ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಮುಖಂಡ ನವೀನ್ ಜಿಂದಾಲ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೇಶದ ಹಲವೆಡೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಬಂದೋಬಸ್ತ್ ಏರ್ಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಶಾಂತಿಪ್ರಿಯ ರಾಜ್ಯ. ಸಂಘಟನೆಗಳು ಶಾಂತಿ ಕದಡುವಂತಹ ಚಟುವಟಿಕೆ ಬಿಟ್ಟು ಸೌಹಾರ್ದತೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
ಡಿಜಿಪಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಗೃಹ ಇಲಾಖೆ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಲಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಶಾಂತಿ ಸೌಹಾರ್ದತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಪ್ರತಿಯೊಂದು ಪೊಲೀಸ್ ಠಾಣೆಗೆ ಸೂಚನೆಯನ್ನು ನೀಡಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಸಂಬಂಧಿಸಿದವರೊಂದಿಗೆ ಮಾತನಾಡಿ ಕೆ.ಎಸ್.ಆರ್.ಪಿ ತುಕಡಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿಯನ್ನು ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ: ಪ್ರಮೋದ್ ಮುತಾಲಿಕ್
ಉತ್ತರ ಪ್ರದೇಶದಂತ ಘಟನೆಗಳು ಇಲ್ಲಿ ನಡೆದಿಲ್ಲ
ಪ್ರವಾದಿ ವಿರುದ್ಧ ಹೇಳಿಕೆ ವಿವಾದದಲ್ಲಿ ಉತ್ತರ ಪ್ರದೇಶದಂತ ಘಟನೆಗಳು ನಮ್ಮಲ್ಲಿ ನಡೆದಿಲ್ಲ, ನಮ್ಮ ರಾಜ್ಯ ಶಾಂತವಾಗಿದೆ. ಶೂಟ್ ಅಟ್ ಸೈಟ್ ಕ್ರಮದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ
ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಲಿರುವ ಸಾಧ್ಯತೆ ಇರುವುದರಿಂದ ನಗರದಾದ್ಯಂತ ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ. ನಗರದ 8 ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ತಿಳಿಸಲಾಗಿದೆ. ಯಾವುದೇ ಸಂಘಟನೆಗೆ ಪ್ರತಿಭಟನೆಗೆ ಯಾವುದೇ ಅವಕಾಶವಿಲ್ಲ, ಮುಸ್ಲಿಂ ಧರ್ಮಗುರುಗಳೊಂದಿಗೆ ಶಾಂತಿ ಸಭೆ ನಡೆಸಲು ಡಿಸಿಪಿಗಳಿಗೆ ಸೂಚಿಸಿದ್ದಾರೆ. ಪ್ರತಿಭಟನೆ, ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ | ನೂಪುರ್ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು