ಮೈಸೂರು: ಇಲ್ಲಿನ ಹಂಪಾಪುರ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅಡುಗೆ ಸಿಬ್ಬಂದಿ ಮಾರಣಾಂತಿಕ ಹಲ್ಲೆ (Assault) ನಡೆಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಬಾಲಕಿಯರ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಸೌಜನ್ಯ ರಾಜೇಶ್ ಎಂಬಾಕೆ ಪಲ್ಲವಿ ಎಂಬ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಯಿಂದ ವಿದ್ಯಾರ್ಥಿನಿಗೆ ಬಲವಾದ ಪೆಟ್ಟು ತಗುಲಿದ್ದು, ಕೂಡಲೇ ಹಂಪಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಲಭ್ಯವಾಗದ ಕಾರಣ ಎಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ.
ಪಲ್ಲವಿಯ ತಂದೆ ಮಹದೇವ, ತಾಯಿ ಸುಚಿತ್ರ ಆಗತ್ತೂರು ಗ್ರಾಮದವರಾಗಿದ್ದು, ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ಅಡುಗೆ ಸಿಬ್ಬಂದಿ ನೇಮಕ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸೌಜನ್ಯಾ ರಾಜೇಶ್ ಎಂಬಾಕೆಯನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಸ್ವಾಮಿ ಯಾವುದೇ ಆದೇಶವಿಲ್ಲದೆ ಅನಧಿಕೃತವಾಗಿ ಹಾಸ್ಟೆಲ್‌ಗೆ ಅಡುಗೆ ಸಿಬ್ಬಂದಿಯನ್ನಾಗಿ ಕರ್ತವ್ಯಕ್ಕೆ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ದಾಖಲೆಗಳೂ ಹಾಸ್ಟೆಲ್‌ನಲ್ಲಿ ಲಭ್ಯವಿಲ್ಲ ಎಂದು ಪೋಷಕರು ದೂರಿದ್ದಾರೆ.
ಹಲ್ಲೆ ಸಂದರ್ಭದಲ್ಲಿ ಸೌಜನ್ಯ ರಾಜೇಶ್ ಮತ್ತು ಆಕೆಯ ಮಗ ಸೃಜನ್ ಎಂಬಾತ ಹೆಣ್ಣುಮಕ್ಕಳಿಗೆ ಅವ್ಯಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಮಕ್ಕಳ ಮೇಲೂ ಪ್ರತಿದಿನ ದೌರ್ಜನ್ಯ ನಡೆಸುತ್ತಿದ್ದು, ದುರಹಂಕಾರದ ವರ್ತನೆ ತೋರುತ್ತಿದ್ದಾರೆ ಎಂದು ಮಕ್ಕಳು, ಪೋಷಕರು ಹಾಗೂ ಹಾಸ್ಟೆಲ್ ಸಿಬ್ಬಂದಿ ಲಕ್ಷ್ಮೀ ದೂರಿದ್ದಾರೆ.
ಸೌಜನ್ಯ ರಾಜೇಶ್ ಅಡುಗೆ ಮಾಡುವುದನ್ನು ಬಿಟ್ಟು ಹೀಗೆಲ್ಲ ವರ್ತಿಸಲು ಅಧಿಕಾರ ಕೊಟ್ಟವರು ಯಾರು? ಇವರನ್ನು ಇಲ್ಲಿಗೆ ಆಯ್ಕೆ ಮಾಡಿದ್ದಾದರೂ ಹೇಗೆ? ಎಂದು ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಲಮೇಲಮ್ಮ ಹಾಗೂ ಸದಸ್ಯರಾದ ಪರಮೇಶ್ (ಬಚ್ಚನ್) ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ | ಹಾಸ್ಟೆಲ್‌ನಲ್ಲಿ ಪಿಯು ವಿದ್ಯಾರ್ಥಿ ಆತ್ಮಹತ್ಯೆ