ಬೆಂಗಳೂರು: ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಾಗ ಅವರ ಅಂಗಾಂಗಗಳನ್ನು ಬೇರೆಯವರಿಗೆ ಅಳವಡಿಸುವ ಮೂಲಕ ಜೀವ ಉಳಿಸುವ ಅನೇಕ ಪ್ರಸಂಗಗಳು ನಡೆಯುತ್ತಿರುತ್ತವೆ. ಇವೆಲ್ಲವುಗಳಿಗಿಂತ ಭಿನ್ನವಾದ ಪ್ರಕರಣವೊಂದು ಬೆಂಗಳೂರಿನಲ್ಲಿ ಕಂಡುಬಂದಿದ್ದು, ಮುಸ್ಲಿಂ ಕಟ್ಟುಪಾಡನ್ನು ಮೀರಿ ಕುಟುಂಬವೊಂದು ಆರು ಜನರ ಪ್ರಾಣ ಉಳಿಸಿದೆ.
ಸಾವಿನಲ್ಲೂ ಅಂಗಾಂಗ ದಾನ ಮಾಡಿದವರಿಗೆ ಸನ್ಮಾನಿಸುವ ಮೂಲಕ ಅಂಗಾಂಗ ದಾನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರೋತ್ಸಾಹ ನೀಡಿದ್ದಾರೆ. ಅಂಗಾಂಗ ದಾನ ನಿಜವಾಗಿ ಆತ್ಮ ಚೈತನ್ಯ ನೀಡುವ ಕಾರ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಸಾವಿನಲ್ಲೂ ಅಂಗಾಂಗ ದಾನ ಮಾಡಿದ ಫಾರ್ದಿನ್ ಖಾನ್ ಮುಸ್ಲಿಂ ಕುಟುಂಬದ ಕಾರ್ಯವನ್ನ ಗುಂಡೂರಾವ್ ಶ್ಲಾಘಿಸಿದ್ದಾರೆ. ಇಂದು ಫಾರ್ದಿನ್ ಖಾನ್ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗುಂಡೂರಾವ್, ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದ ಫಾರ್ದಿನ್ ಖಾನ್ ಅವರ ಕುಟಂಬವನ್ನ ಸನ್ಮಾನಿಸಿದರು.
22 ವರ್ಷದ ಫಾರ್ದಿನ್ ಖಾನ್ ಜೂನ್ 4 ರಂದು ಮದುವೆ ಸಮಾರಂಭವೊಂದನ್ನು ಮುಗಿಸಿ ವಾಪಾಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪಘಾತವಾಗಿತ್ತು. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಫಾರ್ದೀನ್‌ರನ್ನು ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಫಾರ್ದೀನ್ ಮೆದುಳೂ ನಿಷ್ಕ್ರಿಯಗೊಂಡಿದೆ ಎಂದು ಜೂನ್ 7 ಬೆಳಗ್ಗೆ 11.55ಕ್ಕೆ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಮೆದುಳು ಮಾತ್ರ ನಿಷ್ಕ್ರಿಯಗೊಂಡರೂ ಉಳಿದೆಲ್ಲ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು.
ಮೆದುಳು ನಿಷ್ಕ್ರೀಯಗೊಳ್ಳುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಕ್ಲಿನಕಲಿ ಡೆಡ್’ ಎಂದು ಹೇಳಲಾಗುತ್ತದೆ. ಅಂದರೆ, ವ್ಯಕ್ತಿಯ ಮೆದುಳು ಮಾತ್ರ ನಿಷ್ಕ್ರೀಯಗೊಂಡು ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುವ ದೈಹಿಕ ಪ್ರಕ್ರಿಯೆಗೆ ಕ್ಲಿನಿಕಲ್ ಡೆಡ್ ಎನ್ನಲಾಗುತ್ತದೆ. ಹಾಗಾಗಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಬೇರೆಯವರಿಗೆ ನೀಡುವ ಮೂಲಕ ಅಂಗಾಂಗ ಕಸಿ ಮಾಡಬಹುದು.
ಮೂರು ದಿನಗಳ ಜೀವನ್ಮರಣದ ಹೋರಾಟದ ನಂತರ 22 ವರ್ಷದ ಫಾರ್ದಿನ್ ಖಾನ್ ಜೀವನ ಅಂತ್ಯವಾಯಿತು. ಈ ದುಃಖದ ಸನ್ನಿವೇಶದಲ್ಲಿ ಫಾರ್ದಿನ್ ಕುಟುಂಬದವರು ತಮ್ಮ ಮಗನ ದೇಹದ ಅಂಗಾಂಗಳನ್ನು ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡರು. ತಮ್ಮ ಮಗನ ಅಂಗಾಂಗಳನ್ನು ದಾನ ಮಾಡಲು ಸಮ್ಮತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಆರು ಜನರ ಬದುಕಿಗೆ ಮರುಜೀವ ನೀಡಿದ್ದಾರೆ.
ಮುಸ್ಲಿಂ ಕಟ್ಟುಪಾಡು
ಇತರೆ ಸಮುದಾಯದ ಅನೇಕರು ಅಂಗಾಂಗದಾನವನ್ನು ಮಾಡುತ್ತಿರುತ್ತಾರೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ. ಆದರೆ ಫಾರ್ದಿನ್ ಕುಟುಂಬವು ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಫಾರ್ದಿನ್ ದೇಹದ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡರು.
ಫಾರ್ದಿನ್ ಖಾನ್ ಹೃದಯವನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ 57 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಪಿತ್ತಜನಕಾಂಗವನ್ನು ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಗೆ ಕಸಿ ಮಾಡಲಾಗಿದೆ. ಎಡ ಮೂತ್ರಪಿಂಡ ಮತ್ತು ಪ್ಯಾಂಕ್ರಿಯಾಸನ್ನು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಬಹು ಅಂಗಾಂಗ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ.
ಸಚಿವರ ಅಭಿನಂದನೆ:
ಮಗನ ದೇಹವನ್ನು ದಾನ ಮಾಡಿದ ಫಾರ್ದಿನ್ ಕುಟುಂಬದ ನಡೆಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಾರ್ದೀನ್ ಖಾನ್ ಮನೆಗೆ ಭೇಟಿ ನೀಡಿದ ದಿನೇಶ್ ಗುಂಡೂರಾವ್, ಒಂದು ಜೀವ ಉಳಿಸುವುದು, ಈ ಜಗತ್ತಿನ ಮಾನವೀಯತೆ ಉಳಿಸಿದಂತೆ ಎಂಬ ಖುರಾನ್‌ನ ಉಕ್ತಿಯನ್ನು ಉಲ್ಲೇಖ ಮಾಡಿದರು. ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಅಂಗಾಂಗ ದಾನ ಮಾಡಿದ ಫಾರ್ದಿನ್ ಕುಟುಂಬದ ನಡೆ ಸಮಾಜಕ್ಕೆ ಆದರ್ಶ ಪ್ರಾಯ. ಇದೊಂದು ಉದಾತ್ತ ಮಾನವೀಯ ನಡೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಫಾರ್ದಿನ್ ಕುಟುಂಬದ ನಿರ್ಧಾರ ಪ್ರೇರಕ ಶಕ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಕುಟುಂಬದವರಿಗೆ ಸಾಂತ್ವನ ಹೇಳಿ ಅಭಿನಂದಿಸಿದರು.
ಇದನ್ನೂ ಓದಿ: Organ Donation: ಮನೆ ಮಹಡಿಯಿಂದ ಆಯತಪ್ಪಿ ಬಿದ್ದ ಬಾಲಕಿಯ ಮೆದುಳು ನಿಷ್ಕ್ರಿಯ; ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು