Site icon Vistara News

BY Vijayendra : ಸಿಎಂ ತವರಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ; ಹಳೆ ಮೈಸೂರೇ ಟಾರ್ಗೆಟ್‌

BY Vijayendra in Mysore

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ (BY Vijayendra) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ತವರಾದ ಮೈಸೂರಿಗೆ ಲಗ್ಗೆ ಇಟ್ಟಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ (CM Siddaramaiah) ಹಳೆ ಮೈಸೂರೇ ಮೈನ್‌ ಟಾರ್ಗೆಟ್‌ (Old Mysore Main Target) ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮತ್ತು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಅವರು ಸುದ್ದಿಗೋಷ್ಠಿಯನ್ನೂ ನಡೆಸಿದರು. ಎಲ್ಲ ಕಡೆಯಲ್ಲಿ ಅವರು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ದಾಳಿ ನಡೆಸಿದರು. ತನ್ನ ಮೊದಲ ಗೌರವ ಕಾರ್ಯಕರ್ತರಿಗೆ ಎಂದು ಮೊದಲ ದಿನವೇ ಸ್ಪಷ್ಟಪಡಿಸಿದ್ದ ಅವರು ಮೈಸೂರು ಮತ್ತು ಮಂಡ್ಯದಲ್ಲಿ ಬಿಜೆಪಿಯ ಬೂತ್‌ ಅಧ್ಯಕ್ಷರ ಮನೆಗೆ ಭೇಟಿ ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಅವರು ಚುನಾವಣೆಗೆ ಮೊದಲು ಜೋಡೆತ್ತುಗಳೆಂದು ಘೋಷಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಈಗ ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ ಎಂದು ಹೇಳಿದರು.

ʻʻಬಿಜೆಪಿಗೆ ಕರ್ನಾಟಕ ಸುಭದ್ರ ಕೋಟೆಯಾಗಿ ರೂಪಿಸಬೇಕು ಎಂಬುದು ನಮ್ಮ ಉದ್ದೇಶ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಬೇಕುʼʼ ಎಂದು ಹೇಳಿದ ಅವರು, ʻʻಮೈಸೂರಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ರಾಷ್ಟ್ರೀಯ ನಾಯಕರು ಗುರುತಿಸಲು, ಶಿಕಾರಿಪುರದವರು ಶಾಸಕನಾಗಿ ಮಾಡಲು ಮೈಸೂರು- ಚಾಮರಾಜನಗರ ಕಾರಣ. ಹಳೇ ಮೈಸೂರು ಭಾಗ ನನ್ನ ಪ್ರಥಮ ಆದ್ಯತೆ. ಮುಂದಿನ ಚುನಾವಣೆಗಳಲ್ಲಿ ಈ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕುʼʼ ಎಂದು ಹೇಳಿದರು.

BY Vijayendra in Mysore

ವಿಜಯೇಂದ್ರ ನೇತೃತ್ವದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂದ ಪ್ರತಾಪ್‌ಸಿಂಹ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ವಿಜಯೇಂದ್ರ ನೇತೃತ್ವದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವ ಶಕ್ತಿ ಬಿಜೆಪಿಗಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದು ಇನ್ನಷ್ಟು ಬಲ ಹೆಚ್ಚಿಸಿದೆ ಎಂದರು.

ಬೂತ್‌ ಅಧ್ಯಕ್ಷರ ಮನೆಗೆ ಭೇಟಿ, ಸನ್ಮಾನಿಸಲು ಕಾರ್ಯಕರ್ತರ ಪೈಪೋಟಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಮೈಸೂರಿನಲ್ಲಿ ಸೋಮವಾರ ವಾರ್ಡ್ ನಂಬರ್ 42 ಬೂತ್ ಅಧ್ಯಕ್ಷ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು.

BY Vijayendra in Mysore

ಈ ನಡುವೆ, ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿವೈ ವಿಜಯೇಂದ್ರ ಅವರನ್ನು ಸನ್ಮಾನಿಸಲು ಮುಗಿಬಿದ್ದರು. ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರಿಂದ ವಿಜಯೇಂದ್ರಗೆ ಹೂಗುಚ್ಚ ನೀಡಲು, ಹಾರ ತುರಾಯಿಗಳನ್ನು ಸಮರ್ಪಿಸಲು ಪೈಪೋಟಿ ನಡೆಯಿತು. ನೂಕುನುಗ್ಗಲಿನ ನಡುವೆಯೇ ವಿಜಯೇಂದ್ರಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ಇದನ್ನೂ ಓದಿ: BY Vijayendra : ಜೋಡೆತ್ತುಗಳು ಬೀದಿಯಲ್ಲಿ ಕಿತ್ತಾಡ್ತಿವೆ; ಡಿಕೆಶಿ-ಸಿಎಂ ಬಗ್ಗೆ ವಿಜಯೇಂದ್ರ ಲೇವಡಿ

ಕಾಂಗ್ರೆಸ್‌ನ ಆರು ತಿಂಗಳ ಆಡಳಿತಕ್ಕೇ ಜನ ಬೇಸತ್ತಿದ್ದಾರೆ

ಮೈಸೂರು ಭೇಟಿ ಮುಗಿಸಿ ಮಂಡ್ಯಕ್ಕೆ ಬಂದ ಬಿವೈ ವಿಜಯೇಂದ್ರ ಅವರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು. ʻʻಈ ಬಾರಿ 28 ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲಿಸಬೇಕು. ನರೇಂದ್ರ ಮೋದಿಗೆ ಒಗ್ಗಟ್ಟಾಗಿ ಎಲ್ಲಾ ನಾಯಕರು ಮೋದಿಯವರ ಕೈ ಬಲ ಪಡಿಸಬೇಕುʼʼ ಎಂದರು.

ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳಿಗೆ ಎಂತಾ ತಪ್ಪು ಮಾಡಿದ್ವಿ ಅಂತ ಜನ ಪರಿತಪಿಸ್ತಿದ್ದಾರೆ. ರೈತರ ಬಗ್ಗೆ ಕಾಂಗ್ರೆಸ್ ಗೆ ತಾತ್ಸಾರವಿದೆ. ಸಿದ್ದರಾಮಯ್ಯ ಅವರಿಗೆ ರೈತರ ಮೇಲೆ ಯಾಕೆ ಅಷ್ಟು ಕೋಪವೋ ಗೊತ್ತಿಲ್ಲ. ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ರೈತರ ಮಕ್ಕಳ ರೈತ ವಿದ್ಯಾನಿಧಿ ನಿಲ್ಲಿಸಿದ್ದಾರೆ. ಅಧಿಕಾರ ಇದೆ ಎಂದು ರೈತರನ್ನು ಅರೆಸ್ಟ್ ಮಾಡಿಸ್ತಾರೆʼʼ ಎಂದು ಹೇಳಿದರು.

ಮಂಡ್ಯದಲ್ಲಿ ಅವರು ಮಂಡ್ಯದ 162 ರ ಬೂತ್ ಅಧ್ಯಕ್ಷ ಶ್ರೀನಿವಾಸ್ ಮನೆಗೆ ಭೇಟಿ ನೀಡಿದರು. ತಮ್ಮ‌‌ ನಿವಾಸಕ್ಕೆ ಬಂದ ವಿಜಯೇಂದ್ರ ಅವರನ್ನು ದೀಪ ಬೆಳಗಿ ಬರಮಾಡಿಕೊಂಡರು ಶ್ರೀನಿವಾಸ್ ದಂಪತಿ.

Exit mobile version