Site icon Vistara News

ಮುರುಘಾಮಠ ಪ್ರಕರಣ| ಮಾಜಿ ಶಾಸಕ ಎಸ್‌.ಕೆ ಬಸವರಾಜನ್‌, ಪತ್ನಿ ವಿರುದ್ಧ ದೂರು ನೀಡಿದ ಹಾಸ್ಟೆಲ್ ವಾರ್ಡನ್‌

ಮುರುಘಾಶ್ರೀ

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದ್ದಂತೆಯೇ ಅತ್ತ ಪ್ರಕರಣದಲ್ಲಿ ಆರೋಪಿ ಸಂಖ್ಯೆ ೨ರಲ್ಲಿ ಗುರುತಿಸಿಕೊಂಡಿರುವ ಹಾಸ್ಟೆಲ್‌ನ ವಾರ್ಡನ್‌ ರಶ್ಮಿ ಅವರು ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಅವರ ಪತ್ನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಾಜಿ ಶಾಸಕ ಎಸ್.ಕೆ.ಬಸವರಾಜ್‌ ಅವರು ಈ ಹಿಂದೆ ಮಠದ ಆಡಳಿತಾಧಿಕಾರಿಯಾಗಿದ್ದು ಅವರು ತಮ್ಮ ಪತ್ನಿ, ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರು ಈ ಹಿಂದೆ ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿನಿಯರನ್ನು ಅಕ್ರಮವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಜತೆಗೆ ಎಸ್‌.ಕೆ. ಬಸವರಾಜ್‌ ಅವರು ತಮ್ಮ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದರು ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಬಸವರಾಜ್‌ ವಿರುದ್ಧ ಐಪಿಸಿ ಸೆಕ್ಷನ್‌ ೩೫೪ರ ಅಡಿ ಅತ್ಯಾಚಾರ ಯತ್ನ ಕೇಸ್‌ ದಾಖಲಾಗಿದ್ದರೆ, ಎಸ್‌.ಕೆ. ಬಸವರಾಜ್‌ ಮತ್ತು ಪತ್ನಿ ಸೌಭಾಗ್ಯ ವಿರುದ್ಧ ಬ್ಲ್ಯಾಕ್‌ ಮೇಲ್ ಆರೋಪದಡಿ ಕಲಂ ೩೪೧, ೩೪೨, ೫೦೪, ೫೦೬ರ ಅಡಿ ಪ್ರಕರಣ ದಾಖಲಾಗಿದೆ.

ಎಸ್‌.ಕೆ. ಬಸವರಾಜ್‌ ಅವರು ಜಗದ್ಗುರು ಮುರುಘಾರಾಜೇಂದ್ರ ಬ್ರಹನ್ಮಠದ ಆಡಳಿತಾಧಿಕಾರಿಯಾಗಿ ೨೦೨೨ರ ಮಾರ್ಚ್‌ ೩ರಂದು ನೇಮಕಗೊಂಡಿದ್ದರು. ಅದಾದ ಬಳಿಕ ಅವರು ಹಾಸ್ಟೆಲ್‌ ಆಡಳಿತ ವಿಷಯದಲ್ಲಿ ಮಾತ್ರವಲ್ಲ, ಖಾಸಗಿ ವಿಚಾರಗಳಲ್ಲೂ ಮಧ್ಯ ಪ್ರವೇಶ ಮಾಡಲು ಪ್ರಯತ್ನಿಸುತ್ತಿದ್ದರು. ಜುಲೈ ೨೭ರಂದು ಸಂಜೆ ಆರು ಗಂಟೆಯ ವೇಳೆಗೆ ಹಾಸ್ಟೆಲ್‌ಗೆ ಬಂದು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅದಕ್ಕಿಂತಲೂ ಮೊದಲು ಆಡಳಿತಾಧಿಕಾರಿಯಾಗಿದ್ದಾಗ ಕಚೇರಿಗೆ ಕರೆಸಿಕೊಂಡು ಅಶ್ಲೀಲವಾಗಿ ಮಾತನಾಡುತ್ತಾ, ಆಮಿಷಗಳನ್ನು ಒಡ್ಡುತ್ತಿದ್ದರು. ಹೇಳಿದಂತೆ ಕೇಳಿದರೆ ಉನ್ನತ ಹುದ್ದೆ ಕೊಡಿಸುವುದಾಗಿ ಹೇಳುತ್ತಿದ್ದರು ಎಂದು ವಾರ್ಡನ್‌ ಆರೋಪಿಸಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರ ದುರ್ಬಳಕೆ ಆರೋಪ
ಈ ನಡುವೆ, ಬೆಂಗಳೂರಿನಿಂದ ಹಾಸ್ಟೆಲ್‌ಗೆ ಬಂದ ಇಬ್ಬರು ವಿದ್ಯಾರ್ಥಿನಿಯರನ್ನು (ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದವರು) ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅವರನ್ನು ಹಾಸ್ಟೆಲ್‌ಗೆ ಕರೆತರುವ ಪ್ರಯತ್ನ ವಿಫಲವಾಗಿತ್ತು ಎಂದು ಹೇಳಿದ್ದಾರೆ. ಈ ವಿದ್ಯಾರ್ಥಿನಿಯರು ಜುಲೈ ೨೪ರಂದು ವೈಯಕ್ತಿಕ ಕಾರಣ ನೀಡಿ ಅನುಮತಿ ಪಡೆದು ಹಾಸ್ಟೆಲ್‌ನಿಂದ ಹೊರಹೋಗಿದ್ದವರು ಮರಳಿ ಬಂದಿರಲಿಲ್ಲ. ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಅವರನ್ನು ಪತ್ತೆ ಹಚ್ಚಿ ರಾತ್ರಿ ಠಾಣೆಗೆ ಕರೆತಂದಿದ್ದರು. ಹಾಸ್ಟೆಲ್‌ ವತಿಯಿಂದ ಮರುದಿನ ಬೆಳಗ್ಗೆ ಕರೆದುಕೊಂಡು ಬರಲು ಹೋದಾಗ ಅವರನ್ನು ಎಸ್‌.ಕೆ. ಬಸವರಾಜ್‌ ಮತ್ತು ಪತ್ನಿ ಸೌಭಾಗ್ಯ ಕರೆದುಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದರು. ಆ ಬಳಿಕ ಅವರನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬರುವ ಪ್ರಯತ್ನ ವಿಫಲವಾಗಿದೆ ಎಂದು ರಶ್ಮಿ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಇಂಥಹುದೇ ಕೃತ್ಯಗಳಿಗಾಗಿ ಬಸವರಾಜ್‌ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ| ಚಿತ್ರದುರ್ಗ ಮುರುಘಾಶರಣರಿಂದ ಲೈಂಗಿಕ ದೌರ್ಜನ್ಯ ಆರೋಪ; ವೈದ್ಯಕೀಯ ತಪಾಸಣೆಗೆ ಇಬ್ಬರು ಬಾಲಕಿಯರು

Exit mobile version