವರಣದಲ್ಲೇ ಸಭೆಗಳನ್ನು ನಡೆಸುತ್ತಿದ್ದ ಸ್ವಾಮೀಜಿ ಭಾನುವಾರ ಬೆಳಗ್ಗೆ ಹೊರಬಂದರು. ಮಠದ ಆವರಣದಲ್ಲೇ ಇರುವ ಗದ್ದುಗೆ ದರ್ಶನ ಪಡೆದರು. ದರ್ಶನದ ನಂತರ ಮಾಧ್ಯಮದವರು ಮಾತನಾಡಿಸಲು ಮುಂದಾದರಾದರೂ, ಈಗ ಮಾತನಾಡುವುದಿಲ್ಲ ಎಂದು ಕೈಸನ್ನೆಯಲ್ಲೆ ತಿಳಿಸಿ ಮಠಕ್ಕೆ ಹಿಂದಿರುಗಿದರು.
ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಲೈಂಗಿಕ ದೌರ್ಜನ್ಯದ ಜತೆಗೆ ಇನ್ನೊಂದು ಕಡೆ ಕಿಡ್ನಾಪ್ ಕೇಸ್ ಸಹ ದಾಖಲಾಗಿದೆ. ಪೊಲೀಸರು ಎರಡೂ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದಾರೆ. ತನಿಖೆಯ ದೃಷ್ಟಿಯಿಂದ, ಈ ಕುರಿತು ಈಗ ಮಾತನಾಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಯಾವುದೇ ಬ್ಯಾಖ್ಯಾನ ಮಾಡಬಾರದು. ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಸತ್ಯ ಹೊರಗಡೆ ಬರಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಚಿತ್ರದುರ್ಗದ ಮುರುಘಾಮಠ ಇಡೀ ನಾಡಿಗೆ ಪ್ರಖ್ಯಾತಿ. ಆದರೆ ಈ ಸುದ್ದಿ ಕೇಳಿ ಬೇಸರವಾಗಿದೆ. ಇದೊಂದು ಅನಿಷ್ಟ ಸುದ್ದಿ. ಇದು ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ತನಿಖೆ ನಡೆಯುತ್ತಿದೆ, ವರದಿ ಬಂದ ನಂತರ ಏನೆಂದು ಹೇಳಬಹುದು.
ಹಾಗಾಗಿದೆ, ಹೀಗಾಗಿದೆ ಎಂದು ಯಾವುದೇ ರೀತಿಯಲ್ಲಿ ಹೇಳಿದರೆ ತಪ್ಪಾಗುತ್ತದೆ. ತನಿಖೆಯನ್ನು ನಂಬಿದವರು ನಾವು. ಅದು ಹೇಗೆ ಬಂತು, ಯಾಕೆ ಬಂತು ಎಲ್ಲವೂ ತನಿಖೆಯಲ್ಲಿ ಗೊತ್ತಾಗುತ್ತದೆ. ತನಿಖೆಯಲ್ಲಿ ಏನು ವರದಿ ಬರುತ್ತದೆಯೋ, ಅದನ್ನು ಒಪ್ಪುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ ಮುರುಘಾಶ್ರೀ ಪ್ರಕರಣ| ಇಬ್ಬರು ಬಾಲಕಿಯರು ಮೈಸೂರಿನಿಂದ ಚಿತ್ರದುರ್ಗಕ್ಕೆ ಶಿಫ್ಟ್, ಬೆಳಗ್ಗೆ 4 ಗಂಟೆಗೆ ಆಗಮನ