Site icon Vistara News

BJP Karnataka : ಚಾಮರಾಜನಗರಕ್ಕೆ ಶ್ರೀನಿವಾಸ್‌ ಪ್ರಸಾದ್‌ ಅಳಿಯಂದಿರ ಪೈಪೋಟಿ; ಫೈನಲ್‌ ಆಗಿದೆ ಎಂದ ವಿಜಯೇಂದ್ರ

BJP Karnataka BY Vijayendra Dr Mohan Harshavardhan

ಮೈಸೂರು: ಚಾಮರಾಜ ನಗರ ಲೋಕಸಭಾ ಕ್ಷೇತ್ರಕ್ಕೆ (Chamaraja nagara constituency) ಬಿಜೆಪಿ ಅಭ್ಯರ್ಥಿ (BJP Candidate) ಯಾರು ಎಂಬ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರ ಸಮ್ಮುಖದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿದೆ (BJP Karnataka). ಹಾಲಿ ಸಂಸದರಾಗಿರುವ ಶ್ರೀನಿವಾಸ ಪ್ರಸಾದ್‌ (Shrinivas prasad) ಅವರು ಮಾರ್ಚ್‌ 17ರಿಂದ ರಾಜಕೀಯ ನಿವೃತ್ತಿ (Political retirement) ಪಡೆಯುತ್ತಿದ್ದು, ಅವರ ಬದಲಿಗೆ ಟಿಕೆಟ್‌ ಪಡೆಯಲು ತೀವ್ರ ಪೈಪೋಟಿ ಕಾಣಿಸಿಕೊಂಡಿದೆ. ಅಚ್ಚರಿ ಎಂದರೆ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯಂದಿರಾದ ಡಾ. ಮೋಹನ್‌ (Dr. Mohan) ಮತ್ತು ಡಾ. ಹರ್ಷವರ್ಧನ್‌ (Dr. Harshavardhan) ಅವರೇ ಪ್ರಮುಖ ಹುರಿಯಾಳುಗಳು. ಇವರಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬ ಕುತೂಹಲ ಜೋರಾಗಿರುವಂತೆಯೇ ಟಿಕೆಟ್‌ ಫೈನಲ್‌ ಆಗಿದೆ ಎಂದು ಹೇಳುವ ಮೂಲಕ ಬಿ.ವೈ ವಿಜಯೇಂದ್ರ ಅಚ್ಚರಿ ಮೂಡಿಸಿದ್ದಾರೆ.

ನಮ್ಮ ಮನೆಯಲ್ಲೇ ಇಬ್ಬರಿದ್ದಾರೆ ಅಂತ ಗೊತ್ತಿರಲಿಲ್ಲ ಎಂದ ಶ್ರೀನಿವಾಸ್‌ ಪ್ರಸಾದ್‌

ಮೈಸೂರಿನಲ್ಲಿ ಗುರುವಾರ ಬೆಳಗ್ಗೆ ಮಾತನಾಡಿದ ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರು, ನನ್ನ ಇಬ್ಬರು ಅಳಿಯಂದಿರ ಜತೆಗೆ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ನನಗೆ ನನ್ನ ಅಳಿಯ ಡಾ.ಮೋಹನ್ ಟಿಕೆಟ್ ಕೇಳಿದ್ದಾನೆ ಅಂತ ಗೊತ್ತಿತ್ತು. ಹರ್ಷವರ್ಧನ್ ಕೂಡ ಟಿಕೆಟ್ ಕೇಳಿದ್ದಾನೆ ಅಂತ ಗೊತ್ತಿರಲಿಲ್ಲ. ಈಗ ನಮ್ಮ ಮನೆಯಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರಿಬ್ಬರೂ ತುಂಬಾ ಅನೋನ್ಯವಾಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆʼʼ ಎಂದು ಹೇಳಿದರು.

ಶ್ರೀನಿವಾಸ್‌ ಪ್ರಸಾದ್‌ ಅವರ ಒಬ್ಬ ಅಳಿಯ ಕಳೆದ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಮತ್ತೊಬ್ಬ ಅಳಿಯ ಡಾ. ಮೋಹನ್‌ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕಾಗಿಯೇ ತಮ್ಮ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ.

ʻʻಚಾಮರಾಜನಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ವಿಜಯೇಂದ್ರ ಅವರಿಗೆ ಹೇಳಿದ್ದೇನೆ. ಮಾರ್ಚ್ 17ರ ನಂತರ ಚುನಾವಣೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಬಿಜೆಪಿಯನ್ನು‌ ಬೆಂಬಲಿಸಿ ಎಂದು ಎಲ್ಲರನ್ನು ಕೇಳಿಕೊಳ್ಳುತ್ತೇನೆʼʼ ಎಂದು ಹೇಳಿದ ಅವರು, ಚಾಮರಾಜ ನಗರ ಕ್ಷೇತ್ರದಿಂದ ಸಚಿವ ಡಾ. ಮಹದೇವಪ್ಪ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರು ನಮ್ಮ‌ ವಿರೋಧಿಗಳು, ಅವರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ : Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ

ಸಿದ್ದರಾಮಯ್ಯಗೂ ಜಮೀರ್‌ಗೂ ವ್ಯತ್ಯಾಸವೇ ಇಲ್ಲ

ʻʻಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ. ಮೋದಿ ಸಮುದ್ರದಲ್ಲಿ ಈಜಿದ ಮನುಷ್ಯ. ಅವರಿಗೂ ಇವರಿಗೂ ಎಲ್ಲಿಯ ಹೋಲಿಕೆ? ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಕಿರುಚಾಡುತ್ತಾರೆʼʼ ಎಂದು ಹೇಳಿದ ಶ್ರೀನಿವಾಸ ಪ್ರಸಾದ್‌, ಸಿದ್ದರಾಮಯ್ಯಗೂ ಆ ಜಮೀರ್‌ಗೂ ಏನು ವ್ಯತ್ಯಾಸ ಇದೆ ಹೇಳಿ. ಇಬ್ಬರು ಸುಮ್ಮನೆ ಕೂಗುತ್ತಾರೆ. ಇವರು ಹೆರಿಗೆ ವಾರ್ಡ್ ನಲ್ಲಿ ಕಿರುಚಿದರೆ ಹೆರಿಗೆಯೇ ಆಗಿಬಿಡುತ್ತದೆ. ಆ ರೀತಿಯಲ್ಲಿ ಕೂಗುವುದನ್ನು ಕಲಿತಿದ್ದಾರೆ.ʼʼ ಎಂದರು.

ʻʻನಿರ್ಮಲಾ ಸೀತಾರಾಮನ್ ಬಗ್ಗೆ ರಾಷ್ಟ್ರಪತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಸಿದ್ದರಾಮಯ್ಯ ಬಗ್ಗೆ ಏನು ಮಾತನಾಡಲಿ? ಅವರು ಗ್ಯಾರಂಟಿಯಿಂದ ಗೆದ್ದು ಅದೇ ಗುಂಗಿನಲ್ಲಿ ಇದ್ದಾರೆ. ಮೋದಿ ಸರ್ಕಾರ ಮಾಡಿರುವ ಜನಪರ ಯೋಜನೆಗಳ ಮುಂದೆ ಇದೆಲ್ಲ ನಡೆಯುತ್ತಾ ನೋಡೋಣ.ʼʼ ಎಂದು ಶ್ರೀನಿವಾಸ ಪ್ರಸಾದ್‌ ವಾಗ್ದಾಳಿ ಮಾಡಿದರು.

ಅಭ್ಯರ್ಥಿ ಫೈನಲ್‌ ಆಗಿದೆ ಎಂದ ಬಿವೈ ವಿಜಯೇಂದ್ರ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಗಾಗಲೇ ಫೈನಲ್ ಆಗಿದೆ‌ ಎಂದು ಹೇಳಿರುವ ಬಿ.ವೈ. ವಿಜಯೇಂದ್ರ ಅವರು, ಎಲ್ಲಾ ಕ್ಷೇತ್ರಕ್ಕೂ ನಮಗೆ ಬಿಜೆಪಿ, ಕಮಲ ಮಾತ್ರ ಅಭ್ಯರ್ಥಿ. ಈ ವಿಚಾರದಲ್ಲಿ ನಮ್ಮ ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ. ಉಳಿದಂತೆ ಬೇರೆ ಯಾವ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇಲ್ಲ ಎಂದು ಹೇಳಿದರು.

ʻʻಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟ್ ಹಂಚಿಕೆಗೆ ಯಾವ ಗೊಂದಲಗಳು ಇಲ್ಲ. ಮುಂದೆಯೂ ಕೂಡ ಅದು ಉದ್ಭವ ಆಗುವುದಿಲ್ಲ. ಇವತ್ತು ಕುಮಾರಸ್ವಾಮಿ ಅಮಿತ್ ಶಾ ಅವರನ್ನು ಯಾಕೆ ಭೇಟಿ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ನಾನು ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ನಮ್ಮ ಹೈಕಮಾಂಡ್ ಭೇಟಿ ಮಾಡುತ್ತೇನೆʼʼ ಎಂದು ಹೇಳಿದ ಬಿ.ವೈ ವಿಜಯೇಂದ್ರ ಅವರು, ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಮುಂದಿನ ದಿಕ್ಸೂಚಿಯಲ್ಲ ಎಂದರು.

ಅರುಣ್‌ ಪುತ್ತಿಲ ಬೇಷರತ್‌ ಪಕ್ಷ ಸೇರ್ಪಡೆ ಎಂದ ವಿಜಯೇಂದ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಂಡಾಯವಾಗಿ ನಿಂತು ಬಿಜೆಪಿ ಸೋಲಿಗೆ ಕಾರಣರಾಗಿದ್ದ ಅರುಣ್ ಕುಮಾರ್‌ ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೇಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಹೇಳಿದ್ದೇನೆ ಎಂದರು.

ʻʻಯಾವುದೇ ಷರತ್ತುಗಳು ಬೇಡ. ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ. ನಾನು ಕೂಡ ಅಲ್ಲಿನ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದೇನೆ. ಅರುಣ್ ಪುತ್ತಿಲ ಅಷ್ಟೇ ಅಲ್ಲ, ಯಾರೇ ಬೇಷರತ್ತಾಗಿ ಪಕ್ಷಕ್ಕೆ ಬಂದರೆ ನಮ್ಮ ಸ್ವಾಗತ ಇದೆ.ʼʼ ಎಂದು ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

Exit mobile version