ಮೈಸೂರು: ಐತಿಹಾಸಿಕ 414ನೇ ದಸರಾ ಮಹೋತ್ಸವ (Mysore Dasara) ಅಂತಿಮ ಘಟ್ಟವನ್ನು ತಲುಪಿದೆ. ಮಂಗಳವಾರ (ಅಕ್ಟೋಬರ್ 24) ಸಂಜೆ 4.40ರಿಂದ 5ರವರೆಗೆ ಸಂದ ಶುಭ ಮೀನ ಲಗ್ನದಲ್ಲಿ (Meena Lagna) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತಿರುವ ಮಾತೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆ ಅಂಗಳದಲ್ಲಿ ಕ್ಯಾಪ್ಟನ್ ಅಭಿಮನ್ಯು (Captain Abhimanyu) ಹೊತ್ತು ತಂದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ಮೂರ್ತಿಗೆ (Chamundeshwari Statue) ಸಮೀಪಿಸುತ್ತಿದ್ದಂತೆ ಪುಷ್ಪಾರ್ಚನೆ ಸಲ್ಲಿಸಿ, ದೇವಿಗೆ ಕೈಮುಗಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar), ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಾಥ್ ನೀಡಿದರು.
ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ವೇದಿಕೆಯತ್ತ ಬಂದು ನಿಂತ ಬಳಿಕ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ತಕ್ಷಣವೇ 21 ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಗೌರವವನ್ನು ಅರ್ಪಿಸಲಾಯಿತು.
ಇದಾದ ಬಳಿಕ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಪ್ರಯಾಣ ಬೆಳೆಸಿದ. ಈ ವೇಳೆ ಲಕ್ಷ್ಮಿ ಹಾಗೂ ವಿಜಯ ಆನೆಗಳು ಕುಮ್ಕಿ ಆನೆಗಳಾಗಿ ಅಂಬಾರಿಯ ಎಡ-ಬಲದಲ್ಲಿ ಸಾಗಿದರೆ, ಗಜಪಡೆಯ ಹಿರಿಯಣ್ಣ, ಮಾಜಿ ಕ್ಯಾಪ್ಟನ್ ಅರ್ಜುನ ನಿಶಾನೆ ಆನೆಯಾಗಿ, ಧನಂಜಯ ನೌಫತ್ ಆನೆಯಾಗಿ ಮತ್ತು ಇನ್ನುಳಿದವು ಸಾಲಾನೆಯಾಗಿ ಪಾಲ್ಗೊಂಡು ಗಮನ ಸೆಳೆದವು. ಇನ್ನು ಅಂಬಾರಿ ಜತೆ 200 ಮಂದಿ ರಾಜ ಪರಿವಾರದ ಧಿರಿಸಿನೊಂದಿಗೆ ಸಾಗಿದ್ದು ಮತ್ತೊಂದು ಆಕರ್ಷಣೆಯಾಗಿತ್ತು.
ಇದನ್ನೂ ಓದಿ: Mysore Dasara : ನೆರವೇರಿದ ನಂದಿ ಪೂಜೆ; ವಿಜಯ ದಶಮಿ ಜಂಬೂ ಸವಾರಿಗೆ ಮುನ್ನುಡಿ ಬರೆದ ಸಿಎಂ
ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಒಟ್ಟು 5 ಕಿ.ಮೀ. ದೂರದ ವರೆಗೆ ಜಂಬೂ ಸವಾರಿ ಸಾಗಲಿದೆ. ಜಂಬೂ ಸವಾರಿಯ ಹಿಂಬದಿಯಿಂದ 49 ಸ್ತಬ್ಧ ಚಿತ್ರಗಳು, 50ಕ್ಕೂ ಹೆಚ್ಚು ಕಲಾತಂಡಗಳು, ಪೊಲೀಸ್ ಬ್ಯಾಂಡ್ ಪಡೆಗಳು ಸೇರಿ ಒಟ್ಟು 150 ಪ್ರಾಕಾರಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ.
ಬ್ಯಾರಿಕೇಡ್ ಕೋಟೆಯೇ ನಿರ್ಮಾಣ
ರಾಜಪಥದಲ್ಲಿ ಜಂಬೂ ಸವಾರಿ ಸಾಗುವುದರಿಂದ ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅನ್ನು ಅಳವಡಿಕೆ ಮಾಡಲಾಗಿದೆ. ರಾಜಪಥದ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸರ್ ಎಂ. ವಿಶ್ವೇಶ್ವರಯ್ಯ ವೃತ್ತಗಳಲ್ಲಿ ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಬ್ಯಾರಿಕೇಡ್ ಕೋಟೆಯನ್ನೇ ನಿರ್ಮಾಣ ಮಾಡಲಾಗಿದೆ.
ಅರಮನೆಯಲ್ಲಿ 25 ಸಾವಿರ ಆಸನ ವ್ಯವಸ್ಥೆ
ಜಂಬೂ ಸವಾರಿ ವೀಕ್ಷಣೆಗೆಂದು ಅರಮನೆ ಅಂಗಳದಲ್ಲಿ 25ರಿಂದ 30 ಸಾವಿರ ಮಂದಿ ಕುಳಿತು ವೀಕ್ಷಣೆ ಮಾಡಲು ಆಸನ ವ್ಯವಸ್ಥೆ ಮಾಡಲಾಗಿದೆ. ರಾಜಪಥದಲ್ಲಿ 4ರಿಂದ 5 ಲಕ್ಷ ಜನ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದಾರೆ. ಅರಮನೆ ಆವರಣಕ್ಕೆ ಗೋಲ್ಡ್ ಪಾಸ್ ಸೇರಿದಂತೆ ಪಾಸ್ ಇದ್ದವರಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಮುಖ್ಯಮಂತ್ರಿ, ಸಂಪುಟ ಸಚಿವರು, ಸ್ಪೀಕರ್, ಶಾಸಕರಿಗೆ ವಿಶೇಷ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್ ಹೊಂದಿದವರಿಗೆ ಅರಮನೆ ಎದುರಿನಲ್ಲೇ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮೈಸೂರು ಸುತ್ತುವರಿದಿರುವ ಪೊಲೀಸರು!
ನಾಡ ಹಬ್ಬಕ್ಕೆ ಮೈಸೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಉಗ್ರರ ಕರಿನೆರಳಿನ ಆತಂಕ ಇರುವ ಹಿನ್ನೆಲೆಯಲ್ಲಿ ದಸರಾ ಭದ್ರತೆಗಾಗಿಯೇ ಒಟ್ಟು 6000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾಗಿ ನಡೆಸಲು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1255 ಪೊಲೀಸರು, ಹೊರ ಜಿಲ್ಲೆಯಿಂದ 3580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿದಂತೆ ಒಟ್ಟು 5485 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 50 ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ.
ಇದಲ್ಲದೆ, ಕೆ.ಎಸ್.ಆರ್.ಪಿ, ಡಿ.ಎ.ಆರ್. ಹಾಗೂ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜನೆ ಮಾಡಲಾಗಿದೆ. ಆಯಕಟ್ಟಿನಲ್ಲಿ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಅನುಮಾನಾಸ್ಪದ ನಡವಳಿಕೆಯುಳ್ಳವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಸಂಚಾರ ಬದ್
ಜಂಬೂ ಸವಾರಿ ಸಾಗುವ ದಾರಿಯ ಆಯಕಟ್ಟಿನ ಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆ ನಂತರ ಅರಮನೆ ಸುತ್ತ, ಜಂಬೂ ಸವಾರಿ ಸಾಗುವ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ: Mysore Dasara : ರೋಮಾಂಚನ ಮೂಡಿಸಿದ ಜಟ್ಟಿ ಕಾಳಗ; ಕೆಲವೇ ಸೆಕೆಂಡ್‌ಗಳಲಿ ರಕ್ತ ಚಿಮ್ಮಿಸಿದ ಜಟ್ಟಿಗಳು
ಪಂಜಿನ ಕವಾಯತು ಬಳಿಕ ತೆರೆ
ಜಂಬೂ ಸವಾರಿಯು ಅರಮನೆ ಆವರಣದಿಂದ ಬನ್ನಿಮಂಟಪಕ್ಕೆ ತೆರಳಿದ ತರುವಾಯ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಪ್ರಾರಂಭವಾಗಲಿದೆ. ಈ ವೇಳೆ ಸಾಹಸ ಪ್ರದರ್ಶನಗಳು ನಡೆಯಲಿದ್ದು, ಈ ಎಲ್ಲ ಪ್ರಹಸನಗಳ ಬಳಿಕ ಮೈಸೂರು ದಸರೆಗೆ ತೆರೆ ಬೀಳಲಿದೆ.