Site icon Vistara News

Mysore Dasara | ಗಜಪಡೆ ಸ್ವಾಗತಕ್ಕೆ ಕಂಸಾಳೆ‌ ನೃತ್ಯ; ಸದ್ದಿಗೆ ಬೆಚ್ಚಿ ಓಡಿದ ಅಶ್ವಪಡೆ

mysore dasara

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳೂ ಭರದಿಂದ ಸಾಗುತ್ತಿದೆ. ದಸರಾ ಭಾಗವಾದ ಗಜಪಡೆಗಳನ್ನು ಬುಧವಾರ (ಆ.೧೦) ಸ್ವಾಗತ ಮಾಡಿಕೊಳ್ಳಲಾಗಿದ್ದು, ಸ್ವಾಗತ ಕಾರ್ಯಕ್ರಮದ ವೇಳೆ ಕಂಸಾಳೆ ಸದ್ದಿಗೆ ಅಶ್ವಪಡೆಗಳು ಬೆಚ್ಚಿಬಿದ್ದು ಓಡಿದ ಪ್ರಸಂಗ ನಡೆದಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಗಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಲ್ಲಿಗೆ ಗಜಪಡೆಗಳು ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತವನ್ನು ಮಾಡಿಕೊಳ್ಳಲಾಯಿತು. ಈ ವೇಳೆ ಕಂಸಾಳೆ ನೃತ್ಯ ಮಾಡುತ್ತಿದ್ದಾಗ ಅದರದ ಸದ್ದಿಗೆ ಅಶ್ವಪಡೆಗಳು ಬೆದರಿವೆ. ಆನೆಗಳು ಅರಮನೆ ಪ್ರವೇಶ ಮಾಡುತ್ತಿದ್ದ ವೇಳೆ‌ ಕುದುರೆಗಳು ಈ ಶಬ್ದಕ್ಕೆ ದಿಕ್ಕೆಟ್ಟು ಓಡಾಡಲಾರಂಭಿಸಿವೆ. ಕಂಸಾಳೆ ಕಲಾವಿದರ ನಿಯಂತ್ರಣಕ್ಕೆ ಕುದುರೆ ಬಾರದೇ ಇದ್ದಿದ್ದರಿಂದ ಪೊಲೀಸರು ೩ ಕುದುರೆಗಳನ್ನು ಮೆರವಣಿಗೆ ಜಾಗದಿಂದ ದೂರಕ್ಕೆ ಕರೆದೊಯ್ದಿದ್ದಾರೆ.

ಅಭಿಮನ್ಯು ನೇತೃತ್ವದ 9 ಆನೆಗಳ ಪ್ರವೇಶ

ಇಲ್ಲಿನ ಅರಣ್ಯ ಭವನದಿಂದ 3.5 ಕಿಮೀ ನಡಿಗೆ ಮೂಲಕ ಆನೆಗಳು ಅರಮನೆ ಜಯಮಾರ್ತಾಂಡ ದ್ವಾರಕ್ಕೆ ಆಗಮಿಸಿದ್ದು, ಅವುಗಳಿಗೆ ಸರ್ಕಾರಿ ಗೌರವದೊಂದಿಗೆ ಸ್ವಾಗತ ಮಾಡಲಾಯಿತು. ಅಭಿಮನ್ಯು ನೇತೃತ್ವದ 9 ಆನೆಗಳು ಮೊದಲ ಹಂತದಲ್ಲಿ ಪ್ರವೇಶವನ್ನು ಮಾಡಿವೆ. ಇವುಗಳಿಗೆ ಹಲವು ಬಗೆಯ ಹಣ್ಣುಗಳು, ಕಾಯಿ, ಬೆಲ್ಲ, ಕಬ್ಬು, ಕಡುಬು ಇಟ್ಟು ಪೂಜೆ ನೆರವೇರಿಸಲಾಗಿದೆ.

ಇದನ್ನೂ ಓದಿ | Dasara 2022 | ಸಾಂಪ್ರದಾಯಿಕ, ಅದ್ಧೂರಿ, ಅಂತಾರಾಷ್ಟ್ರೀಯ ಮೈಸೂರು ದಸರಾ: ಸಿಎಂ ಸಭೆಯಲ್ಲಿ ತೀರ್ಮಾನ

ಅರಮನೆ ಆಡಳಿತ ಮಂಡಳಿ ವತಿಯಿಂದ 9.5ರ ಶುಭ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಗಜಪಡೆಗಳಿಗೆ ಪುಷ್ಟಾರ್ಚನೆ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್, ಶಾಸಕ ರಾಮದಾಸ್, ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ದಸರಾ ಉದ್ಘಾಟಕರು ಅಂತಿಮಗೊಂಡಿಲ್ಲ- ಸೋಮಶೇಖರ್

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕಾಗಿ ದಸರಾ ಸಮಿತಿ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ದಸರಾ ಉದ್ಘಾಟಕರು ಯಾರಾಗಬೇಕು ಎಂಬುದು ಅಂತಿಮಗೊಂಡಿಲ್ಲ. ಇದನ್ನು ಮುಖ್ಯಮಂತ್ರಿ ಅಂತಿಮಗೊಳಿಸುತ್ತಾರೆ. ಅದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಫಲಪುಷ್ಪ ಪ್ರದರ್ಶನ ಶೀಘ್ರ ಆರಂಭ

ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ದಸರಾ ವಸ್ತು ಪ್ರದರ್ಶನವೂ ಶೀಘ್ರ ಪ್ರಾರಂಭವಾಗುತ್ತದೆ. ಮೊದಲ ದಿನದ ಫಲಪುಷ್ಬ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ

Exit mobile version