ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ್ಯಾಕ್ಟರ್‌ಗೆ ಸಿಲುಕಿ ದಾರುಣವಾಗಿ (Accident Case) ಮೃತಪಟ್ಟಿದ್ದಾನೆ. ಮೈಸೂರಿನ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ಭವಿಷ್ (8) ಮೃತ ದುರ್ದೈವಿ.
ಭವಿಷ್ ತನ್ನ ತಾಯಿ ಮಮತಾ ಜತೆಗೆ ಚಾಮರಾಜನಗರದಿಂದ ದೇವರಸನಹಳ್ಳಿಗೆ ಬಂದಿದ್ದ. ಈ ವೇಳೆ ಭವಿಷ್ ಸೋದರ ಮಾವನ ಜತೆ ಟ್ರ್ಯಾಕ್ಟರ್‌ನಲ್ಲಿ ಜಮೀನಿಗೆ ಹೋಗಿದ್ದ. ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದಿದ್ದಾನೆ. ಆಗ ಕ್ಷಣ ಮಾತ್ರದಲ್ಲಿ ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿದ ಭವಿಷ್ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ.
ಬಾಲಕನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಟ್ಟೆ ತೊಳೆಯಲು ಹೋಗಿ ನಾಲ್ವರು ಜಲ ಸಮಾಧಿ
ಕೊಲ್ಹಾಪುರ: ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ಕು ಮಂದಿ ಜಲಸಮಾಧಿಯಾದ (drowned death) ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ನಡೆದಿದೆ. ಮೃತಪಟ್ಟವರಲ್ಲಿ ಕರ್ನಾಟಕದ ಬೆಳಗಾವಿಯ (belagavi news) ಇಬ್ಬರು ಸೇರಿದ್ದಾರೆ.
ಮಳೆಯಿಂದ ಉಕ್ಕಿ ಹರಿಯುತ್ತಿದ್ದ ದೂಧಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಬಿದ್ದು ಮುಳುಗಿ 4 ಜನರು ಮೃತಪಟ್ಟರು. ಗ್ರಾಮಸ್ಥರು ಇಬ್ಬರು ಮಹಿಳೆಯರು ಸೇರಿ 3 ಮಂದಿಯ ಶವಗಳನ್ನು ನದಿಯಿಂದ ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಒಬ್ಬನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ.
ಮೃತರಲ್ಲಿ ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳು. ರೇಶ್ಮಾ ದಿಲಿಪ ಏಳಮಲೇ (34) ಹಾಗೂ ಯಶ್ ದಿಲಿಪ ಏಳಮಲೇ (17) ಇವರಿಬ್ಬರೂ ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಸಂಬಂಧಿಕರ ಮನೆಗೆ ಬಂದಿದ್ದರು. ಇನ್ನಿಬ್ಬರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರು. ಕೊಲ್ಹಾಪುರ ಜಿಲ್ಲೆಯ ಮುರಗುಡ ನಿವಾಸಿ ಜಿತೇಂದ್ರ ಲೋಕರೆ (36) ಹಾಗೂ ಕೊಲ್ಹಾಪುರ ಜಿಲ್ಲೆಯ ರೂಕಡಿ ಗ್ರಾಮದ ನಿವಾಸಿ ಸವಿತಾ ಅಮರ ಕಾಂಬಳೆ (27). ಕಾಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!
ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ಮೊಬೈಲ್ ಗೀಳಿಗಾಗಿ ಅಣ್ಣನೇ ಕೊಂದ
ಆನೇಕಲ್: ಬೆಂಗಳೂರು ಹೊರವಲಯ (Bangalore rural) ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ (Sarjapura murder) ನಿನ್ನೆ ನಡೆದ ಹದಿನೈದು ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ (boy murder case) ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣ (brother) ಅಂದರ್ ಆಗಿದ್ದಾನೆ.
ಪ್ರಾಣೇಶ್ (15) ಕೊಲೆಯಾಗಿದ್ದ ಬಾಲಕ. ಶಿವಕುಮಾರ್ (18) ಕೊಲೆ ಮಾಡಿದ ಪಾಪಿ ಸಹೋದರ. ಆನ್ಲೈನ್ ಗೇಮ್ ಆಡಲು ಮೊಬೈಲ್ ನೀಡಲಿಲ್ಲ ಅಂತ ಪಾತಕಿ, ತಮ್ಮನನ್ನು ಸಾಯಿಸಿದ್ದಾನೆ. ಕೊಲೆ ಆರೋಪಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರೂ ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ದಂಪತಿಯ ಮಕ್ಕಳು. ಈ ಕುಟುಂಬ ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿತ್ತು. ಪತಿ-ಪತ್ನಿ ಹಾಗೂ ಹಿರಿಯ ಮಗ ಶಿವಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ದ್ವಿತೀಯ ಪುತ್ರ ಪ್ರಾಣೇಶ್ ಸೂಳಕೆರೆ ಗ್ರಾಮದಲ್ಲಿ ಅಜ್ಜಿಯ ಜೊತೆಗೆ ವಾಸವಿದ್ದ.
ಬೇಸಿಗೆ ರಜೆಗೆ ನೆರಿಗಾ ಗ್ರಾಮದಲ್ಲಿನ ತಂದೆ ತಾಯಿ ಬಳಿಗೆ ಪ್ರಾಣೇಶ್ ಬಂದಿದ್ದ. ಮನೆಯಲ್ಲಿದ್ದ ಮೊಬೈಲಿನಲ್ಲಿ ಶಿವಕುಮಾರ್ ಯಾವಾಗ್ಲೂ ಆನ್ಲೈನ್ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮನೆಗೆ ಬಂದವನೇ ಮೊಬೈಲ್‌ನಲ್ಲಿ ತಾನು ಗೇಮ್ ಆಡಲು ಶುರು ಮಾಡಿದ್ದ. ಪ್ರಾಣೇಶ್ ಬಳಿ ಮೊಬೈಲ್ ನೀಡುವಂತೆ ಶಿವಕುಮಾರ್ ಕೇಳುತ್ತಿದ್ದ. ಆದರೆ ಪ್ರಾಣೇಶ್ ಮೊಬೈಲ್ ನೀಡುತ್ತಿರಲಿಲ್ಲ.
ನನಗೆ ಆನ್ಲೈನ್ ಗೇಮ್ ಆಡಲು ಮೊಬೈಲ್ ಸಿಗುತ್ತಿಲ್ಲ ಎಂದು ಶಿವಕುಮಾರ ಕುಪಿತಗೊಂಡಿದ್ದ. ಇಬ್ಬರೂ ಮೊಬೈಲ್‌ಗಾಗಿ ಆಗಾಗಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಹದಿನೈದನೇ ತಾರೀಕು ಗಾರೆ ಕೆಲಸಕ್ಕೆ ಹೋದ ಶಿವಕುಮಾರ ತಮ್ಮನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಕೆಲಸ ಮಾಡುತ್ತಿದ್ದ ಜಾಗದಿಂದ ಸಣ್ಣ ಸುತ್ತಿಗೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ.
ಬಯಲು ಶೌಚಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಶಿವಕುಮಾರ್, ಅಲ್ಲಿ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪ್ರಾಣೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ತಂದೆ ತಾಯಿ ಸಂಜೆ ಮನೆಗೆ ಬಂದು ಎಲ್ಲೆಡೆ ಹುಡುಕಾಡಿದ್ದರು. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಪೋಷಕರಿಗೆ ತಿಳಿಸಿದ್ದ ಶಿವಕುಮಾರ.
ಸರ್ಜಾಪುರ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ದರು. ತಮ್ಮನ ಶವವನ್ನು ನಾನೇ ಮೊದಲು ನೋಡಿದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೋಲೀಸರಿಗೆ ಅನುಮಾನ ಮೂಡಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಶಿವಕುಮಾರ್‌ನನ್ನು ಬಂಧಿಸಿದ ಸರ್ಜಾಪುರ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ