Site icon Vistara News

Attempt To Murder: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಗೆ ಚಾಕು ಹಾಕಿದ ದುಷ್ಟ ಮಗ

Son stabs father over property dispute

ಮೈಸೂರು: ಆಸ್ತಿ ವಿಚಾರಕ್ಕೆ ಕಿರಿಕ್‌ ತೆಗೆದ ಮಗನೊಬ್ಬ ತಂದೆಗೆ ಚಾಕು (Attempt To Murder) ಹಾಕಿದ್ದಾನೆ. ಮೈಸೂರಿನ ತಿ. ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ ಘಟನೆ ನಡೆದಿದೆ. ರಾಚಪ್ಪಾಜಿ (60) ಮಗನಿಂದಲೇ ಚಾಕು ಇರಿತಕ್ಕೆ ಒಳಗಾದವರು.

ರಾಚಪ್ಪಾಜಿ ಅವರ ಮಗ ಸುಭಾಷ್ ಎಂಬಾತ ತನ್ನ ಸ್ನೇಹಿತರೊಟ್ಟಿಗೆ ಸೇರಿ ಚಾಕುವಿನಿಂದ ಇರಿದಿದ್ದಾನೆ. ರಾಚಪ್ಪಾಜಿ ಜತೆ ಇದ್ದ ಮಹದೇವ್‌ ಎಂಬುವವರ ಮೇಲೂ ದಾಳಿ ಮಾಡಿದ್ದಾನೆ. ಗಂಭೀರ ಗಾಯಗೊಂಡ ರಾಚಪ್ಪಾಜಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಮಗನ ಈ ಕೃತ್ಯಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಯಾವ ತಂದೆ-ತಾಯಿಗೂ ಇಂತಹ ಮಕ್ಕಳು ಬೇಡಪ್ಪಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆ ಶಂಕೆ

ಮೈಸೂರಿನ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚಿಲ್ಲರೆ ಅಂಗಡಿ ವ್ಯಾಪಾರಿಯಾಗಿದ್ದ ಎಚ್‌.ಸಿ. ಹರೀಶ್ (40) ಎಂಬುವರ ಶವವಾಗಿ ಪತ್ತೆಯಾಗಿದೆ. ಸಾಲಿಗ್ರಾಮ ತಾಲೂಕಿನ ಕುಪ್ಪೆ ಅರಣ್ಯದ ಮಳಲಿ- ಹೊಸಕೋಟೆ ರಸ್ತೆಯ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಇವರನ್ನು ಸ್ನೇಹಿತರು ಬಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ಕೇಳಿಬಂದಿದೆ.

ಮಾಹಿತಿ ತಿಳಿದ ಸಾಲಿಗ್ರಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಲೆಯ ಹಿಂದಿನ ವಿದ್ಯಮಾನಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Fire Accident : ಅನಿಲ ಸೋರಿಕೆಯಿಂದ ಬೆಂಕಿ; ಅಡುಗೆ ಮನೆಯಲ್ಲೇ ಸುಟ್ಟು ಕರಕಲಾದ ಮಹಿಳೆ

ಕೋಳಿ ಕತ್ತು ಕೊಯ್ದಂತೆ ಮಕ್ಕಳನ್ನು ಸಾಯಿಸಿದ ಕ್ಷೌರಿಕ ಸಾಜಿದ್;‌ ಪೊಲೀಸರಿಂದ ಎನ್‌ಕೌಂಟರ್‌

ಬದೌನ್‌: ಉತ್ತರ ಪ್ರದೇಶದ ಬದೌನ್‌ನಲ್ಲಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ (Double Murder, Badaun Murder) ಮಾಡಲಾಗಿದ್ದು, ಕೊಲೆಗಾರ ಕ್ಷೌರಿಕನನ್ನು ಪೊಲೀಸರು ಗುಂಡಿಕ್ಕಿ (Encounter) ಕೊಂದಿದ್ದಾರೆ. ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಸಾಜಿದ್‌ ಎಂಬ ಕ್ಷೌರಿಕ (Barber), ನೆರೆಮನೆಯವನ ಸುಂದರ ಸಂಸಾರವನ್ನು ಸರ್ವನಾಶ ಮಾಡಿದ್ದಾನೆ. ಮಕ್ಕಳನ್ನು ಕೊಲ್ಲುವುದಕ್ಕೂ ಮೊದಲು ಈತ ಅವರ ತಾಯಿಯ ಬಳಿ ಸಾಲವನ್ನೂ ಕೇಳಿ ಪಡೆದಿದ್ದ ಎಂದು ಗೊತ್ತಾಗಿದೆ.

ಈ ಜೋಡಿ ಕೊಲೆಗಳು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿದೆ. ಸ್ಥಳೀಯ ಹಿಂದೂ ನಿವಾಸಿಗಳು ಕ್ರೋಧತಪ್ತರಾಗಿದ್ದು, ಕ್ಷೌರಿಕನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಕೊಲೆ ಪ್ರಕರಣದಲ್ಲಿ ಈತನ ತಣ್ಣನೆಯ ಕ್ರೌರ್ಯದ ಆಘಾತಕಾರಿ ವಿವರಗಳು ಹೊರಬಂದಿವೆ.

ಕೊಲೆಗಾರ ಸಾಜಿದ್, ಸಂತ್ರಸ್ತರ ಮನೆಯ ಎದುರು ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದ. ಮಕ್ಕಳ ತಂದೆ ವಿನೋದ್ ಅವರಿಗೆ ಆತನ ಪರಿಚಯವಿತ್ತು. ಮಂಗಳವಾರ ಸಂಜೆ ಸಾಜಿದ್, ವಿನೋದ್‌ ಮನೆಗೆ ಭೇಟಿ ನೀಡಿದ್ದ. ಆಗ ವಿನೋದ್ ಮನೆಯಲ್ಲಿ ಇರಲಿಲ್ಲ. ವಿನೋದ್ ಅವರ ಪತ್ನಿ ಸಂಗೀತಾ ಅವರಿಗೆ, ತನ್ನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿದ್ದು, ಆಕೆಯ ಚಿಕಿತ್ಸೆಗೆ ₹5,000 ಅಗತ್ಯವಿದೆ ಎಂದು ಸಾಜಿದ್‌ ಹೇಳಿದ್ದಾನೆ. ಸಂಗೀತಾ ಪತಿ ವಿನೋದ್‌ಗೆ ಫೋನ್ ಮಾಡಿದ್ದಾಳೆ. ಹಣ ಕೊಡುವಂತೆ ವಿನೋದ್‌ ಪತ್ನಿಗೆ ಸೂಚಿಸಿದ್ದಾರೆ.

ಸಂಗೀತಾ ಹಣವನ್ನು ಸಾಜಿದ್‌ಗೆ ಕೊಟ್ಟು, ಆತನಿಗೆ ಚಹಾ ಮಾಡಲೆಂದು ಕಿಚನ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಮೂವರು ಮಕ್ಕಳ ಮೇಲೆ ದಾಳಿ ನಡೆಸಿದ್ದ. ಮೊದಲು ಸಾಜಿದ್, ವಿನೋದ್‌ನ ಹಿರಿಯ ಮಗ 11 ವರ್ಷದ ಆಯುಷ್‌ಗೆ ಮೇಲಿನ ಮಹಡಿಯಲ್ಲಿರುವ ಆತನ ತಾಯಿಯ ಬ್ಯೂಟಿ ಸಲೂನ್ ಅನ್ನು ತೋರಿಸಲು ಕೇಳಿದ್ದಾನೆ. ಹುಡುಗ ಅವನನ್ನು ಎರಡನೇ ಮಹಡಿಗೆ ಕರೆದೊಯಿದ್ದ. ಎರಡನೇ ಮಹಡಿಯಲ್ಲಿ ಸಾಜಿದ್ ಲೈಟ್ ಆಫ್ ಮಾಡಿ ಆಯುಷ್ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.

ಅಷ್ಟರಲ್ಲಿ ಆಯುಷ್‌ನ ಕಿರಿಯ ಸಹೋದರ ಅಹಾನ್ (6) ಒಳಗೆ ಬಂದಿದ್ದು, ಅಹಾನ್‌ನನ್ನು ಕೂಡ ಸಾಜಿದ್ ಹಿಡಿದು ಅದೇ ರೀತಿಯಲ್ಲಿ ಕೊಂದಿದ್ದಾನೆ. ಅದನ್ನು ಇನ್ನೊಬ್ಬ ಸಹೋದರ ಪಿಯೂಷ್ ನೋಡಿದ್ದಾನೆ. ಪಿಯೂಷ್‌ ಮೇಲೆ ಸಾಜಿದ್‌ ದಾಳಿ ಮಾಡುವಷ್ಟರಲ್ಲಿ ಏಳು ವರ್ಷದ ಆ ಮಗು ಓಡಿಹೋಗಿ ಅಡಗಿಕೊಂಡಿದ್ದಾನೆ. ಆಯುಷ್ ಮತ್ತು ಅಹಾನ್ ಸಾವನ್ನಪ್ಪಿದ್ದಾರೆ. ಪಿಯೂಷ್ ಸಣ್ಣ ಗಾಯಗಳಾಗಿವೆ.

ಇದಾದ ನಂತರ ಹೊರಗೆ ಬೈಕ್‌ನೊಂದಿಗೆ ಕಾಯುತ್ತಿದ್ದ ತನ್ನ ಸಹೋದರ ಜಾವೇದ್‌ನೊಂದಿಗೆ ಸಾಜಿದ್ ಪರಾರಿಯಾಗಿದ್ದ. ಸಾಜಿದ್ ಮತ್ತು ಜಾವೇದ್ ಇಬ್ಬರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಸಾಜಿದ್‌ನ ಬೆನ್ನು ಹತ್ತಿದ್ದು, ಆತ ಸಿಕ್ಕಿಬಿದ್ದಾಗ ಪೊಲೀಸರ ಗನ್‌ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಪೊಲೀಸರು ಗುಂಡು ಹಾರಿಸಿ ಆತನನ್ನು ಕೊಂದುಹಾಕಿದ್ದಾರೆ. ಇನ್ಸ್‌ಪೆಕ್ಟರ್‌ಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾವೇದ್ ಇನ್ನೂ ನಾಪತ್ತೆಯಾಗಿದ್ದಾನೆ.

ಸಹೋದರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೊಲೆಯ ಹಿಂದಿನ ಉದ್ದೇಶ ಇದುವರೆಗೆ ದೃಢಪಟ್ಟಿಲ್ಲ. ಸಾಜಿದ್ ಮತ್ತು ವಿನೋದ್ ನಡುವೆ ವಿವಾದ ಇದ್ದಿರಬಹುದು ಎಂದು ಊಹಿಸಲಾಗಿದೆ. ಆದರೆ ಅಂಥ ಯಾವುದೂ ಇಲ್ಲ ಎಂದು ವಿನೋದ್ ನಿರಾಕರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version