Site icon Vistara News

ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

draupadi murmu

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ದೇಶದ ಪ್ರಥಮ ಪ್ರಜೆಯೇ ಬರಲಿದ್ದಾರೆ. ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟಿಸಲು ಒಪ್ಪಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬ ವಿಚಾರದಲ್ಲಿ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ಬಳಿಕ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿತ್ತು. ಈಗ ಅವರಿಂದ ಸಮ್ಮತಿಯ ಪತ್ರ ಬಂದಿದೆ ಎಂದು ಸಿಎಂ ತಿಳಿಸಿದರು. ಹೀಗಾಗಿ ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಖುಷಿಯಿಂದ ಹೇಳಿಕೊಂಡರು.

ಸೆಪ್ಟೆಂಬರ್‌ ೨೬ರಂದು ಉದ್ಘಾಟನೆ
ಈ ಬಾರಿ ನವರಾತ್ರಿ ಸೆಪ್ಟೆಂಬರ್‌ ೨೬ರಂದು ಆರಂಭವಾಗಿದ್ದು, ಉದ್ಘಾಟನಾ ಕಾರ್ಯಕ್ರಮ ಅಂದೇ ನಡೆಯುತ್ತದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ಳಿರಥದಲ್ಲಿ ಕುಳಿತ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ನಡೆಯುತ್ತದೆ. ಬಳಿಕ ಒಂದು ಸಭಾ ಕಾರ್ಯಕ್ರಮ ಇರುತ್ತದೆ. ಇದು ದಸರಾ ಉದ್ಘಾಟನೆಯ ಸಾಮಾನ್ಯ ನಡಾವಳಿ.

ಹೇಗಿರುತ್ತದೆ ಉದ್ಘಾಟನಾ ಕಾರ್ಯಕ್ರಮ?
ದಸರಾ ಉದ್ಘಾಟನೆ ಎನ್ನುವುದು ನಾಡಹಬ್ಬಕ್ಕೆ ಸಂಬಂಧಿಸಿದ ಅತ್ಯಪೂರ್ವ ಗೌರವ. ಆದರೆ, ಅದರ ಪ್ರಕ್ರಿಯೆ ಮತ್ತು ಜವಾಬ್ದಾರಿಗಳು ಸೀಮಿತವಾಗಿರುತ್ತವೆ. ಮೊದಲ ದಿನದ ಉದ್ಘಾಟನೆ ಬಿಟ್ಟರೆ ಉದ್ಘಾಟಕರಿಗೆ ಬೇರೆ ಯಾವುದೇ ಕೆಲಸಗಳು ಇರುವುದಿಲ್ಲ. ವಿಜಯದಶಮಿಯಂದು (ಅಕ್ಟೋಬರ್‌ ೫) ನಡೆಯುವ ಅಂಬಾರಿ ಉತ್ಸವದಲ್ಲಿ ಸ್ಥಳೀಯರಾಗಿದ್ದರೆ ವಿಶೇಷ ಆಹ್ವಾನ ಇರುತ್ತದೆ. ಹಾಗಂತ ಅವರು ಇತರರಂತೆ ಕುಳಿತು ನೋಡಬಹುದು ಅಷ್ಟೆ. ಅರಮನೆ ಎದುರಿನ ಭಾಗದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮದ ಶಿಷ್ಟಾಚಾರದಲ್ಲಿ ಕೇವಲ ಮುಖ್ಯಮಂತ್ರಿ ಮತ್ತು ಮೈಸೂರು ಮೇಯರ್‌ಗೆ ಅವಕಾಶವಿರುತ್ತದೆ. ನವರಾತ್ರಿಯ ಕೊನೆಯ ದಿನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲು ಅವಕಾಶವಿದೆ. ಉದ್ಘಾಟಕರು ಸ್ಥಳೀಯರಿದ್ದರೆ ಭಾಗವಹಿಸುತ್ತಾರೆ.

ದರ್ಬಾರ್‌ನಲ್ಲಿ ಭಾಗವಹಿಸುತ್ತಾರಾ?
ನವರಾತ್ರಿಯ ಆರಂಭದ ದಿನದಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ನಡೆಯುತ್ತದೆ. ಅದರ ಹೊರತಾಗಿ ದೊಡ್ಡ ಕಾರ್ಯಕ್ರಮಗಳಿಲ್ಲ. ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು ಅರಮನೆಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಆಸಕ್ತಿ ತೋರಿಸುತ್ತಾರಾ ಎಂದು ಕಾದು ನೋಡಬೇಕು. ಈ ನಿಟ್ಟಿನಲ್ಲಿ ಅರಮನೆಯವರು ಆಹ್ವಾನ ನೀಡುವ ಸಾಧ್ಯತೆಯೂ ಇದೆ.

ಅಪರೂಪದ ಗೌರವ, ಕರ್ನಾಟಕಕ್ಕೆ ಹೆಮ್ಮೆ
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ಎರಡು ತಿಂಗಳಾಗಿಲ್ಲ. ಒರಿಸ್ಸಾದ ಬುಡಕಟ್ಟು ಜನಾಂಗಕ್ಕೆ ಸೇರಿದ ಮುರ್ಮು ಅವರು ಈ ಹುದ್ದೆಯನ್ನು ಏರುವ ಮೂಲಕ ಹೆಣ್ಮಕ್ಕಳ ಶಕ್ತಿಯನ್ನು ಮತ್ತು ಬುಡಕಟ್ಟು ಕುಟುಂಬದ ಸಾಮರ್ಥ್ಯಗಳೆರಡನ್ನೂ ಗಟ್ಟಿ ಧ್ವನಿಯಲ್ಲಿ ಪ್ರತಿನಿಧಿಸಿದ್ದಾರೆ. ಅಂಥೊಬ್ಬ ಸಾಧಕರನ್ನು ದಸರಾ ಉದ್ಘಾಟನೆಗೆ ಕರೆಯುವ ಮೂಲಕ ರಾಜ್ಯ ಸರಕಾರ ಯಾರೂ ಯೋಚಿಸದ ಹೆಜ್ಜೆಯನ್ನು ಇಟ್ಟಿದೆ. ದ್ರೌಪದಿ ಮುರ್ಮು ಅವರು ಕೂಡಾ ಪ್ರೀತಿಯಿಂದ ಒಪ್ಪಿಕೊಳ್ಳುವ ಮೂಲಕ ರಾಜ್ಯಕ್ಕೆ ಖುಷಿ ಕೊಟ್ಟಿದ್ದಾರೆ.

Exit mobile version