Site icon Vistara News

Mysore Dasara : ಅ. 24ಕ್ಕೆ ಮೈಸೂರು ದಸರೆಗೆ ತೆರೆ; ಕಣ್ಮನ ಸೆಳೆಯಲಿವೆ ಜಂಬೂ ಸವಾರಿ, ಪಂಜಿನ ಕವಾಯತು

Jumboo Savari in mysore dasara

ಬೆಂಗಳೂರು: ಜಗತ್‌ ಪ್ರಸಿದ್ಧ ಮೈಸೂರು ದಸರಾ (Mysore Dasara) ಉತ್ಸವವು ಅದ್ಧೂರಿ ತೆರೆಗೆ ಸಿದ್ಧವಾಗುತ್ತಿದೆ. ಅಕ್ಟೋಬರ್‌ 24ರ ಮಂಗಳವಾರ ವಿಜಯದಶಮಿಯಂದು (Vijayadashami) ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಜಂಬೂ ಸವಾರಿ (Jumboo Savari) ಹಾಗೂ ಪಂಜಿನ ಕವಾಯತಿನ (Panjina Kavayatthu) ಮೂಲಕ ಹತ್ತು ದಿನಗಳಿಂದ ನಡೆಯುತ್ತಿದ್ದ ನವರಾತ್ರಿಯ ದಸರೆ ಮುಕ್ತಾಯಗೊಳ್ಳಲಿದೆ.

ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ಸಹ ಪೂರ್ಣಗೊಂಡಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗಲಿದೆ. ಈ ಹಿನ್ನೆಲೆಯಲ್ಲಿ ಗಜಪಡೆಗಳು ಸಾಗುವ ಮಾರ್ಗವನ್ನು ಅಂದಗೊಳಿಸಲಾಗಿದೆ. ರಾಜ ಬೀದಿಯಲ್ಲಿ ಸಾಗುವ ಅಂಬಾರಿಗೆ ಸುಲಲಿತ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಅರಮನೆ ಬಲರಾಮ ದ್ವಾರದಿಂದ ಬನ್ನಿ ಮಂಟಪದವರೆಗೆ ರಾಜಬೀದಿಯನ್ನು ಸಿಂಗಾರ ಮಾಡಲಾಗಿದೆ. ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಜಂಬೂ ಸವಾರಿಯನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಜಂಬೂ ಸವಾರಿ ಸಾಗುವ ಹಾದಿಯಲ್ಲಿ ಬಂಬುಗಳು ಹಾಗೂ ಜಾಲರಿಗಳನ್ನು ಜಿಲ್ಲಾಡಳಿತ ಹಾಕಿದೆ. ಕಾರಣ ಅಂಬಾರಿ ಮೇಲೆ ಯಾವುದೇ ವಸ್ತು ಎಸೆಯುವುದನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Mysore Dasara : ಜಂಬೂ ಸವಾರಿ ಆನೆಗಳಿಗೆ ವಿಮೆ! ಜೀವಹಾನಿಗೂ ಇದೆ ಇನ್ಶೂರೆನ್ಸ್‌; ಯಾವುದಕ್ಕೆ ಎಷ್ಟೆಷ್ಟು?

ಮುಖ್ಯಮಂತ್ರಿಯಿಂದ ನಂದಿಧ್ವಜ ಪೂಜೆ ಮೂಲಕ ಚಾಲನೆ

ಅ.24ರ ಮಂಗಳವಾರ ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಂದಿಧ್ವಜ ಪೂಜೆಯನ್ನು ನೆರವೇರಿಸುವ ಮೂಲಕ ಪ್ರಸಕ್ತ ಸಾಲಿನ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಜಂಬೂ ಸವಾರಿಗೆ ಚಾಲನೆ

ಸಂಜೆ 4.40 ರಿಂದ 5 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಒಳಾವರಣದಲ್ಲಿ ಸಿದ್ಧಪಡಿಸಲಾದ ವಿಶೇಷ ವೇದಿಕೆಯಲ್ಲಿ ನಿಲ್ಲುವ ಸಿಎಂ ಸಿದ್ದರಾಮಯ್ಯ ಅವರು ಅಭಿಮನ್ಯು ಹೊತ್ತಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಕುಳಿತಿರುವ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಇತರರು ಸಾಥ್‌ ನೀಡಲಿದ್ದಾರೆ.

ಬಳಿಕ ಕ್ಯಾಪ್ಟನ್‌ ಅಭಿಮನ್ಯು ತನ್ನ ಸಹಚರರಾದ ವಿಜಯ ಹಾಗೂ ವರಲಕ್ಷ್ಮಿ ಜತೆ ಹೆಜ್ಜೆ ಹಾಕಲಿದ್ದಾನೆ. ಐದು ಕಿ.ಮೀ.ವರೆಗೆ ಸಾಗಲಿರುವ ಈ ಮೆರವಣಿಗೆಯು ಬನ್ನಿಮಂಟಪವನ್ನು ತಲುಪಲಿದೆ.

ಗಮನ ಸೆಳೆಯುವ ಸ್ತಬ್ದಚಿತ್ರಗಳು, ಕಲಾ ತಂಡಗಳು!

ಜಂಬೂ ಸವಾರಿ ವೇಳೆ ಸ್ತಬ್ಧ ಚಿತ್ರಗಳು ಗಮನ ಸೆಳೆಯಲಿವೆ. ರಾಜ್ಯದ 31 ಜಿಲ್ಲೆಗಳ ಕಲೆ, ಸಂಸ್ಕೃತಿ ಬಿಂಬಿಸುವ ಈ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ. ಇವುಗಳ ಮಧ್ಯೆ ಮಧ್ಯೆ ಜಾನಪದ ಕಲಾ ತಂಡಗಳು ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಳ ಮಾಡುತ್ತವೆ. ಹಾಗೆಯೇ ನಂದಿಧ್ವಜ, ವೀರಗಾಸೆ, ನಾದಸ್ವರ, ನೌಫತ್‌, ನಿಶಾನೆ ಆನೆಗಳು, ಎನ್‌ಸಿಸಿ, ಸ್ಕೌಟ್ಸ್‌, ಗೈಡ್ಸ್‌, ವಿವಿಧ ಪೊಲೀಸ್‌ ತುಕಡಿಗಳು ಸಹ ಸಾಗಲಿವೆ.

ಪಂಜಿನ ಕವಾಯತು ಮೂಲಕ ತೆರೆ

ಸಂಜೆ 7.30ಕ್ಕೆ ಪಂಜಿನ ಕವಾಯತು ಆರಂಭವಾಗಲಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ. ಇದರೊಂದಿಗೆ ನಾಡಹಬ್ಬ ದಸರಾಕ್ಕೆ ತೆರೆ ಬೀಳಲಿದೆ.

ಸಿಎಂ ಸಿದ್ದರಾಮಯ್ಯಗೆ ಇದು ಆರನೇ ಅವಕಾಶ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರೇ ಆಗಿದ್ದಾರೆ. ಮುಖ್ಯಮಂತ್ರಿಯಾಗಿ ಆರನೇ ಬಾರಿ ಜಂಬೂಸವಾರಿಗೆ ಚಾಲನೆ ನೀಡುವ ಅವಕಾಶವನ್ನು ಸಿದ್ದರಾಮಯ್ಯ ಅವರು ಪಡೆದಂತಾಗಿದೆ. ಇನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಎಚ್‌.ಸಿ. ಮಹದೇವಪ್ಪ ಅವರಿಗೆ ಇದು 3ನೇ ದಸರಾ ಸಂಭ್ರಮ ಆಗಿದೆ.

ಆಸನ ವ್ಯವಸ್ಥೆ ಇದೆ

ಜಂಬೂ ಸವಾರಿ ವೀಕ್ಷಣೆ, ಸ್ತಬ್ಧಚಿತ್ರಗಳ ಮೆರವಣಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿವಿಐಪಿ, ವಿಐಪಿ, ಆಹ್ವಾನಿತ ಗಣ್ಯರು, ಗೋಲ್ಡ್‌ ಕಾರ್ಡ್‌ ಸೇರಿದಂತೆ ಟಿಕೆಟ್‌ ಪಡೆದವರಿಗೆ ಅರಮನೆ ಆವರಣದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿ ಪುರಭವನ, ನಗರ ಬಸ್‌ ನಿಲ್ದಾಣ ಎದುರಿನ ಪಾದಚಾರಿ ಮಾರ್ಗದಲ್ಲಿ ಆಸನಗಳನ್ನು ಕಲ್ಪಿಸಲಾಗಿದೆ.

ಹೆಚ್ಚಿದ ಪ್ರವಾಸಿಗರ ಸಂಖ್ಯೆ

ಜಂಬೂಸವಾರಿ ವೀಕ್ಷಣೆಗೆ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಸಂಬಂಧ ದೇಶ- ವಿದೇಶಗಳ ಪ್ರವಾಸಿಗರ ದಂಡೇ ಮೈಸೂರಿಗೆ ಆಗಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಬಹುತೇಕ ಎಲ್ಲ ಹೋಟೆಲ್‌ಗಳು ಭರ್ತಿಯಾಗಿದ್ದು, ಎಲ್ಲಿಯೂ ಸಹ ರೂಮುಗಳು ಸಿಗುತ್ತಿಲ್ಲ. ಇನ್ನು ಮನೆಗಳಲ್ಲಿ ಅವರವರ ಸಂಬಂಧಿಕರು ಬಂದು ಆಶ್ರಯ ಪಡೆದಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ, ದಶಮಿ ಸಂಬಂಧ ಇರುವ ಸಾಲು ರಜೆಗಳು, ಶಕ್ತಿ ಯೋಜನೆಯಡಿ ಉಚಿತ ಬಸ್‌ ಸೌಕರ್ಯ ಇರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯ್ತಿ

ಅಂತಾರಾಜ್ಯ ವಾಹನಗಳಿಗೆ ಮೈಸೂರು ಹಾಗೂ ಕೆಆರ್‌ಎಸ್‌ ವೀಕ್ಷಣೆಗೆ ತೆರಿಗೆ ವಿನಾಯ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿರುವುದರಿಂದ ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

ಇದನ್ನೂ ಓದಿ: Mysore Dasara : ಅಂತಿಮ ಘಟ್ಟದತ್ತ ಮೈಸೂರು ದಸರಾ; ಅ. 23 – 24ರ ಅರಮನೆ ಕಾರ್ಯಕ್ರಮಗಳಿವು

ಆಕರ್ಷಿಸುವ ದೀಪಾಲಂಕಾರ – ಆಹಾರ ಮೇಳ

ವಿದ್ಯುತ್‌ ದೀಪಾಲಂಕಾರಗಳು ಗಮನ ಸೆಳೆಯುತ್ತಲಿವೆ. ಇಡೀ ಮೈಸೂರು ದೀಪಗಳಿಂದ ಝಗಮಗಿಸುತ್ತಿವೆ. ಅರಮನೆ ಸಹಿತ ಬೀದಿ ಬೀದಿಗಳು ರಾತ್ರಿ ವೇಳೆ ಪ್ರಕಾಶಮಾನವಾಗಿ ಕಾಣುತ್ತಲಿದೆ. ಇದರ ಜತೆಗೆ ಆಹಾರ ಮೇಳ ಹಾಗೂ ಫಲಪುಷ್ಪ ಪ್ರದರ್ಶನವು ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಅರಮನೆ ಎದುರು ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಹೆಚ್ಚಿನ ನಾಗರಿಕರು ಆಗಮಿಸಿ ವೀಕ್ಷಿಸುತ್ತಿದ್ದಾರೆ. ಯುವ ದಸರಾ, ಪುಸ್ತಕಮೇಳ, ಕುಸ್ತಿ, ಕ್ರೀಡಾಕೂಟಗಳು, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ ಮತ್ತು ರೈತ ದಸರಾಗಳು ಸಹ ಗಮನ ಸೆಳೆದಿವೆ.

Exit mobile version