- ಮೈಸೂರಿನಲ್ಲಿ ಆಗಸ್ಟ್ ೫ರಿಂದ ೭ರ ತನಕ ಮೂರು ದಿನಗಳ ಸ್ಟಾರ್ಟಪ್ ಹಬ್ಬ
- ೧೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
ರಂಗಸ್ವಾಮಿ ಎಂ.ಮಾದಾಪುರ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ‘ಮೈಸೂರು ಸ್ಟಾರ್ಟಪ್ ಪೆವಿಲಿಯನ್’ ಶೀರ್ಷಿಕೆಯಡಿ ನವೋದ್ಯಮಗಳ ಬೃಹತ್ ಸಮಾಗಮ ನಡೆಯಲಿದೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಎಸ್‌ಜೆಸಿಇ- ಸೈನ್ಸ್ ಆ್ಯಂಡ್ ಟೆಕ್ನಾಲಜಿ ಎಂಟರ್‌ಪ್ರಿನರ್ ಪಾರ್ಕ್[ಸ್ಟೆಪ್], ಎಕ್ಸೆಲ್ ಸಾಫ್ಟ್ ಸಂಯುಕ್ತಾಶ್ರಯದಲ್ಲಿ ಈ ನವೋದ್ಯಮ ಉತ್ಸವವನ್ನು ಸಂಘಟಿಸಲಾಗಿದೆ. ಶ್ರೀ ಜಯಚಾಮರಾಜೇಂದ್ರ ಇಂಜಿನಿಯರ್ ಕಾಲೇಜು ಆವರಣದಲ್ಲಿ ಆಗಸ್ಟ್ ೫ರಿಂದ ೭ವರೆಗೆ ಮೂರು ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶಾಲವಾದ ವೇದಿಕೆ ಸಜ್ಜಾಗುತ್ತಿದೆ.
ರಾಜ್ಯ ಹಾಗೂ ದೇಶದ ಸುಮಾರು ೧೦೦ಕ್ಕೂ ಹೆಚ್ಚು ನವೋದ್ಯಮಿಗಳು ಭಾಗವಹಿಸಲಿದ್ದಾರೆ. ಹೊಸ ಉದ್ಯಮ ಆರಂಭಿಸಿ ಈಗಾಗಲೇ ಯಶಸ್ಸು ಗಳಿಸಿರುವ ಸುಮಾರು ೨೫ಕ್ಕೂ ಹೆಚ್ಚು ನವೋದ್ಯಮಿಗಳು ಉಪನ್ಯಾಸ, ಭಾಷಣ, ಚರ್ಚೆಗಳ ಮೂಲಕ ತಮ್ಮ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ಮೂರು ದಿನಗಳ ಸಮಾವೇಶದಲ್ಲಿ ಅಂದಾಜು ೧೫ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಏನಿದು ಸ್ಟಾರ್ಟಪ್ ಪೆವಿಲಿಯನ್: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ದೇಶದ ಸಾಮಾಜಿಕ, ಆರ್ಥಿಕ, ಕೈಗಾರಿಕಾ ಹಾಗೂ ಉದ್ಯಮ ವಲಯದ ಸವಾಲುಗಳನ್ನು ಎದುರಿಸಲು ‘ಸ್ಥಳೀಯ ಪರಿಹಾರ’ಗಳನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನವೋದ್ಯಮಗಳು ಆಶಾಕಿರಣವಾಗಿದ್ದು, ಕೇಂದ್ರ ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ. ನಮ್ಮಲ್ಲಿ ಮಾನವ ಸಂಪನ್ಮೂಲವೂ ಇದೆ, ನಿರುದ್ಯೋಗವೂ ಇದೆ. ಇದರ ನಡುವೆಯೇ ಅನೇಕರು ನವೋದ್ಯಮ ಆರಂಭಿಸಲು ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವುದು ಮತ್ತು ಆತ್ಮಸ್ಥೈರ್ಯ ತುಂಬುವ ಮೂಲಕ ಪ್ರೋತ್ಸಾಹ ನೀಡುವುದು ಅತಿ ಮುಖ್ಯ. ಇದಕ್ಕಾಗಿಯೇ ಎರಡನೇ ಸ್ತರದ ನಗರಗಳ ಪೈಕಿ ಮುಂಚೂಣಿಯಲ್ಲಿರುವ ಮೈಸೂರಿನಲ್ಲಿ ಸ್ಟಾರ್ಟಪ್ ಪೆವಿಲಿಯನ್ ಸಂಘಟಿಸುತ್ತಿದ್ದೇವೆ. ನವೋದ್ಯಮ ಆರಂಭಿಸುವವರಿಗೆ ಪ್ರೇರಣೆ ನೀಡುವುದು ಸಮಾವೇಶದ ಆಶಯವಾಗಿದೆ ಎಂದು ಸ್ಟೆಪ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಕುಮಾರ್ ‘ವಿಸ್ತಾರ ನ್ಯೂಸ್’ಗೆ ತಿಳಿಸಿದರು.
ಸರ್ಕಾರವೂ ಸ್ಟಾರ್ಟಪ್‌ಗಳನ್ನು ಆರಂಭಿಸಲು ನೆರವಾಗುತ್ತಿದೆ. ಉದ್ಯಮ ಆರಂಭಿಸಲೂ ಅನೇಕರು ಮುಂದೆ ಬರುತ್ತಿದ್ದಾರೆ. ಇಬ್ಬರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷವೂ ‘ತಂತ್ರಜ್ಞಾನ ಸಮಾವೇಶ’ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಟಿಇ ಮೈಸೂರು, ಯಂಗ್ ಇಂಡಿಯಾ, ಸಿಐಐ, ಕರ್ನಾಟಕ ಡಿಜಿಟಲ್- ಎಕಾನಮಿ ಮಿಷನ್, ಸ್ಟಾರ್ಟಪ್ ಕರ್ನಾಟಕ, ಸ್ಟಾರ್ಟಪ್ ಇಂಡಿಯಾ, ಪ್ರೊಟೀನ್- ಚೇಂಜ್ ಇಸ್ ಗ್ರೋಥ್, ವಿಜ್ಞಾನ್‌ಲ್ಯಾಬ್, ಸ್ಕ್ಯಾನ್‌ರೇ, ಮೈತ್ರ- ಸ್ಕೂಲ್ ಆಫ್ ಬ್ಯುಸ್‌ನೆಸ್, ಝೋಯೋ, ದೇಶಿ ಕ್ಲೌಡ್, ಇನ್‌ಫೋಫಿನಾ, ಗೋಫ್ರೂಗಲ್, ವೀಲರ್ ಕ್ಲೀನರ್, ಯೂನಿಲಾಗ್ ಮುಂತಾದ ಹಲವಾರು ಕಂಪನಿಗಳು ಸಮಾವೇಶಕ್ಕೆ ಸಹಕರಿಸಿವೆ.
ನವೋದ್ಯಮ ಪ್ರಾತ್ಯಕ್ಷಿಕೆ
‘ನಮ್ಮೂರು ಮೈಸೂರು, ನವೋದ್ಯಮಗಳು ಸಾವಿರಾರು’ ಎಂಬುದು ಸಮಾವೇಶದ ಧ್ಯೇಯ. ಮೈಸೂರು, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ನವೋದ್ಯಮ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ ಅನೇಕರು ತಮ್ಮ ಸ್ಟಾರ್ಟಪ್‌ಗಳಿಗೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಇದಕ್ಕಾಗಿ ನೂರಾರು ಮಳಿಗೆಗಳನ್ನು ತೆರೆಯಲಾಗುವುದು. ಆಯಾ ಮಳಿಗೆಯಲ್ಲಿ ಉದ್ಯಮ ಆರಂಭಕ್ಕೆ ಬೇಕಾದ ಸಿದ್ಧತೆ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ಉದ್ಯಮ ಯಶಸ್ಸಿನ ಸೂತ್ರಗಳು ಮುಂತಾದವುಗಳ ಬಗ್ಗೆ ಪ್ರದರ್ಶನ ಮತ್ತು ಮಾಹಿತಿ ವಿನಿಮಯ ನಡೆಯಲಿದೆ. ವಿದ್ಯಾರ್ಥಿಗಳು, ಉದ್ಯಮಿಗಳು, ಸಾರ್ವಜನಿಕರು ಸೇರಿದಂತೆ ಆಸಕ್ತರು ಭಾಗವಹಿಸಬಹುದು.
ಕಾರ್ಯಕ್ರಮ ವೈವಿಧ್ಯ
- ಸ್ಟಾರ್ಟಪ್ ವೇದಿಕೆ
- ದಿಕ್ಸೂಚಿ ಭಾಷಣ
- ತಜ್ಞರ ಉಪನ್ಯಾಸ
- ಪ್ರೇರಣಾದಾಯಕ ಸಂವಾದ
- ಸಿಇಒ ಸೈಕ್ಲೋಥಾನ್
- ನೆಟ್ವರ್ಕಿಂಗ್
- ಒಡಂಬಡಿಕೆ
- ಐಡಿಯಾಥಾನ್
- ಸಂವಾದ
- ಅನುಭವಿ ವಲಯ
- ಮಹಿಳಾ ಪಿಚ್ ಫೆಸ್ಟ್
” ಭಾರತದಲ್ಲಿ ಸಾಮಾಜಿಕ, ಆರ್ಥಿಕ, ಅಭಿವೃದ್ಧಿ ಕ್ರಾಂತಿ ನವೋದ್ಯಮಗಳಿಂದ ಮಾತ್ರ ಸಾಧ್ಯ. ಹೊಸ ಆಲೋಚನೆಗಳೊಂದಿಗೆ ವಿನೂತನ ವಲಯದಲ್ಲಿ ಉದ್ಯಮ ಆರಂಭಿಸುವವರು ಖಂಡಿತ ಯಶಸ್ಸು ಸಾಧಿಸುತ್ತಾರೆ. ಈಗಾಗಲೇ ನವೋದ್ಯಮ ಸ್ಥಾಪಿಸಿ ಸಾಧನೆ ಮಾಡಿರುವವರು ಉದ್ಯಮ ಆರಂಭಿಸುವ ಆಸಕ್ತಿ ಹೊಂದಿರುವ ಹೊಸ ತಲೆಮಾರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಮೈಸೂರಿನಂತಹ ನಗರದಲ್ಲಿ ಸ್ಟಾರ್ಟಪ್ ಪೆವಿಲಿಯನ್ ನಡೆಯುತ್ತಿರುವುದು ಸಂತೋಷದಾಯಕ ಬೆಳವಣಿಗೆʼ.
ರವಿಶಂಕರ್, ಸಂಸ್ಥಾಪಕರು, ಏಮ್ ಹೈ ಕನ್ಸಲ್ಟೆನ್ಸಿ
” ತಂತ್ರಜ್ಞಾನ, ಡೇಟಾ ವಿಜ್ಞಾನ, ಆಟೋಮೇಷನ್‌ನಲ್ಲಿ ಸ್ವಾವಲಂಬನೆ ಸಾಧಿಸಬೇಕಿರುವುದು ದೇಶದ ತುರ್ತು. ಆರೋಗ್ಯ, ಶಿಕ್ಷಣ, ವಾಣಿಜ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲ ವಲಯಗಳಿಗೂ ನವೋದ್ಯಮಗಳು ಬರಬೇಕಿದೆ. ರೈತರೂ ಉದ್ಯಮಿಗಳಾಗಬೇಕಿತ್ತು. ಬುದ್ದಿವಂತ ಮಧ್ಯವರ್ತಿಗಳ ಪ್ರವೇಶದಿಂದಾಗಿ ಯಾರಿಗೋ ಸಿಗಬೇಕಾದ ಲಾಭ ಮತ್ಯಾರಿಗೂ ಸಿಕ್ಕಿತು. ಇಂತಹ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಟಾರ್ಟಪ್ ಪೆವಿಲಿಯನ್ ಮಹತ್ವದ ಪಾತ್ರ ವಹಿಸಲಿದೆʼ.
ಬಿ.ಶಿವಶಂಕರ್, ಸಿಇಒ, ಸ್ಟೆಪ್