Site icon Vistara News

Muslim quota issue : ಮೀಸಲಾತಿ ಬರೀ ಲಾಲಿಪಾಪ್‌ ಎಂದ ಸುರ್ಜೇವಾಲಾ, ಬಿಜೆಪಿಗೆ 9 ಪ್ರಶ್ನೆಗಳು

Randeep Singh Surjewala

ಮೈಸೂರು: ಮುಸ್ಲಿಮರ ಶೇಕಡಾ ನಾಲ್ಕು ಮೀಸಲಾತಿಯನ್ನು (Muslim quota issue) ರದ್ದು ಮಾಡಿದ ಬಿಜೆಪಿ ಸರ್ಕಾರ ಅದನ್ನು ಸುಪ್ರೀಂಕೋರ್ಟ್‌ ಮುಂದೆ ಸಮರ್ಥಿಸಿಕೊಳ್ಳಲು ವಿಫಲವಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಮೀಸಲಾತಿ ಬರೀ ಲಾಲಿಪಾಪ್‌ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ (Ranadeepa singh surjewala) ಹೇಳಿದ್ದಾರೆ.

ಮೈಸೂರಿನಲ್ಲಿ ಬುಧವಾರ ಬೆಳಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿದ ಆದೇಶವನ್ನೇ ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ ಮೀಸಲಾತಿ ಹೆಸರಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿಗೆ ಹಿನ್ನಡೆ ಆಗಿದೆ. ಇದು ಡಬಲ್‌ ಇಂಜಿನ್ ದೋಖಾ. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಸರಲ್ಲಿ ಮೋಸ ಮಾಡಿದೆ ಎಂದು ಹೇಳಿದರು.

ಮೀಸಲಾತಿ ಬದಲಾವಣೆ/ಪರಿಷ್ಕರಣೆಯನ್ನು ಸಮರ್ಥಿಸಿಕೊಳ್ಳಲಾಗದ ಬಿಜೆಪಿಗೆ ರಣದೀಪ್‌ ಸುರ್ಜೇವಾಲಾ ಒಂಬತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. (Karnataka Election 2023)

ಬಿಜೆಪಿಗೆ ರಣದೀಪ್ ಸಿಂಗ್ ಸುರ್ಜೇವಾಲಾ 9 ಪ್ರಶ್ನೆ

1.ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ವಂಚನೆ ಮಾಡಿದ್ದು ಯಾಕೆ?
2. ಯಾಕೆ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲಿಲ್ಲ.
3. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ಕೇಸ್‌ಗೆ ಸಂಬಂಧಪಟ್ಟಂತೆ ಯಾಕೆ ಅಫಿಡೆವಿಟ್ ಸಲ್ಲಿಸಲಿಲ್ಲ ?
4. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಶಿಫಾರಸ್ಸನ್ನು ಮೋದಿ ಸರ್ಕಾರ ಮಾರ್ಚ್ 14ರಂದು ತಿರಸ್ಕರಿಸಿದ್ದು ಯಾಕೆ?
5. ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಯಾಕೆ ಸೇರಿಸಲಿಲ್ಲ ?
6. ಎಸ್ಸಿ, ಎಸ್ಟಿ, ಒಬಿಸಿ, ಲಿಂಗಾಯತ, ಒಕ್ಕಲಿಗ ಮತ್ತು ಇತರೆ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಲು ಶೇ.50ರಷ್ಟು ಮೀಸಲಾತಿ ಮಿತಿಯನ್ನು ಯಾಕೆ ತೆಗೆದು ಹಾಕಲಿಲ್ಲ ?
7. ಅಲ್ಪಸಂಖ್ಯಾತರ ಮೀಸಲಾತಿಯನ್ನು ಅನ್ಯಾಯವಾಗಿ ಟಾರ್ಗೆಟ್ ಮಾಡಿದ್ದು ಯಾಕೆ?
8. ಬಸವರಾಜ ಬೊಮ್ಮಾಯಿ ಸರ್ಕಾರ ತಮ್ಮದೇ ಸರ್ಕಾರದ ಹೇಳಿಕೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲಿಲ್ಲ ಯಾಕೆ?
9.ಮೀಸಲಾತಿ ವಿಚಾರದಲ್ಲಿ ಬಿಜೆಪಿ ಉಂಟು ಮಾಡಿದ ಗೊಂದಲಕ್ಕಾಗಿ ಮೋದಿ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರಾ?

ಮಾಧ್ಯಮ ಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಎಂ.ಲಕ್ಷ್ಮಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ನಾನೂ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದ ಡಿಕೆಶಿ

ಈಗ ಕಾಂಗ್ರೆಸ್‌ ನಾಯಕರಾಗಿರುವ ಜಗದೀಶ್‌ ಶೆಟ್ಟರ್‌ ಅವರು ಈ ಬಾರಿ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಕ್ಕೆ ನಿಲ್ಲುತ್ತೆ. ಕಾಂಗ್ರೆಸ್ 150 ಸ್ಥಾನಕ್ಕೆ ಬರುತ್ತದೆ. ಆದ್ದರಿಂದ 15 ದಿನದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ನಾನು ನನ್ನ ರಕ್ತದಲ್ಲೇ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದರು.

ʻʻಯಡಿಯೂರಪ್ಪ ಅವರು ಪಕ್ಷ ಬಿಟ್ಟ ಯಾರೋ ನಾಲ್ಕು ಜನರನ್ನು ಸೋಲಿಸಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಯಾರನ್ನೋ ಸೋಲಿಸುವುದೇ ನಿಮ್ಮ ಗುರಿಯೇ ?
ಬಿಜೆಪಿಯಿಂದ ಯಾರಿಗೆ ಅನುಕೂಲ ಆಗಿದೆ? ರೈತರು, ವರ್ತಕರು, ಯುವಕರಿಗೆ ಮೋಸ ಮಾಡಿದೆ ಬಿಜೆಪಿʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಇದನ್ನೂ ಓದಿ : Karnataka Election: ಮಿಸ್ಸಾಗೋ ಚಾನ್ಸೇ ಇಲ್ಲ, ಇವರೇ ಮುಂದಿನ ಸಿಎಂ; ಇದು ಮಂಡ್ಯದ ಶ್ವಾನ ಭೈರ ಭವಿಷ್ಯ!

Exit mobile version