Site icon Vistara News

Mysore Dasara: ಮಟ್ಟಿಗೆ ರಕ್ತ ಬಿದ್ದ ಮೇಲೆಯೇ ಮಹಾರಾಜರ ವಿಜಯಯಾತ್ರೆ! ಇದೇನು ʼವಜ್ರಮುಷ್ಟಿ ಕುಸ್ತಿʼ ಆಚರಣೆ?

vajramushti

ಮೈಸೂರು: ವಿಜಯ ದಶಮಿಯ ಜಂಬೂಸವಾರಿ ಉತ್ಸವಕ್ಕೆ (Mysore dasara) ಮುನ್ನ ಅರಮನೆಯ ವಿಧಿವಿಧಾನಗಳಲ್ಲಿ ವಜ್ರಮುಷ್ಟಿ (Vajramushti) ಜಟ್ಟಿ ಕಾಳಗವೂ ಒಂದಾಗಿದೆ. ಜಟ್ಟಿ ಕಾಳಗದಲ್ಲಿ (wrestling) ಜಟ್ಟಿಯೊಬ್ಬರ ರಕ್ತ ಮಟ್ಟಿಯ ಮಣ್ಣಿಗೆ ಬಿದ್ದ ಬಳಿಕವೇ ಮಹಾರಾಜರು ವಿಜಯಯಾತ್ರೆ ಹೊರಡುವುದು ಸಂಪ್ರದಾಯವಾಗಿದೆ.

ಈ ಸಂಪ್ರದಾಯ ಶತಮಾನದಿಂದ ನಡೆದುಕೊಂಡು ಬಂದಿದೆ ಎಂದು ಇಲ್ಲಿನ ಹಿರಿಯರು ತಿಳಿಸುತ್ತಾರೆ. ಹೀಗಾಗಿ ಅರಮನೆ ಆವರಣದಲ್ಲಿ ವಜ್ರ ಮುಷ್ಠಿ ಕುಸ್ತಿ ಕಾಳಗಕ್ಕೆ ತಯಾರಿ ನಡೆದಿದೆ. ಅರಮನೆಯ ಶ್ವೇತ ವರಾಹ ದೇವಸ್ಥಾನದ ಆವರಣಲ್ಲಿ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ.

ಜಟ್ಟಿ ಕಾಳಗಕ್ಕೆ ಎರಡು ಜೋಡಿ ಜಟ್ಟಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ. ಚನ್ನಪ್ಪಟ್ಟಣದ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ನಡುವೆ ಕಾಳಗ ನಡೆಯಲಿದೆ. ಕುಸ್ತಿ ನಡೆಸಲಿರುವ ಇನ್ನೊಂದು ಜೋಡಿಯೆಂದರೆ ಬೆಂಗಳೂರಿನ ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರದ ವೆಂಕಟೇಶ್ ಜಟ್ಟಿ. ಸಾಮಾನ್ಯವಾಗಿ ಈ ಜಟ್ಟಿಗಳು ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿರುತ್ತಾರೆ. ಇಬ್ಬರೂ ಜಟ್ಟಿಗಳು ಕೈಯಲ್ಲಿ ʼವಜ್ರಮುಷ್ಟಿʼ ಎಂದು ಕರೆಯಲಾಗುವ ಆಯುಧವನ್ನು ಧರಿಸಿಕೊಂಡಿರುತ್ತಾರೆ. ಇದೊಂದು ಸಣ್ಣ ಮುಳ್ಳುಗಳಿರುವ ಉಪಕರಣ. ಇದರಿಂದ ಪರಸ್ಪರ ಪ್ರಹಾರ ಮಾಡಿಕೊಳ್ಳುತ್ತಾರೆ.

ಇದೊಂದು ಸಾಂಪ್ರದಾಯಿಕ ಕುಸ್ತಿಯಾಗಿದ್ದು, ಇಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಇರುವುದಿಲ್ಲ. ಇದೊಂದು ಧಾರ್ಮಿಕ ವಿಧಿಯಾಗಿದೆ. ಎರಡು ಜೋಡಿ ಜಟ್ಟಿಗಳ ನಡುವೆ ಕುಸ್ತಿ ನಡೆದು ರಕ್ತ ಸಮರ್ಪಣೆ ಮಾಡಿದ ನಂತರ ಕಾಳಗ ಮುಗಿದಂತೆ. ಹೀಗೆ ರಕ್ತ ಚಿಮ್ಮಿಸಿದ ನಂತರವೇ ವಿಜಯದಶಮಿ ಮೆರವಣಿಗೆ ಆರಂಭವಾಗುತ್ತದೆ. ಹೀಗಾಗಿ ವಿಜಯದಶಮಿ ದಿನ ಚಾಮುಂಡೇಶ್ವರಿ ದೇವಿಗೆ ಶಿರಭಾಗದಿಂದ ಜಟ್ಟಿಗಳು ರಕ್ತಾರ್ಪಣೆ ಮಾಡುತ್ತಾರೆ.

ಅಮನೆಯ ಸವಾರಿ ತೊಟ್ಟಿಯಲ್ಲಿ ಕೂಷ್ಮಾಂಡ ಮತ್ತು ಉತ್ತರ ಪೂಜೆ ನೆರವೇರಿಸಿದ ಬಳಿಕ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಅವರು ಸಂಪ್ರದಾಯದಂತೆ ಬೂದು ಕುಂಬಳಕಾಯಿ ಕತ್ತರಿಸಲಿದ್ದು, ನಂತರ ʼಚಾಮುಂಡಮ್ಮಾ ಕಿ ಜೈ’ ಎಂದು ಜೈಘೋಷದೊಂದಿಗೆ ಜಟ್ಟಿ ಕಾಳಗಕ್ಕೆ ಇಳಿಯಲಿದ್ದಾರೆ. ಕೆಲವೊಮ್ಮೆ ಇದು ಕೆಲವೇ ನಿಮಿಷಗಳ ಒಳಗೆ ಮುಗಿದುಹೋಗುತ್ತದೆ. ಇಬ್ಬರಲ್ಲಿ ಒಬ್ಬರ ಮೈಯಿಂದ ಒಂದು ಹನಿ ನೆತ್ತರು ಇಳಿದರೂ ಸಾಕಾಗುತ್ತದೆ. ನಂತರ ಕುಸ್ತಿಯನ್ನು ಜಸಬಂದಿಗಳು ನಿಲ್ಲಿಸುತ್ತಾರೆ. ಈ ಕುಸ್ತಿ ಇಲ್ಲಿಗೇ ಕೊನೆಗೊಳ್ಳುತ್ತದೆ; ವಿಸ್ತರಿಸುವುದಿಲ್ಲ.

ಇದಾದ ಬಳಿಕ ಜಟ್ಟಿಗಳು ಸಂಪ್ರದಾಯದಂತೆ ರಾಜರಿಗೆ ನಜರು ಸಲ್ಲಿಸುತ್ತಾರೆ. ವಜ್ರಮುಷ್ಠಿ ಕಾಳಗದ ನಂತರ ಮಹಾರಾಜರು ವಿಜಯ ಯಾತ್ರೆ ಹೊರಡುತ್ತಾರೆ.

ಇದನ್ನೂ ಓದಿ: Mysore Dasara: ಜಂಬೂ ಸವಾರಿಗೆ ಕ್ಷಣಗಣನೆ, ಕಣ್ಮನ ಸೆಳೆಯಲಿವೆ 49 ಸ್ತಬ್ಧಚಿತ್ರಗಳು!

Exit mobile version