ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮಂಗಳವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.
ಹಸಿರು ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಗಮನ ಸೆಳೆದ ನಾದಸ್ವರ, ವೇದಘೋಷಗಳು
ಮೆರವಣಿಗೆ ಮಾರ್ಗದುದ್ದಕ್ಕೂ ನಾದಸ್ವರ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ದಳ ಹಾಗೂ ವೇದಘೋಷಗಳು ಮೊಳಗಿದವು. ಮೆರವಣಿಗೆ ಉದ್ದಕ್ಕೂ ಕಲಾ ತಂಡಗಳು ಮೆರುಗನ್ನು ತಂದವು. ಕಂಸಾಳೆ ನೃತ್ಯ ಸೇರಿದಂತೆ ನಾದಸ್ವರಗಳು ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಜಯಮಾರ್ತಾಂಡ ದ್ವಾರ ಮುಖಾಂತರ ಅರಮನೆ ಪ್ರವೇಶ ಮಾಡಿದ ಉತ್ಸವ ಮೂರ್ತಿಯನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಬರಮಾಡಿಕೊಂಡರು. ಈ ವೇಳೆ ಮೈಸೂರು ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.
ರಾಜವಂಶಸ್ಥರಿಗೆ ಉತ್ಸವ ಮೂರ್ತಿ ಹಸ್ತಾಂತರ
ಬೆಳ್ಳಿ ರಥದ ಮೂಲಕ ಅರಮನೆಯನ್ನು ಪ್ರವೇಶ ಮಾಡಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಜಿಲ್ಲಾಡಳಿತವು ರಾಜವಂಶಸ್ಥರಿಗೆ ಹಸ್ತಾಂತರ ಮಾಡಿತು. ಇನ್ನು ದಸರೆಯ ಕೊನೇ ದಿನ ಆಗಿದ್ದರಿಂದ ಭಾರಿ ಜನಸ್ತೋಮವೇ ಸೇರಿದೆ.
ನಂದಿ ಪೂಜೆಯೊಂದಿಗೆ ಜಂಬೂ ಸವಾರಿಗೆ ಚಾಲನೆ
ಮಧ್ಯಾಹ್ನ 1.46 ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಪೂಜೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉದ್ಘಾಟಕ ಹಂಸಲೇಖ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ. ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ಈ ಪೂಜೆ ನಡೆಯಲಿದೆ. ನಂತರ ತೆರೆದ ವಾಹನದಲ್ಲಿ ಅರಮನೆ ಮುಂಭಾಗ ಬರಲಿರುವ ಸಿಎಂ ಹಾಗೂ ಸಚಿವರಿಂದ ಜಂಬೂ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಅರಮನೆಯಲ್ಲಿ ಉತ್ತರ ಪೂಜೆ ಆರಂಭ
ಅರಮನೆಯಲ್ಲಿಯೂ ಸಹ ವಿಜಯ ದಶಮಿ ಪೂಜಾ ಕೈಂಕರ್ಯ ಆರಂಭವಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಉತ್ತರ ಪೂಜೆಯನ್ನು ಆರಂಭಿಸಿದ್ದಾರೆ. ಅರಮನೆ ಕಲ್ಯಾಣ ಮಂಟಪದಲ್ಲಿ ಈ ಉತ್ತರ ಪೂಜೆ ನಡೆಯುತ್ತಿದ್ದು, ರಾಜಪರಂಪರೆಯ ಪಟ್ಟದ ಕತ್ತಿ ಸಂಪ್ರದಾಯದ ಪೂಜೆಯನ್ನು ಮೊದಲು ನೆರವೇರಿಸಿದರು.
ಇದನ್ನೂ ಓದಿ: Mysore Dasara: ಮಟ್ಟಿಗೆ ರಕ್ತ ಬಿದ್ದ ಮೇಲೆಯೇ ಮಹಾರಾಜರ ವಿಜಯಯಾತ್ರೆ! ಇದೇನು ʼವಜ್ರಮುಷ್ಟಿ ಕುಸ್ತಿʼ ಆಚರಣೆ?
ಈ ವೇಳೆ ರಾಜ ಪುರೋಹಿತರಿಂದ ವೇದ ಘೋಷಗಳು ಮೊಳಗಿದವು. ನಾದ ಸ್ವರದ ಹಿಮ್ಮೇಳದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಲಾಗುತ್ತಿದೆ. ರಾಜ ಪೋಷಾಕಿನಲ್ಲಿ ಪರಿವಾರದವರು ಕಂಗೊಳಿಸುತ್ತಿದ್ದಾರೆ. ರಾಜ ಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ, ರಾಣಿ ತ್ರಿಷಿಕಾ ಹಾಗೂ ಪುತ್ರ ಆದ್ಯವೀರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದು, ವೀಕ್ಷಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಉತ್ಸವವು ಕಳೆಗಟ್ಟಿದೆ.