Site icon Vistara News

Karnataka Election 2023: ನನ್ನ ಗುರಿ ಬಿಜೆಪಿಯನ್ನು ಗೆಲ್ಲಿಸುವುದೇ ಹೊರತು, ಮುಖ್ಯಮಂತ್ರಿ ಹುದ್ದೆ ಅಲ್ಲ: ಬಿ.ವೈ. ವಿಜಯೇಂದ್ರ

My aim is to make BJP win not cm post says BY Vijayendra Karnataka Election 2023 updates

ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಒಂದು ಪರ್ಸೆಂಟ್ ಇದ್ದರೂ ಮೂರ್ಖತನದ ಪರಮಾವಧಿಯಾಗುತ್ತದೆ. ನನ್ನ ಗುರಿ ಏನಿದ್ದರೂ ಪಕ್ಷವನ್ನು ಸಂಘಟಿಸಿ ಬಿಜೆಪಿಯನ್ನು ಗೆಲ್ಲಿಸುವುದೇ ಹೊರತು, ಮುಖ್ಯಮಂತ್ರಿ ಹುದ್ದೆ ಅಲ್ಲ. ಅಲ್ಲದೆ, ಯಾವುದೇ ಸ್ಥಾನಮಾನ ಬಯಸಿ ನಾನು ರಾಜ್ಯ ಪ್ರವಾಸವನ್ನು ಮಾಡುತ್ತಿಲ್ಲ ಅಥವಾ ಶಿಕಾರಿಪುರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟವಾಗಿ ಹೇಳಿದರು.

ಇಲ್ಲಿನ ಪ್ರೆಸ್ ಟ್ರಸ್ಟ್‌ನಲ್ಲಿ ಗುರುವಾರ (ಮೇ 4) ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಬಿ.ವೈ. ವಿಜಯೇಂದ್ರ ಮಾತನಾಡಿದರು. ಈ ವೇಳೆ, ನೀವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ವಿಚಾರ ನನ್ನ ಮನಸ್ಸಿನಲ್ಲಿ ಒಂದು ಪರ್ಸೆಂಟ್ ಇದ್ದರೂ ಮೂರ್ಖತನದ ಪರಮಾವಧಿಯಾಗುತ್ತದೆ. ಕೇಂದ್ರದ ವರಿಷ್ಠರು ನನ್ನ ಮೇಲೆ ವಿಶ್ವಾಸವನ್ನು ಇಟ್ಟು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಲು ನನಗೆ ಅವಕಾಶವನ್ನು ಕೊಟ್ಟಿದ್ದಾರೆ. ಹೀಗಾಗಿ ನನ್ನ ಮುಂದಿರುವ ಗುರಿ ಎಂದರೆ, ಪಕ್ಷ ಸಂಘಟನೆ ಮಾಡುವುದಾಗಿದೆ. ಯಾವುದೇ ಸ್ಥಾನಮಾನ ಬಯಸಿ ನಾನು ರಾಜ್ಯ ಪ್ರವಾಸವನ್ನು ಮಾಡುತ್ತಿಲ್ಲ ಅಥವಾ ಶಿಕಾರಿಪುರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ಎಲ್ಲವನ್ನೂ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಉತ್ತರಾಧಿಕಾರಿ ಪದ್ಧತಿ ಬಿಜೆಪಿಯಲ್ಲಿಲ್ಲ. ನಮ್ಮ ನಡೆ, ಸಾಮರ್ಥ್ಯ, ಜನಸ್ಪಂದನೆ ಮೇಲೆ ಭವಿಷ್ಯ ನಿಂತಿದೆ ಎಂದು ಹೇಳಿದರು.

ಖರ್ಗೆ ಮಾತು ಕೀಳುಮಟ್ಟದ್ದು

ಬಜರಂಗದಳ ದೇಶಾದ್ಯಂತ ಇರುವ ಸಂಘಟನೆಯಾಗಿದೆ. ಇದನ್ನು ನಿಷೇಧ ಮಾಡುತ್ತೇನೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಇಡೀ ಜಗತ್ತು ಗೌರವಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅತ್ಯಂತ ಗೌರವ ಕೊಟ್ಟವರು ಮೋದಿ ಆಗಿದ್ದಾರೆ. ಆದರೆ, ಖರ್ಗೆ ಮತ್ತವರ ಮಗ ಪ್ರಿಯಾಂಕ್‌ ಖರ್ಗೆ ಮಾತು ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election 2023: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸೋನಿಯಾ ಗಾಂಧಿ ಎಂಟ್ರಿ, ಶೆಟ್ಟರ್ ಪರ ಕ್ಯಾಂಪೇನ್

ಹೊಂದಾಣಿಕೆ ರಾಜಕಾರಣ ಇಲ್ಲ

ಗ್ಯಾರೆಂಟಿ ಕಾರ್ಡ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಜನ ಉತ್ತಮ, ಜನಪರ ಆಡಳಿತವನ್ನು ಬಯಸುತ್ತಾರೆ. ನಾನು ಮೊದಲ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ತಂದೆಯವರ ಕ್ಷೇತ್ರದಿಂದ ನನ್ನ ರಾಜಕೀಯ ಜೀವನ ಆರಂಭವಾಗಿದೆ. ಇದು ನನಗೆ ಸಂತೋಷ ತಂದಿದೆ. ನನ್ನ ಜನ್ಮ ಭೂಮಿಯೇ ನನ್ನ ಕರ್ಮ ಭೂಮಿ ಆಗುತ್ತಿದೆ. ನಾನು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತವಾಗಿದೆ. ಇನ್ನು ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣದಂತಹ ದಾರುಣ ಸ್ಥಿತಿ ಬಿಜೆಪಿಗಾಗಲಿ, ಯಡಿಯೂರಪ್ಪ ಕುಟುಂಬಕ್ಕಾಗಲೀ ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ದೈವೇಚ್ಛೆ ಏನಿದೆ ಎಂಬುದು ಮೇ 13ರಂದು ಗೊತ್ತಾಗುತ್ತದೆ

ದೈವೇಚ್ಛೆ ನಾನೇ ಸಿಎಂ ಆಗುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ದೈವೇಚ್ಛೆ ಏನಿದೆ ಎಂಬುದು ಮೇ 13ರಂದು ಗೊತ್ತಾಗುತ್ತದೆ ಎಂದು ಹೇಳಿದರು.

ಉತ್ತರಾಧಿಕಾರಿ ಪದ್ಧತಿ ಬಿಜೆಪಿಯಲ್ಲಿಲ್ಲ

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಾತಿ ಕುರಿತು ಎದ್ದಿದ್ದ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಬೇರೆಲ್ಲೂ ಇಂತಹ ಘಟನೆ ನಡೆದಿಲ್ಲ. ಇದು ಕಾಂಗ್ರೆಸ್ ಮುಖಂಡರ ಹುನ್ನಾರವಾಗಿತ್ತು. ಬಂಜಾರ ಸಮುದಾಯದವರು ಅರ್ಥ ಮಾಡಿಕೊಂಡಿದ್ದಾರೆ. ಹಿಂದಿನಕ್ಕಿಂತ ಹೆಚ್ಚು ಬೆಂಬಲ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Election : ಡಿಕೆಶಿಗೆ ಬಜರಂಗ ದಳ- ಆಂಜನೇಯ ಸಂಬಂಧದ ಪಾಠ ಮಾಡಿದ ಬೊಮ್ಮಾಯಿ

ಸರ್ಕಾರ ರಚನೆಯಲ್ಲಿ ನಿಮ್ಮ ಪಾತ್ರ ಇರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದರಿಂದ ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು, ಕೈಗಾರಿಕೆ ಸ್ಥಾಪನೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಪ್ರವಾಸೋದ್ಯಮ ಬೆಳವಣಿಗೆ ಚಿಂತನೆ ಇದೆ. ಬಗರ್‌ಹುಕುಂ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗಿದೆ. ಕಾನೂನು ತಿದ್ದುಪಡಿ ಮಾಡಿ ಅವರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಕಾಂಗ್ರೆಸ್‌ನವರು ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ

ಕೇವಲ ರಾಜ್ಯವಷ್ಟೇ ಅಲ್ಲದೆ, ಇಡೀ ದೇಶ ರಾಜ್ಯದ ಫಲಿತಾಂಶವನ್ನು ಎದುರು ನೋಡುತ್ತಿದೆ. ಕಾಂಗ್ರೆಸ್ ಪಕ್ಷ ಪೊಳ್ಳು ಭರವಸೆ ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಜೆಡಿಎಸ್ ಬಹುಮತ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಬೇಕು. ತಮಗೆ ಅಧಿಕಾರ ಸಿಗಬೇಕು ಎಂಬ ಯೋಚನೆಯಲ್ಲಿದ್ದಾರೆ. ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಇದನ್ನೂ ಓದಿ: Karnataka Election: ನಿಮ್ಮ ಲೂಟಿ ಅತಿಯಾಗಿದೆ, ರಾಜ್ಯ ಬಿಟ್ಟು ಹೊರಡಿ: ಮತದಾರರ ಮೂಲಕ ಬಿಜೆಪಿಗೆ ಪ್ರಿಯಾಂಕಾ ಏಟು

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶದ ಆರ್ಥಿಕ ದಿವಾಳಿತನಕ್ಕೆ ಸೂಚಿ

ನಮ್ಮ ಡಬಲ್ ಎಂಜಿನ್ ಸರ್ಕಾರ ಜನರಿಂದ, ಜನರಿಗಾಗಿ, ಜನರಿಗೋಸ್ಕರ ದುಡಿಯುತ್ತಿದೆ.‌ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಮುನ್ನುಗ್ಗುತ್ತಿದ್ದೇವೆ.‌ ಬಿಜೆಪಿ ಸರ್ಕಾರ ಬಂದಾಗ ಮಾತ್ರ ನಾಡಿಗೆ ಒಳಿತಾಗುತ್ತದೆ.‌ ಅಭಿವೃದ್ಧಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ರಾಜ್ಯದ ಜನ ನೋಡಿದ್ದಾರೆ. ಜನರಿಗೆ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೋಡಿದರೆ ಶ್ರೀಲಂಕಾ, ಪಾಕಿಸ್ತಾನದ ನಂತರ ಈ ದೇಶವನ್ನು ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ಯುವಂತೆ ಕಾಣುತ್ತಿದೆ. ದೇಶ ಆರ್ಥಿಕ ದಿವಾಳಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಲಾಟರಿ ಇಲ್ಲದೆ, ಬಹುಮಾನ ಕೊಡಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಶೇಕಡಾ 75ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಹೇಳುತ್ತಾರೆ. ಅಂಬೇಡ್ಕರ್ ಎಲ್ಲ ಸಮಾಜದ ಜನರಿಗೆ ಅನುಕೂಲ ಆಗಬೇಕು ಎಂದು ಸಂವಿಧಾನವನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಬಗ್ಗೆ, ದೇಶದ ಬಗ್ಗೆ ಬದ್ಧತೆ ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ನಿರಂತರವಾಗಿ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಅವರಿಗೆ ಇವತ್ತಿಗೂ ಬಡವರು ಬಡವರಾಗಿರಬೇಕು, ಅವಿದ್ಯಾವಂತರು ಅವಿದ್ಯಾವಂತರಾಗಿರಬೇಕು. ಆಗ ಕಾಂಗ್ರೆಸ್‌ಗೆ ಭವಿಷ್ಯ ಎಂದು ನಂಬಿದ್ದಾರೆ ಎಂದು ಕಿಡಿಕಾರಿದರು.

ಮೇ 13ರ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಮಾನ ಹಕ್ಕು, ಸಮಾನ ನೀತಿ, ಸಮಾನ ಕಾನೂನು ಅತ್ಯಾವಶ್ಯಕವಾಗಿದೆ. ಈ ರೀತಿಯ ಕಾನೂನು ನಮ್ಮ ಪ್ರಣಾಳಿಕೆಯಲ್ಲಿ ಜಾರಿ ಆಗಿದೆ. ನಮ್ಮ ಯೋಜನೆಯನ್ನು ನಾಡಿನ ಜನತೆಗೆ ತೋರಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಉತ್ಸಾಹದಲ್ಲಿದ್ದರು. ಆದರೆ, ಆದರೆ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಿಜೆಪಿ ಪರವಾದ ಅಲೆ ಇದೆ. ಹೀಗಾಗಿ ಕಾಂಗ್ರೆಸ್‌ಗೆ ದಿಕ್ಕು ತೋಚದಂತಾಗಿದೆ. ರಾಜ್ಯವನ್ನು ಕೇಂದ್ರದ ಎಟಿಎಂ ಆಗಿ ಬಳಸಲು ರಾಜ್ಯದ ಕಾಂಗ್ರೆಸ್‌ ನಾಯಕರು ಯೋಚಿಸಿದ್ದರು. ಆದರೆ ಮೇ 13ರ ಫಲಿತಾಂಶದಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಮುಂದಿನ ಸಿಎಂ ಬಗ್ಗೆ ವಿಜಯೇಂದ್ರ ಹೇಳಿದ್ದೇನು?

ಇದನ್ನೂ ಓದಿ: Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಶಿಕಾರಿಪುರದಲ್ಲಿ ಅತ್ಯಧಿಕ ಮತದಿಂದ ಬಿಜೆಪಿ ಗೆಲ್ಲುತ್ತದೆ

ಕ್ಷೇತ್ರದಲ್ಲಿ ನನ್ನ ತಂದೆ ಬಿ.ಎಸ್.‌ ಯಡಿಯೂರಪ್ಪ, ಸಹೋದರ, ಸಂಸದ ಬಿ.ವೈ. ರಾಘವೇಂದ್ರ ಮಾಡಿರುವ ಕೆಲಸ ನನಗೆ ಶ್ರೀರಕ್ಷೆ ಆಗಲಿದೆ. ಕಾರ್ಯಕರ್ತರು ಶ್ರಮ ಹಾಕುತ್ತಿದ್ದಾರೆ. ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ಗುರಿಯನ್ನು ನಮ್ಮ ‌ಕಾರ್ಯಕರ್ತರು ಹೊಂದಿದ್ದಾರೆ. ಶಿಕಾರಿಪುರದಲ್ಲಿ ಅತ್ಯಧಿಕ ಮತದಿಂದ ಬಿಜೆಪಿ ಗೆಲ್ಲುತ್ತದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷವು ಅವಕಾಶ ಸಿಕ್ಕಿದಾಗ ವೀರಶೈವ ಲಿಂಗಾಯತರನ್ನು ತುಳಿಯುವ ಕೆಲಸ ಮಾಡಿದೆ. ವೀರಶೈವರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದೆ. ಆದರೆ, ಅದು ಆಗುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

Exit mobile version