ಮೈಸೂರು: ಅದ್ಧೂರಿ ಮೈಸೂರು ದಸರಾ (Mysore Dasara) ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ದಿನೇ ದಿನೆ ರಂಗುಪಡೆದುಕೊಳ್ಳುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಜಾತ್ರೆಯೇ ಮೇಳೈಸುತ್ತಿದ್ದು, ಗ್ರಾಮೀಣ, ಯೋಗ ದಸರಾಗಳಿಗೆ ಗುರುವಾರ ಚಾಲನೆ ದೊರೆತಿದೆ. ಅಲ್ಲದೆ, ಮುಂಜಾನೆ ಕ್ರೀಡಾ ಜ್ಯೋತಿ ಬೆಳಗಿದ್ದು, ಸಂಜೆ ನಡೆಯುವ ಕ್ರೀಡಾ ದಸರಾ ಕಾರ್ಯಕ್ರಮವನ್ನು ಇದೇ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಉದ್ಘಾಟನೆ ಮಾಡಲಾಗುವುದು.
ಗ್ರಾಮೀಣ ದಸರಾಕ್ಕೆ ಚಾಲನೆ
ಮೈಸೂರಿನ ಜಯಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಸಾಂಸ್ಕೃತಿಕ ಕಲಾತಂಡಗಳ ಜತೆಗೆ ಆನೆ, ಕುದುರೆ ಮೆರವಣಿಗೆಯು ಕಾರ್ಯಕ್ರಮಕ್ಕೆ ರಂಗು ತಂದಿತ್ತು.
ನಾಡಹಬ್ಬ ದಸರಾ ನಗರಕ್ಕಷ್ಟೇ ಸೀಮಿತವಾಗಬಾರದು. ಗ್ರಾಮಗಳಲ್ಲಿ ಕೂಡ ಇದರ ಸಂಭ್ರಮ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣ ದಸರಾವನ್ನು ನಡೆಸಲು ಉದ್ದೇಶಿಸಲಾಗಿದ್ದು, ಗ್ರಾಮೀಣ ಭಾಗದ ಜನರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯೋಗ ದಸರೆಗೆ ಚಾಲನೆ
ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. ವಸ್ತು ಪ್ರದರ್ಶನ ಆವರಣದ ಕಾಳಿಂಗರಾವ್ ಸಭಾಂಗಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯೋಗ ದಸರಾ ಉಪಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದು, ಎಲ್ಲ ವಯೋಮಿತಿಯ ಸ್ಪರ್ಧಿಗಳು ಭಾಗಿಯಾಗಿದ್ದರು.
ಬೆಳಗಿತು ದಸರಾ ಕ್ರೀಡಾ ಜ್ಯೋತಿ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗಿಸಿದರು. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್, ಕ್ರೀಡಾ ಸಚಿವ ನಾರಾಯಣಗೌಡ ಗುರುವಾರ ಸಂಜೆ ನಡೆಯಲಿರುವ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 4500 ಕ್ರೀಡಾಪಟುಗಳು ಆಗಮಿಸಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಶಾಸಕ ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಕ್ರೀಡಾಪಟುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | Mysuru Dasara | ಅಪ್ಪು ನಮನದ ಹೆಸರಿನ ಯುವ ದಸರಾಗೆ ಚಾಲನೆ, ಅಭಿಮಾನಿಗಳ ಸಂಭ್ರಮ