ಬೆಂಗಳೂರು: ಕನ್ನಡ ಸುಗಮ ಸಂಗೀತ ಕ್ಷೇತ್ರದ ಮಹಾ ಚೇತನ ಶಿವಮೊಗ್ಗ ಸುಬ್ಬಣ್ಣ. ಸಂತ ಶಿಶುನಾಳ ಶರೀಫರ ಹಾಡುಗಳನ್ನು, ಕನ್ನಡದ ಹಲವು ಶ್ರೇಷ್ಠ ಭಾವಗೀತೆಗಳನ್ನು ಅತ್ಯಂತ ಸೊಗಸಾಗಿ ಕನ್ನಡ ಜನಮಾನಸದ ಹೃದಯದಲ್ಲಿ ಅಚ್ಚೊತ್ತುವಂತೆ ದಾಟಿಸಿದ ಸಶಕ್ತ ಶಾರೀರ. ಕೋಡಗನ ಕೋಳಿ ನುಂಗಿತ್ತಾ.. ಇರಬಹುದು, ಬಿದ್ದೀಯಬ್ಬೇ ಮುದುಕಿ ಬಿದ್ದೀಯಬ್ಬೇ ಮುದುಕಿ ಬಿದ್ದೀಯಬ್ಬೇ.. ಇರಬಹುದು. ಇಂಥ ನೂರಾರು ಹಾಡುಗಳು ಇಂದಿಗೂ ಜನ ಗುನುಗುನಿಸುತ್ತಿದ್ದರೆ ಅದರ ಧ್ವನಿ ಇರುವುದು ಶಿವಮೊಗ್ಗ ಸುಬ್ಬಣ್ಣ ಅವರ ಕಂಠದಲ್ಲಿ.
ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಅವರಿಗೆ ಬಾಲ್ಯದಲ್ಲೇ ಸಂಗೀತದ ಗುಂಜನ ಕೇಳಿಸಿತ್ತು. ಗಣೇಶ್ ರಾವ್ ಮತ್ತು ರಂಗ ನಾಯಕಮ್ಮನ ಮುದ್ದಿನ ಮಗನಾದ ಸಿ. ಸುಬ್ರಹ್ಮಣ್ಯಂ ಎಲ್ಲರ ಬಾಯಲ್ಲಿ ಪ್ರೀತಿಯ ಸುಬ್ಬಣ್ಣ ಆಗಿದ್ದರು. ಮನೆಯಲ್ಲಿ ನಿತ್ಯ ನಡೆಯುವ ಪೂಜೆ, ವೇದ ಮಂತ್ರಗಳ ಝೇಂಕಾರ ಅವರನ್ನು ಬಾಲ್ಯದಲ್ಲೇ ಸಂಗೀತದತ್ತ ಸೆಳೆದಿತ್ತು.
ಅಜ್ಜನೇ ಸಂಗೀತ ಶಿಕ್ಷಕ
ಕೋಟ್ಯಂತರ ಕನ್ನಡಿಗರ ಕಂಠದಲ್ಲಿ ಜಾನಪದ ಗೀತೆಗಳು, ಗೇಯ ಗೀತೆಗಳು, ಷರೀಫರ ಹಾಡುಗಳು ಮೂಡಿಬರಲು ಕಾರಣರಾದವರು ಅವರ ತಾತ ಶಾಮಣ್ಣನವರು. ಅವರೇ ಸಂಗೀತದಲ್ಲಿ ಘನ ವಿದ್ವಾಂಸರಾಗಿದ್ದರು. ಪ್ರೀತಿಯ ಮೊಮ್ಮಗನಿಗೂ ಪ್ರಾಥಮಿಕ ಸಂಗೀತಾಭ್ಯಾಸ ಮಾಡಿಸಿದರು. ಕನ್ನಡದ ಹೆಸರಾಂತ ಗಾಯಕಿ ಬಿ.ಕೆ. ಸುಮಿತ್ರಾ ಅವರು ಮತ್ತು ಸುಬ್ಬಣ್ಣ ಅವರು ಹಲವು ವರ್ಷಗಳ ಕಾಲ ಶಾಮಣ್ಣನಿಂದ ಶಾಸ್ತ್ರೀಯ ಸಂಗೀತದ ಮೂಲ ಪಾಠಗಳನ್ನು ಕಲಿತಿದ್ದರು.
ಸುಬ್ಬಣ್ಣ ಒಬ್ಬ ನೋಟರಿ ವಕೀಲ!
ಇಡೀ ನಾಡಿಗೆ ಸುಬ್ಬಣ್ಣ ಒಬ್ಬ ಹಾಡುಗಾರನಾಗಿಯೇ ಪ್ರಸಿದ್ಧ. ಆದರೆ, ಅವರು ಮೂಲತಃ ಒಬ್ಬ ಲಾಯರ್. ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ. ಮಾಡಿ ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡಿದ್ದರು.
ಅದರೆ, ಸಂಗೀತ ಅವರನ್ನು ತುಂಬ ಕಾಲ ದೂರ ಉಳಿಯಲು ಬಿಡಲಿಲ್ಲ. ರಕ್ತದಲ್ಲೇ ಇದ್ದ ಸಂಗೀತ ಪ್ರೀತಿ ಆಗಾಗ ಕೈ ಹಿಡಿದು ಜಗ್ಗುತ್ತಿತ್ತು. ಶಾಲೆಯ ಸ್ಪರ್ಧೆಗಳಲ್ಲಿ ಎಲ್ಲ ಕಡೆ ಪ್ರಶಸ್ತಿ ಪಡೆಯುತ್ತಿದ್ದ ಹುಡುಗ ಹಾಡಿನ ಸುಬ್ಬಣ್ಣ ಎನಿಸಿಕೊಂಡಿದ್ದರು. ನಡುವೆ, ಹೈಸ್ಕೂಲ್ ಕಾಲೇಜು ಅಂದಾಗ ಸ್ವಲ್ಪ ಕಾಲ ದೂರ ನಿಂತಿದ್ದರು.
ಬಳಿಕ ಮತ್ತೆ ಸಂಗೀತ ಸರಸ್ವತಿಯ ಆರಾಧನೆ ಶುರು ಮಾಡಿದರು. ಗಾಯನ ಕ್ಷೇತ್ರದಲ್ಲಿ ಹೊಸ ನಕ್ಷತ್ರವೊಂದರ ಉದಯದ ಲಕ್ಷಣ ತೋರಿದರು. ೧೯೬೩ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಮುಂದೆ ಹಾಡುತ್ತಲೇ ಎಲ್ಲೆಲ್ಲೋ ತಿರುಗಿದರು.
ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ. ೧೯೭೯ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಕಾಡ ಕುದುರೆ ಓಡಿ ಬಂದಿತ್ತಾ ಹಾಡು ಅವರನ್ನು ಮುಗಿಲೆತ್ತರಕ್ಕೆ ಏರಿಸಿತು.
ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.
ಕನ್ನಡ ನಾಡಿನ ಈ ಸಿರಿಕಂಠಕ್ಕೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಸಂದಿದೆ. ಅವರು ಹಾಡಿದ ಜನಪದ ಶೈಲಿಯ ಒಂದೊಂದು ಹಾಡೂ ಕನ್ನಡ ನಾಡಿನ ಉದ್ದಕ್ಕೂ ಮನೆ ಮಾತು, ಮತ್ತು ಹೃದಯದಲ್ಲಿ ಚಿರಸ್ಥಾಯಿ.
ಇದನ್ನೂ ಓದಿ| ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ; ಬೆಂಗೂರಿನಲ್ಲಿ ಹೃದಯಾಘಾತದಿಂದ ನಿಧನ