Site icon Vistara News

Mysore Dasara 2022 | ಮೈಸೂರು ಫಲಪುಷ್ಪ ಪ್ರದರ್ಶನ; ಗುಲಾಬಿ ರಂಗಲ್ಲಿ ಕಂಗೊಳಿಸಲಿದೆ ರಾಷ್ಟ್ರಪತಿ ಭವನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾವು (Mysore Dasara 2022) ಈ ವರ್ಷ ಹಲವು ವಿಶೇಷತೆ, ಅದ್ಧೂರಿತನವನ್ನು ಹೊಂದಿದ್ದು, ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ ರಾಷ್ಟ್ರಪತಿ ಭವನವು ಗುಲಾಬಿಯಲ್ಲಿ ನಿರ್ಮಾಣವಾಗಲಿದೆ.

ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡುವುದು ದಸರಾ ಫಲಪುಷ್ಪ ಪ್ರದರ್ಶನ. ಹೀಗಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನಾಡಹಬ್ಬ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗುವುದರಿಂದ ವಿಶೇಷ ಹೂವುಗಳಿಂದ ರಾಷ್ಟ್ರಪತಿ ಭವನ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ.

ಕುಪ್ಪಣ್ಣ ಉದ್ಯಾನದ ಗ್ಲಾಸ್ ಹೌಸ್‌ನಲ್ಲಿ ಗುಲಾಬಿ ಹೂವುಗಳಿಂದ ರಾಷ್ಟ್ರಪತಿ ಭವನ ಅನಾವರಣಗೊಳ್ಳಲಿದೆ. ಸುಮಾರು 5-6 ಲಕ್ಷ ಗುಲಾಬಿ ಹೂವುಗಳಿಂದ ಸಿಂಗಾರಗೊಳ್ಳಲಿದೆ. ಸೆ‌.೨೫ರಿಂದ ಅ.೫ರವರೆಗೆ ಒಟ್ಟು ಹತ್ತು ದಿನಗಳ ಪ್ರದರ್ಶನ ಇರಲಿದೆ.

ಪುನೀತ್‌ ಪ್ರತಿಮೆ-ಸೆಲ್ಫಿ ಬೋರ್ಡ್‌

ದಿವಂಗತ ಡಾ.ಪುನೀತ್ ರಾಜಕುಮಾರ್ ಪ್ರತಿಮೆಯೂ ನಿರ್ಮಾಣವಾಗಲಿದ್ದು, ಸೆಲ್ಫಿ ಪಾಯಿಂಟ್ ಕೂಡ ಹೂವಿನಿಂದ ಅಲಂಕಾರಗೊಳ್ಳಲಿದೆ. ಇದಕ್ಕಾಗಿ ತೋಟಗಾರಿಕಾ ಇಲಾಖೆಯು 50 ಸಾವಿರಕ್ಕೂ ಹೆಚ್ಚು ಹೂ ಕುಂಡಗಳಲ್ಲಿ ಗಿಡ ಬೆಳೆಸಿದೆ. ಸಂಪಿಗೆ, ಲಿಲ್ಲಿ, ಡೇರ, ಬ್ಲೂಬೆಲ್, ಆರ್ಕಿಡ್, ದಾಸವಾಳ, ಚಂಡು ಹೂವು ಸೇರಿದಂತೆ ಬಗೆಬಗೆಯ ಹೂವಿನ ಗಿಡಗಳನ್ನು ಸಿಬ್ಬಂದಿ ಜೋಡಿಸುತ್ತಿದ್ದಾರೆ.

ದರ್ಬಾರ್‌ಗೆ ಸಿಂಹಾಸನ ಜೋಡಣೆ

ನವರಾತ್ರಿ ವೇಳೆ ಸಿಂಹಾಸನದ ಮೇಲೆ ಕುಳಿತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದರ್ಬಾರ್ ನಡೆಸಲಿದ್ದಾರೆ. ಹೀಗಾಗಿ ಮಂಗಳವಾರ ಅರಮನೆಯ ಒಳಾಂಗಣದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಸಲಾಯಿತು. ಸಾಂಪ್ರದಾಯಿಕವಾಗಿ ರಾಜವಂಶಸ್ಥರ ಸಮ್ಮುಖದಲ್ಲಿ ಜೋಡಣೆ ಕಾರ್ಯ ನಡೆಯಲಿದ್ದು, ಈ ವೇಳೆ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ವರ್ಷಪೂರ್ತಿ ಅರಮನೆ ಖಜಾನೆಯಲ್ಲಿರುವ ಸಿಂಹಾಸನದ ಬಿಡಿ ಭಾಗಗಳನ್ನು ಅರಮನೆ ಸಿಬ್ಬಂದಿ ಜೋಡಿಸಿ, ನವರಾತ್ರಿಯ ಶುಭ ಮುಹೂರ್ತದಲ್ಲಿ ಸಿಂಹದ ಮೂರ್ತಿಯನ್ನು ಆಸನಕ್ಕೆ ಒರಗಿಸಿ ಇಟ್ಟು ವೇದ ವಿದ್ವಾಂಸರು ಸಿಂಹ ಶಕ್ತಿಯ ಆರೋಹಣ ಮಾಡಲಿದ್ದಾರೆ. ನವರಾತ್ರಿಯಂದು ಈ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕುಳಿತು ದರ್ಬಾರ್‌ ನಡೆಸಲಿದ್ದಾರೆ.

ಇದನ್ನೂ ಓದಿ | Mysore Dasara 2022 | ಗಜಪಡೆ ಮಾವುತ ಮತ್ತು ಕಾವಾಡಿಗಳಿಗೆ ಉಪಾಹಾರ

Exit mobile version