ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysore Dasara 2022) ಆರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರವೂ ವೈವಿದ್ಯಮಯ ಕಾರ್ಯಕ್ರಮಕ್ಕೆ ಉತ್ಸವ ಸಾಕ್ಷಿಯಾಯಿತು. ಶಾಲಾ ಮಕ್ಕಳಿಗಾಗಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಭಾರಿ ಉತ್ಸಾಹದೊಂದಿಗೆ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಭಾಗವಹಿಸಿದ್ದರು.
ಮೈಸೂರು ಅರಮನೆ, ಮಹಿಷಾಸುರ, ದೊಡ್ಡ ಗಡಿಯಾರ, ಕೆಂಪುಕೋಟೆ, ಜಂಬೂ ಸವಾರಿ, ಭಗತ್ ಸಿಂಗ್, ಸರ್. ಎಂ.ವಿಶ್ವೇಶ್ವರಯ್ಯ, ಗಂಡಭೇರುಂಡ, ಅಂಬಾರಿ, ಪುನೀತ್ ರಾಜಕುಮಾರ್, ಡಾ.ಬಿ.ಆರ್.ಅಂಬೇಡ್ಕರ್, ಚಾಮುಂಡಿಬೆಟ್ಟ, ನಂದಿ ಹೀಗೆ ತರಹೇವಾರಿ ಚಿತ್ರಗಳ ರಚನೆ ಮಾಡಿದ ಪುಟಾಣಿಗಳು ಗಮನ ಸೆಳೆದರು.
ಇದೇ ಸಮಯದಲ್ಲಿ ಕಲಾ ಮಂದಿರದಲ್ಲೇ ನಡೆದ ನೇಯ್ಗೆ ಕಲೆಗೆ ಮೆಚ್ಚುಗೆ ಸೂಚಿಸಿದ ಸಚಿವ ಸೋಮಶೇಖರ್, 23 ಟವಲ್‌ಗಳ ಖರೀದಿ ಮಾಡಿದರು. ಈ ವೇಳೆ ಮಾತನಾಡಿದ ಅವರು ಮಕ್ಕಳ ಕಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ 23 ಟವಲ್ ಅಷ್ಟೆ ಇತ್ತು, ಇನ್ನೂ ಹೆಚ್ಚಾಗಿದ್ದರೆ ಅವುಗಳನ್ನೂ ತೆಗೆದುಕೊಳ್ಳುತ್ತಿದ್ದೆ ಎಂದು ಕಲಾವಿದರಿಗೆ ಪ್ರೋತ್ಸಾಹಿಸಿದರು.
ವಿಂಟೇಜ್ ಕಾರ್‌ನಲ್ಲಿ ಸಚಿವ ಸೋಮಶೇಖರ್ ರೈಡ್
ದಸರಾ ಮಹೋತ್ಸವದಲ್ಲಿಂದು ವಿಂಟೇಜ್ ಕಾರ್ ಶೋ ಕೂಡ ಕೇಂದ್ರ ಬಿಂದುವಾಗಿತ್ತು. ಸಚಿವ ಎಸ್.ಟಿ. ಸೋಮಶೇಖರ್ ವಿಂಟೇಂಜ್ ಕಾರ್‌ವೊಳಗೆ ಕುಳಿತು ಖುಷಿ, ಫೋಟೊಗೆ ಪೋಸ್ ಕೊಟ್ಟರು.ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿ ಗೋಪಿನಾಥ್ ಶೆಣೈ ಎಂಬುವರು ವಿಂಟೇಜ್ ಕಾರ್ ಶೋ ಆಯೋಜಿಸಿದ್ದರು. ಐತಿಹಾಸಿಕ ಕಾರುಗಳು ನೋಡುಗರ ಕಣ್ಮನ ಸೆಳೆದ್ದವು. ವಿವಿಧ ಕಂಪನಿಗಳ ಹೆಚ್ಚು ಬೆಲೆಬಾಳುವ ಮತ್ತು ಅಷ್ಟೇ ಹಳೆಯದಾಗಿರುವ 30 ಕಾರು, 20 ಬೈಕ್‌ಗಳನ್ನು ಪ್ರದರ್ಶನ ಮಾಡಲಾಗಿದೆ.
ಕಾರ್‌ಗಳ ಕ್ರೇಜ್ ಹೊಂದಿರುವ ಗೋಪಿನಾಥ್ ಶೆಣೈ 1930ರಿಂದ ಕಲೆಕ್ಷನ್ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಚಿಂತನೆಯಲ್ಲಿ ಇರುವುದಾಗಿ ಉದ್ಯಮಿ ಗೋಪಿನಾಥ್ ಶೆಣೈ ತಿಳಿಸಿದ್ದಾರೆ.
ಪಾರಂಪರಿಕ ನಡಿಗೆ
ಬೆಳ್ಳಂ ಬೆಳ್ಳಗೆ ಪಾರಂಪರಿಕ ನಡಿಗೆ ಕಾರ್ಯಕ್ರಮವು ನಡೆಯಿತು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ನಡಿಗೆ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವದ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ದೊಡ್ಡ ಗಡಿಯಾರ, ಪ್ರಿಮೇಶನ್, ಕಬ್, ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್‌ಟಿಟ್ಯೂಟ್, ಎಂಪೋರಿಯಮ್, ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಯುರ್ವೇದ ಕಾಲೇಜು ಮಾರ್ಗದಲ್ಲಿ ಕೈಗೊಂಡಿದ್ದ ಪಾರಂಪರಿಕ ನಡಿಗೆಯಲ್ಲಿ ಕಟ್ಟಡಗಳ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.
ಇವೆಲ್ಲದರ ಜತೆಗೆ ರೈತ ದಸರಾದಲ್ಲಿ ನೂರಾರು ರೈತರು ಮೂಟೆ ಹೊತ್ತು ಓಡುವ ಸ್ಪರ್ಧೆ ಹಾಗೂ ಗೋಣಿ ಚೀಲ ಜಿಗಿತ, ಬಿಲ್ಲುಗಾರಿಕೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಹಾಗೆ ರಾಘವೇಂದ್ರ ಸ್ವಾಮೀಜಿಯವರ ಜೀವನಚರಿತ್ರೆ ಕುರಿತ ಬೊಂಬೆಗಳ ಪ್ರದರ್ಶನ ಗಮನ ಸೆಳೆದವು.
ಇದನ್ನೂ ಓದಿ | Mysuru dasara | ದಸರಾ ಗೋಲ್ಡ್ ಕಾರ್ಡ್ ಕಾಳಸಂತೆ ದಂಧೆ, 5000 ರೂ. ಕಾರ್ಡ್ ಡಬಲ್ ರೇಟಿಗೆ ಮಾರಾಟ, ತನಿಖೆಗೆ ಆದೇಶ