Site icon Vistara News

ಮುರುಘಾಶ್ರೀ ಪ್ರಕರಣ | 15 ವರ್ಷದಿಂದ ನಡೆದಿತ್ತಾ ಪಿತೂರಿ? ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು?

murugha swamiji 2

ಚಿತ್ರದುರ್ಗ: ಇಬ್ಬರು ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಹದಿನೈದು ವರ್ಷದಿಂದ ಇಂತಹ ಪಿತೂರಿ ನಡೆಯುತ್ತಿದೆ ಎಂದಿರುವ ಸ್ವಾಮೀಜಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಾವೇರಿ ಬಳಿ ಸ್ವಾಮೀಜಿಯವರನ್ನು ಹಾವೇರಿ ಜಿಲ್ಲೆಯ ಬಂಕಾಪುರ ಹೆದ್ದಾರಿ ಬಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ, ತಕ್ಷಣವೇ ಅವರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುತ್ತದೆ ಎಂಬ ಸುದ್ದಿ ಸೋಮವಾರ ಬೆಳಗ್ಗೆ ಹರಿದಾಡಿತ್ತು. ಈ ನಡುವೆ ಪೊಲೀಸರ ಭದ್ರತೆಯಲ್ಲಿ ಚಿತ್ರದುರ್ಗದ ಮಠಕ್ಕೆ ಆಗಮಿಸಿದ ಸ್ವಾಮೀಜಿ, ಮಠದ ಮೊದಲ ಮಹಡಿಯಲ್ಲಿ ನಿಂತು ಮೈಕ್‌ ಮೂಲಕ ಮಾತನಾಡಿದರು.

ಸ್ವಾಮೀಜಿ ಬಂಧನ ಎಂಬ ಸುದ್ದಿ ಕೇಳಿ ಮಠದ ಬಳಿ ಜಮಾಯಿಸಿದ್ದ ಸಾವಿರಾರು ಜನರು ಹಾಗೂ ಮಾಧ್ಯಮದವರನ್ನುದ್ದೇಶಿಸಿ ಅತ್ಯಂತ ಸಹಜವಾಗಿ, ಯಾವುದೇ ಆತಂಕವಿಲ್ಲ, ಕೆಲವೊಮ್ಮೆ ನಗುಮುಖದಿಂದಲೇ ಸ್ವಾಮೀ ಮಾತನಾಡಿದರು. ಸ್ವಾಮೀಜಿಯವರ ಮಾತಿನಲ್ಲಿ ಯಾವುದೇ ದುಗುಡ, ಆತಂಕ ಇದ್ದಂತೆ ಕಾಣಲಿಲ್ಲ.

ಇದನ್ನೂ ಓದಿ | ಮುರುಘಾಮಠ ಪ್ರಕರಣ | ನನ್ನನ್ನು ಬಂಧಿಸಿಲ್ಲ, ಮಠಕ್ಕೆ ಹಿಂದಿರುಗುತ್ತಿರುವೆ ಎಂದ ಸ್ವಾಮೀಜಿ

ಸ್ವಾಮೀಜಿ ಭಾಷಣದ ಪೂರ್ಣ ಪಾಠ ಇಲ್ಲಿದೆ.

ಮಠದ ನೋವೇ ನಮ್ಮ ನೋವು, ಮುರುಘಾ ಶರಣರ ನೋವೇ ನಮ್ಮ ನೋವು ಎಂದು ಭಾವಿಸಿರುವ ಎಲ್ಲ ಭಕ್ತರಿಗೂ ನಮಸ್ಕಾರ. ಯಾರೂ ಆತಂಕಕ್ಕೆ ಒಳಗಾಗಿವ ಸಂದರ್ಭ ಇಲ್ಲ. ಬಂದಿರುವ ಸಂದರ್ಭವನ್ನು ದೈರ್ಯದಿಂದ, ಸಹನೆಯಿಂದ, ಬುದ್ಧಿವಂತಿಕೆಯಿಂದ ಎದುರಿಸುವ ಸಾಂಘಿಕ ಪ್ರಯತ್ನವನ್ನು ಸರ್ವ ಸಮಾಜದವರೂ ಸೇರಿ ಮಾಡೋಣ. ಸಮಸ್ಯೆಯನ್ನು ನಿವಾರಣೆ ಮಾಡುವ ಪ್ರಯತ್ನ ಮಾಡೋಣ. ಶಾಶ್ವತವಾಗಿರುವ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ.

ಹದಿನೈದು ವರ್ಷದಿಂದ ಇದು ನಡೆದೇ ಬಂದಿದೆ. ಇಲ್ಲಿಯವರೆಗೆ ಇಂತಹ ಪಿತೂರಿಗಳು ಒಳಗೇ ನಡೆಯುತ್ತಿದ್ದವು. ಈಗ ಹೊರಗೆ ನಡೆಯುತ್ತಿವೆ. ಯಾವುದಾದರೂ ಒಂದು ಹಂತದಲ್ಲಿ ಅಂತಿಮ ಹಂತಕ್ಕೆ ಇದನ್ನು ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಇರಬೇಕು.

ಎಲ್ಲರೂ ಈ ನೆಲದ ಕಾನೂನನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಈ ನೆಲದ ಕಾನೂನನ್ನು ಗೌರವಿಸುವ ಮಠಾಧೀಶರಾಗಿದ್ದೇವೆ. (ತನಿಖೆಗೆ) ಎಲ್ಲ ಸಹಕಾರ ನೀಡುತ್ತೇವೆ. ಇದರಲ್ಲಿ ಯಾವುದೇ ಪಲಾಯನವಾದ ಇಲ್ಲ. ಊಹಾಪೋಹಗಳಿಗೆ ಅವಕಾಶ ಇಲ್ಲ. ಗಟ್ಟಿತನದ ಮೇಲೆ ನಿಂತುಕೊಂಡೇ ಈ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಶ್ರೀಮಠದ ಅಸಂಖ್ಯಾತ ಭಕ್ತರು ಹಾಗೂ ಅಭಿಮಾನಿಗಳು ಯಾವುದೇ ಊಹಾಪೋಹಗಳಿಗೆ, ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೇಳಿಕೊಳ್ಳುತ್ತೇವೆ.

ಈ ದಿಸೆಯಲ್ಲಿ ಎಲ್ಲ ಸಹಕಾರವನ್ನೂ ನೀಡುತ್ತೇವೆ. ಮುರುಘಾ ಮಠ ಚಲಿಸುವ ನ್ಯಾಯಾಲಯವಾಗಿ ಕೆಲಸ ಮಾಡುತ್ತಿದೆ. ಇಂದಿಗೂ ಎಲ್ಲ ಜನಾಂಗ, ವರ್ಗ, ವಿದ್ಯಾರ್ಥಿ ಸಮುದಾಯವನ್ನೂ ಪ್ರೀತಿಯಿಂದ, ಅಕ್ಕರೆಯಿಂದ ನೋಡಿಕೊಂಡುಬಂದಿದ್ದೇವೆ. ಅಹಿತಕರ, ಅನಾರೋಗ್ಯಕರ ಸಂದರ್ಭ ಇದು. ಇದರಿಂದ ಹೊರಗೆ ಬಂದೇ ಬರುತ್ತೇವೆ ಎಂಬ ವಿಶ್ವಾಸ ಇದೆ. ತಾವು ಧೈರ್ಯಗೆಡಬಾರದು.

ಮೂರ್ನಾಲ್ಕು ದಿನದಿಂದ ಪ್ರವಾಹೋಪಾದಿಯಲ್ಲಿ ಜನರು ಮಠಕ್ಕೆ ಹರಿದುಬರುತ್ತಿದ್ದಾರೆ. ಈ ಸಂಕಟದ ಸಮಯದಲ್ಲಿ ಲಕ್ಷೋಪಲಕ್ಷ ಜನರು ನಮ್ಮ ಜತೆಗೆ ಇರುವುದು ಧೈರ್ಯ ತರುವ ವಿಚಾರ. ಇಂತಹ ಹಂತದಲ್ಲಿ ಅಭಿಮಾನವನ್ನು ಚಿಮ್ಮಿಸಿರುವವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಮಠದ ಕುರಿತು ಇಂತಹ ಭಾವನೆಗಳನ್ನು ಚಿಮ್ಮಿಸಲು ಕಾರಣರಾದವರಿಗೂ ಒಂದು ಸಲ್ಯುಟ್‌ ಎಂದು ತಮ್ಮ ವಿರೋಧಿಗಳ ಕುರಿತು ಮಾತನಾಡಿದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಬಾಲಮಂದಿರಕ್ಕೆ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಭೇಟಿ, ಮನೆಯತ್ತ ಹಾಸ್ಟೆಲ್‌ ಮಕ್ಕಳು

Exit mobile version