Site icon Vistara News

Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ

muslim quota issue: CM Bommai says Govt. wont take any decision until supreme courts final verdict

muslim quota issue: CM Bommai says Govt. wont take any decision until supreme courts final verdict

ಧಾರವಾಡ: ಮುಸ್ಲಿಮರ ಮೀಸಲಾತಿ (Muslim Reservation) ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಪೂರ್ಣ ಆಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದರು.

ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ 2ಬಿ ಪ್ರವರ್ಗದಲ್ಲಿದ್ದ ಶೇಕಡಾ 4 ಮೀಸಲಾತಿಯನ್ನು ರದ್ದುಪಡಿಸಿ ಅದರಲ್ಲಿ ಶೇಕಡಾ 2ನ್ನು ಒಕ್ಕಲಿಗರಿಗೆ ಮತ್ತು ಉಳಿದ ಶೇ. 2ನ್ನು ಲಿಂಗಾಯತರಿಗೆ ಹಂಚಿದ್ದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದು, ಮೀಸಲಾತಿ ಕುರಿತಂತೆ ಮುಂದಿನ ವಿಚಾರಣೆ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್‌ ಸೂಚಿಸಿತ್ತು. ಮೇ 9ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿವರೆಗೆ ಬದಲಾದ ಮೀಸಲಾತಿ ನೀತಿಯಡಿ ಯಾವುದೇ ನಿರ್ಧಾರ ಪ್ರಕಟಿಸದಂತೆ ಅದು ಆದೇಶಿಸಿದೆ.

ಸುಪ್ರೀಂಕೋರ್ಟ್‌ ತೀರ್ಪಿಗೆ ಸಂಬಂಧಿಸಿ ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮೀಸಲಾತಿಗೆ ಸಂಬಂಧಿಸಿ ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ನೀಡಲಾಗಿಲ್ಲ. ವಿಚಾರಣೆಯನ್ನು ಮುಂದೂಡಲಾಗಿದೆ ಅಷ್ಟೆ ಎಂದರು. ಮೀಸಲಾತಿ ನೀಡಿದ ವಿಚಾರಕ್ಕೆ ಸಂಬಂಧಿಸಿ ಎಲ್ಲ ವಿವರಗಳನ್ನು ಕೋರ್ಟ್‌ಗೆ ತಿಳಿಸಲಾಗಿದೆ ಎಂದು ಅವರು ನುಡಿದರು.

ನಾವು ಮುಸ್ಲಿಮರ ವಿರುದ್ಧವಾಗಿ ನಡೆದುಕೊಂಡಿದ್ದೇವೆ, ಮುಸ್ಲಿಮರ ಮೀಸಲಾತಿ ರದ್ದು ಮಾಡಿದ್ದೇವೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಮುಸ್ಲಿಮರಲ್ಲಿ ಸುಮಾರು 17 ಉಪಜಾತಿಗಾಳಿವೆ. ಅವೆಲ್ಲವೂ ಹಿಂದುಳಿದ ವರ್ಗದಲ್ಲಿಯೇ ಇವೆ. ಇಲ್ಲಿಯೂ ಕಡಿಮೆ ಆದಾಯಕ್ಕೆ ಮೀಸಲಾತಿ ಸಿಗುತ್ತಿತ್ತು. ಈಗ ಮೇಲ್ವರ್ಗದ ಬಡವರ ಮೀಸಲಾತಿಯಲ್ಲೂ ಅದೇ ಸಿಗಲಿದೆ. ಹೀಗಾಗಿ ಅನ್ಯಾಯ ಮಾಡಿದ್ದೇವೆ ಎನ್ನುವುದು ಎನ್ನುವುದು ಸುಳ್ಳು. ನಾವು ಈಗ ಮಾಡಿದ ಮೀಸಲಾತಿಯಲ್ಲಿಯೂ ಹಿಂದಿನ ಪ್ರಮಾಣದ ಮೀಸಲಾತಿಯೇ ಸಿಗಲಿದೆ ಎಂದರು.

ಸು. ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡನೆ: ಅಶ್ವತ್ಥನಾರಾಯಣ್‌

ಮುಸ್ಲಿಂ ಮೀಸಲಾತಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ವಾದ ಮಂಡನೆ ಮಾಡಲಾಗುತ್ತದೆ ಎಂದು ಸಚಿವ ಸಿ.ಎನ್.‌ ಅಶ್ವತ್ಥ್‌ ನಾರಾಯಣ ಹೇಳಿದರು. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶ ಇಲ್ಲ. ಇದನ್ನು ಪರಿಣಾಮಕಾರಿ ವಾದದ ಮೂಲಕ ತಿಳಿಸುತ್ತೇವೆ. ಈಗ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ಕೊಟ್ಟಿರಬಹುದು. ಆದರೆ ಅಂತಿಮವಾಗಿ ನ್ಯಾಯಾಲಯದಲ್ಲಿ ಜಯ ನಮಗೇ ಸಿಗಲಿದೆ ಎಂದರು.

ತಡೆಯಾಜ್ಞೆ ತೆರವು ಮಾಡಿಸುತ್ತೇವೆ ಎಂದ ಈಶ್ವರಪ್ಪ

ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ಕೊಟ್ಟಿದೆಯೇ ಹೊರತು ರದ್ದು ಮಾಡಿಲ್ಲ. ನ್ಯಾಯಾಲಯದಲ್ಲಿ ವಾದ ಮಾಡಿ ಅದನ್ನು ತೆರವು ಮಾಡಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದರು.

ʻʻನಾವು ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿಯನ್ನು ಜಾಸ್ತಿ ಮಾಡಿದ್ದೇವೆ. ಸಾಮಾನ್ಯ ವ್ಯವಸ್ಥೆಯಲ್ಲಿ 10% ಮೀಸಲಾತಿಯನ್ನ ಮುಸ್ಲಿಂರಿಗೆ ಕೊಟ್ಟಿದ್ದೇವೆ. ಎಲ್ಲಾ ಅಂಶಗಳನ್ನು ಸುಪ್ರೀಂಕೋರ್ಟಿಗೆ ತಿಳಿಸಿ ತಡೆಯನ್ನು ತೆರವುಗೊಳಿಸುತ್ತೇವೆʼʼ ಎಂದ ಈಶ್ವರಪ್ಪ ಅವರು, ಸುಪ್ರೀಂಕೋರ್ಟ್‌ನ ಮಧ್ಯಂತರ ತಡೆ ಚುನಾವಣೆಯಲ್ಲಿ ಪ್ರಭಾವ ಬೀರುತ್ತೆ, ಬೀರಲ್ಲ ಅಂತ ಅಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.

ಇದನ್ನೂ ಓದಿ: Muslim Quota Issue : ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರಿಂ ಕೋರ್ಟ್‌ ತಡೆ

muslim-quota-issue- CM Bommai says Govt. wont take any decision until supreme courts final verdict

i

Exit mobile version