ಮೈಸೂರು: ನಕಲಿ ದಾಖಲೆ ಸೃಷ್ಟಿಸಿ (Mysore Scam) ಆಸ್ತಿ ಪರಾಭಾರೆ ಮಾಡುತ್ತಿದ್ದ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿದ್ದು, ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಜಾರಾಂ ವಿಚಾರಣೆ ನಡೆಸಲಾಗಿದೆ. ಬೆಂಗಳೂರು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ತಂದೆಯ ಹೆಸರಿನಲ್ಲಿಯೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದರಿಂದ ಪ್ರಕರಣ ಬಯಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ನಗರ ಪೊಲೀಸರು, ಕುವೆಂಪುನಗರ ಪೊಲೀಸ್ ಠಾಣೆಗೆ ಸೋಮವಾರ ಮಧ್ಯಾಹ್ನ ರಾಜಾರಾಂ ಅವರನ್ನು ಕರೆತಂದು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ಬಳಿಕ ಅವರಿಂದ ಹೇಳಿಕೆ ದಾಖಲು ಮಾಡಿಕೊಂಡು ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ನಗರದ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜಾರಾಂ ಒಂದಷ್ಟು ಯುವಕರನ್ನು ಗುಂಪು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ಕಾಂಗ್ರೆಸ್ ನಗರಾಧ್ಯಕ್ಷರಾಗಿ ಒಂದೂವರೆ ವರ್ಷದ ಹಿಂದೆ ನೇಮಕವಾಗಿದ್ದು, ಸ್ಥಳೀಯ ನಾಯಕರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಮುಡಾ, ಮಹಾನಗರ ಪಾಲಿಕೆ ಅಧಿಕಾರಿಗಳ ನಕಲಿ ಸಹಿ, ಸೀಲು, ಇ-ಸ್ಟಾಂಪ್ ಪೇಪರ್ ಮುಂತಾದವುಗಳನ್ನು ಬಳಸಿಕೊಂಡು ದಾಖಲೆ ಪತ್ರಗಳನ್ನು ಸೃಷ್ಟಿಸಿ ಆಸ್ತಿ ಪರಭಾರೆ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆ ಹಾಗೂ ಲಕ್ಷ್ಮಿಪುರಂ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು.
ಇದನ್ನೂ ಓದಿ | Mysore Scam | ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳ ಪರಭಾರೆ; ಇವರಲ್ಲಿದೆ ಅಧಿಕಾರಿಗಳ ನಕಲಿ ಸೀಲ್, ಸಹಿ!
ಭಾನುವಾರ ಬೆಳಗ್ಗೆ ರಾಮಕೃಷ್ಣನಗರದ ಸರ್ವಿಸ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದ ಪೊಲೀಸರ ತಂಡ, ಮೂವರು ಆರೋಪಿಗಳನ್ನು ಬಂಧಿಸಿತ್ತು. ಈ ಪೈಕಿ ರಾಜೀವ್ ನಗರದ ನಿವಾಸಿ ಮೊಹಮ್ಮದ್ ನಯೀಮ್ ಪ್ರಮುಖ ಆರೋಪಿ ಎನ್ನಲಾಗಿತ್ತು. ನಕಲಿ ದಾಖಲೆ ಸೃಷ್ಟಿಸುವ ಜಾಲದಲ್ಲಿ ಸಿಲುಕಿರುವ ಆರೋಪಿಗಳೊಂದಿಗೆ ರಾಜಾರಾಂ ಹಣಕಾಸು ವಹಿವಾಟು ನಡೆಸಿದ್ದಾರೆ. ಈ ಆರ್ಥಿಕ ವಹಿವಾಟುಗಳ ಬಗ್ಗೆ ಅನುಮಾನ ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ವಿಸ್ತಾರ ನ್ಯೂಸ್ಗೆ ತಿಳಿಸಿವೆ.
ರಾಜಾರಾಂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖಾಧಿಕಾರಿಯಿಂದ ಮಾಹಿತಿ ಕಲೆ ಹಾಕಿಲ್ಲ. ವಿಚಾರಣಾ ಹಂತದಲ್ಲಿರುವ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ.
| ಪ್ರದೀಪ್ ಗುಂಟಿ, ಡಿಸಿಪಿ, ಮೈಸೂರು